ಕೆಆರ್ ಎಸ್ ಪಕ್ಷದಿಂದ ಎರಡನೇ ಹಂತದ ಜನ ಚೈತನ್ಯ ಯಾತ್ರೆ ಆರಂಭ

ದಾವಣಗೆರೆ.ಜು.೧೬: ಕೆಆರ್ ಎಸ್ ಪಕ್ಷದಿಂದ ಎರಡನೇ ಹಂತದ ಜನ ಚೈತನ್ಯ ಯಾತ್ರೆಯು  ಚಿತ್ರದುರ್ಗ ಜಿಲ್ಲೆಯಿಂದ ಆರಂಭವಾಗಿದ್ದು, ಇಂದು ದಾವಣಗೆರೆಗೆ ಆಗಮಿಸಿದೆ. ಜುಲೈ 30 ರವರೆಗೆ 16ಜಿಲ್ಲೆಗಳಲ್ಲಿ ಸಂಚರಿಸಿ, ಭ್ರಷ್ಟ,  ಹಾಗೂ ಪರಮನೀಚ ರಾಜಕಾರಣ ಕೊನೆಗಾಣಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇಂದು ದುರಾಡಳಿತ  ಮತ್ತು ದಿಕ್ಕೆಟ್ಟ ಪರಿಸ್ಥಿತಿಯಿದ್ದು, ಇದನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ 28 ದಿನಗಳ  ಕಾಲ 11ಜಿಲ್ಲೆಗಳಲ್ಲಿ ಸಂಚರಿಸಿ, ತುಮಕೂರಿನಲ್ಲಿ ಸಮಾರೋಪ ಗೊಂಡಿದೆ. ಇದೀಗ ದಾವಣಗೆರೆ ಆಗಮಿಸಿರುವ ಯಾತ್ರೆ ಹಾವೇರಿ, ಧಾರವಾಡ, ಬೆಳಗಾವಿ, ಜಿಲ್ಲೆಗಳ ಮೂಲಕ ಯಾತ್ರೆ ಸಾಗಲಿದೆ. ಜು.21 ರಂದು ನವಲಗುಂದ ಮತ್ತು  ನರಗುಂದದಲ್ಲಿ ರೈತ ಹುತಾತ್ಮರ ಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಈಗಾಗಲೇ ಹಲವು ಭ್ರಷ್ಟ ಅಧಿಕಾರಿಗಳ, ರಾಜಕಾರಣಿಗಳನ್ನು ಬಯಲಿಗೆಳೆದಿದ್ದು, ಜನಪರವಾಗಿ ಶ್ರಮಿಸುತ್ತಿರುವ ಪಕ್ಷ  ಎಂದರೆ ಕೆಆರ್ ಎಸ್ ಪಕ್ಷ ಹಾಗೂ ಲೋಕಾಯುಕ್ತ ಮಾತ್ರ ಎಂದು ಮಾತನಾಡಿಕೊಳ್ಳುವಂತಾಗಿದೆ.ಪಕ್ಷವು ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈಗಾಗಲೇ 50ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. 10, 000 ಕಾರ್ಯಕರ್ತರಿದ್ದು, ಜನರು ಸಹ ಉದಾರವಾಗಿ ದೇಣಿಗೆ ನೀಡಿ ಬೆಂಬಲಿಸಿದ್ದಾರೆ. ಪಕ್ಷದ ಬಗ್ಗೆ ಜನರು ವಿಶ್ವಾಸ ಹೊಂದಿದ್ದು, ಪಾರದರ್ಶಕವಾಗಿ  ಕಾರ್ಯ ನಿರ್ವಹಿಸಲಿದೆ ಎಂದರು.ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಯುವ ಘಟಕದ ಜಿಲ್ಲಾಧ್ಯಕ್ಷ ಡಿ.ಜಿ. ಮಾಲತೇಶ್ ಅವರನ್ನು ಸಂಭಾವ್ಯ ಅಭ್ಯರ್ಥಿ ಎಂದು ಆಯ್ಕೆ ಮಾಡಲಾಗಿದೆ. ಇನ್ನುಳಿದ ವಿಧಾನಸಭಾ ಕ್ಷೇತ್ರಗಳಿಗೆ  ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ  ಪಕ್ಷದ ಡಿ.ಜಿ. ಮಾಲತೇಶ್, ಮಂಜುನಾಥ್ ಹಳ್ಳಿಕೇರಿ, ರಘು ಜಾಣಗೆರೆ, ಅಭಿಷೇಕ್ ಹಾಗೂ ಕಾರ್ಯಕರ್ತರು ಹಾಜರಿದ್ದರು.