ಕೆಆರ್ ಆಸ್ಪತ್ರೆ ವೈಪಲ್ಯ ಸರ್ಕಾರಕ್ಕೆ ವರದಿ

ಮೈಸೂರು: ಜೂ.19:- ಬರೋಬ್ಬರಿ ಐದು ಜಿಲ್ಲೆಗಳ ಒತ್ತಡ ನಿಭಾಯಿಸುತ್ತಿರುವ ಕೃಷ್ಣರಾಜೇಂದ್ರ ಆಸ್ಪತ್ರೆಗಳಲ್ಲಿನ ಅಶುಚಿತ್ವ, ಅಸಮರ್ಪಕ ನಿರ್ವಹಣೆ ಮೊದಲಾದ ಸಮಸ್ಯೆಗಳ ಸರಮಾಲೆಯನ್ನು ಸ್ವಯಂ ಭೇಟಿ ನೀಡಿ ದರ್ಶನ ಪಡೆದ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಸಂಪೂರ್ಣ ವರದಿ ಕೊಡುವುದಾಗಿ ಹೇಳಿದರು.
ನಗರದಲ್ಲಿ ಪ್ರವಾಸ ಕೈಗೊಂಡಿದ್ದ ಅವರು ನಗರದ ಕೆ.ಆರ್. ಅಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ, ಕಲ್ಲು ಕಟ್ಟಡ, ಚೆಲುವಾಂಬ ಆಸ್ಪತ್ರೆ, ಮಕ್ಕಳ ವಿಭಾಗದ ವಾರ್ಡ್ ಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಕೆ.ಆರ್.ಆಸ್ಪತ್ರೆಯ ಒಳಗೆ ಮತ್ತು ಹೊರಗಿನ ಆವರಣದಲ್ಲಿ ಶುಚಿತ್ವ ಕಾಪಾಡದೆ ಅನೈರ್ಮಲ್ಯದ ವಾತಾವರಣ ತಾಂಡವವಾಡುತ್ತಿರುವ ಕುರಿತು ಕಣ್ಣಾರೆ ಕಂಡ ಅವರು ತೀವ್ರ ಅಸವಾಧಾನ ವ್ಯಕ್ತಪಡಿಸಿದರು. ಪುರುಷರು ಮತ್ತು ಮಹಿಳೆಯರ ವಾರ್ಡ್‍ಗಳಲ್ಲಿ ಹಾಸಿಗೆಗಳಿಗೆ ಬೆಡ್ ಶೀಟ್ ಹಾಕದೆ ಹಾಗೆ?ಯೇ ರೋಗಿಗಳನ್ನು ಮಲಗಿಸಿದ್ದರೆ, ಕೆಲವು ಹಾಸಿಗೆಗಳಲ್ಲಿ ಬೆಡ್‍ಶೀಟ್ ಕ್ಲೀನ್ ಇಲ್ಲದೆ ಇರುವುದು ಕಂಡು ಬಂದಿದ್ದರಿಂದ ವೈದ್ಯರು ಮತ್ತು ಸಿಬ್ಬಂದಿ ತರಾಟೆಗೆ ತೆಗೆದುಕೊಂಡರು.
ಕೆಲವು ಕಡೆಗಳಲ್ಲಿ ರೋಗಿಗಳಿಗೆ ಪೂರಕ ವಾತಾವರಣ ಇಲ್ಲದ ರೀತಿಯಲ್ಲಿ ಕಂಡುಬಂದಿತು. ಶೌಚಾಲಯ ಕ್ಲೀನ್ ಮಾಡದೆ ಪಕ್ಕದ ರೋಗಿಗಳಿಗೆ ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿತು.ಇದನ್ನು ಗಮನಿಸಿದ ಉಪ ಲೋಕಾಯುಕ್ತರು ಆಸ್ಪತ್ರೆಗೆ ಬಂದರೆ ದೇವಸ್ಥಾನಕ್ಕೆ ಬರುವ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ರೋಗಿಗಳು ನಮ್ಮ ಬಂಧುಗಳು ಎನ್ನುವ ಮನೋಭಾವ ಹೊಂದಿರಬೇಕು ಎಂದು ಚಾಟಿ ಬೀಸಿದರು.
ಬಳಿಕ ರೋಗಿಗಳನ್ನು ಮಾತನಾಡಿಸಿ ಆಸ್ಪತ್ರೆಯಲ್ಲಿ ಏನಾದರೂ ಸಮಸ್ಯೆ ಇದೆ?ಯೇ?ವೈದ್ಯರು, ಸಿಬ್ಬಂದಿ ಹಣ ಕೇಳುತ್ತಾರೆ?ಯೇ? ಹೊರಗಿನಿಂದ ಇಂಜೆಕ್ಷನ್, ಮಾತ್ರೆ ತರಲು ಹೇಳುತ್ತಾರೆ?ಯೇ ಎಂದು ಪ್ರಶ್ನಿಸಿದಾಗ ಕೆಲವರು ಉತ್ತರಿಸಲು ನಿರಾಕರಿಸಿದರು. ಆದರೆ, ಕೆಲವರು ವೈದ್ಯರು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಟೀ ಕಾಫಿ ತರಲು, ಸ್ಕ್ಯಾನಿಂಗ್ ಮಾಡಿಸಲು ಕರೆದುಕೊಂಡು ಹೋಗಲು ಕೇಳುತ್ತಾರೆ. ಕೆಲವರು ಹಣಕೊಡುವಂತೆ ಡಿಮ್ಯಾಂಡ್ ಮಾಡುತ್ತಾರೆ ಎಂದು ಅಳಲು ಹೇಳಿಕೊಂಡರು.
ರೋಗಿಗಳ ಸಂಬಂಧಿಕರಿಗೆ ಮಲಗಲು ವ್ಯವಸ್ಥೆ ಇಲ್ಲದೆ ತುಂಬಾ ತೊಂದರೆಯಾಗಿದೆ. ಮಗುಜತೆ ತಾಯಿ ಇರಬೇಕು. ಆದರೆ, ಹೊರಗೆ ಇರುವವರಿಗೆ ಬೇರೆ ಏನು ವ್ಯವಸ್ಥೆ ಇಲ್ಲ. ರಾತ್ರಿ ವೇಳೆ ವೈದ್ಯರು ತರಲು ಹೇಳುವ ಔಷಧಗಳನ್ನು ತರುವಂತೆ ಹೇಳಿದಾಗ ತಾಯಿ ಹೊರಗೆ ಬರಲು ಸಾಧ್ಯವಿಲ್ಲ ಎಂದು ಸಮಸ್ಯೆ ಹೇಳಿದರು.
ಬಳಿಕ ಹೆರಿಗೆ ವಾರ್ಡ್‍ಗೆ ತೆರಳಿ ಕೊಳ್ಳೇಗಾಲದ ಶೋಭಾ, ಕೆ.ಆರ್.ನಗರದ ಗೀತಾ, ಉದಯಗಿರಿಯ ಸಲ್ಮಾ ಮೊದಲಾದ ಬಾಣಂತಿಯರನ್ನು ವಿಚಾರಿಸಿದರು. ಆಸ್ಪತ್ರೆಗೆ ಯಾವಾಗ ದಾಖಲಾದ್ರಿ ಹೆರಿಗೆ ವೇಳೆ ಏನಾದರೂ ಹಣ ಕೇಳಿದರೆ, ಕೊಟ್ಟಿದ್ದರೆ ಎಷ್ಟು ಕೊಟ್ರೀ, ಏನಾದರೂ ಸಮಸ್ಯೆ ಇದ್ದರೆ ಮುಕ್ತವಾಗಿ ಹೇಳಿದರೆ ಪರಿಹಾರ ಕಲ್ಪಿಸುತ್ತೇವೆ. ಸಮಸ್ಯೆ ನುಂಗಿಕೊಂಡು ಕುಳಿತರೆ ನಿಮಗೆ ಹಣದ ಸಮಸ್ಯೆಯಾಗಲಿದೆ. ನಾವು ಬಂದಿರೋದು ಸಮಸ್ಯೆ ಪರಿಹರಿಸಲು. ಯಾವ ಸಮಸ್ಯೆ ಇಲ್ಲವೆಂದು ಹೇಳಿ ಭಯಪಡಬೇಡಿ ಎಂದಾಗ, ಇಲ್ಲ ಸರ್, ಡಾಕ್ಟರ್ ನೋಡಿಕೊಳ್ಳುತ್ತಾರೆ. ದುಬಾರಿ ಬೆಲೆಯ ಮೆಡಿಸಿನ್‍ಗಳನ್ನು ಹೊರಗೆ ತರಲು ಹೇಳುತ್ತಾರೆ. ಸಣ್ಣಪುಟ್ಟದ್ದನ್ನು ಇಲ್ಲಿಯೇ ಕೊಡುತ್ತಾರೆ ಎಂದು ನುಡಿದರು.
ಈ ವೇಳೆ ಡೀನ್ ದಾಕ್ಷಾಯಿಣಿ ಅವರು ಆಸ್ಪತ್ರೆಯಲ್ಲಿ ವೈದ್ಯರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಯ ನವೀಕರಣ ಕಾರ್ಯ ನಡೆಯುತ್ತಿರುವ ಕಾರಣ ಇರುವುದರಲ್ಲೇ ಸರಿದೂಗಿಸಿ ಚಿಕಿತ್ಸೆ ಕೊಡುವ ಕಾರ್ಯ ನಡೆಯುತ್ತಿದೆ ಎಂದರು.
ಸಿಬ್ಬಂದಿಗಳ ಬಗ್ಗೆದೂರು ಬಂದರೆ ತಕ್ಷಣವೇ ಕ್ರಮಕೈಗೊಳ್ಳುತ್ತೇವೆ. ನಾನು ಕೂಡ ರೌಂಡ್ಸ್ ಮಾಡಿ ಸಮಸ್ಯೆ ಆಲಿಸುತ್ತೇನೆ. ಏನಾದರೂ ಸಮಸ್ಯೆ ಇದ್ದಲ್ಲಿ ಮುಕ್ತವಾಗಿ ಹೇಳಲು ಅವಕಾಶವಿದೆ ಎಂದರು.
ಸರ್ಕಾರಕ್ಕೆ ವರದಿ: ಫಣೀಂದ್ರ
ಕೆ.ಆರ್.ಆಸ್ಪತ್ರೆಯಲ್ಲಿರುವ ಮೂಲ ಸೌಕರ್ಯಗಳ ಕೊರತೆ,ಪರಿಹಾರ ಕಲ್ಪಿಸುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ಹಲವು ಶಿಫಾರಸ್ಸುಗಳನ್ನು ಮಾಡಲಾಗುವುದು ಎಂದು ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಹೇಳಿದರು.
ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಆರ್.ಆಸ್ಪತ್ರೆಯಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದೆ. ಆಸ್ಪತ್ರೆಯಲ್ಲಿ ಕಾಲಕಾಲಕ್ಕೆ ನಿರ್ವಹಣೆ ಮಾಡದ ಕಾರಣ ಗೋಡೆಗೆ ನೀರು ಹರಿದು ಹಾಳಾಗಿದೆ. ಶುಚಿತ್ವವನ್ನು ಕಾಪಾಡದೆ ಇರುವುದು ಕಂಡುಬಂದಿದೆ. ಡೀನ್ ಮತ್ತು ವೈದ್ಯರು ನಿತ್ಯ ನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕು ಎಂದರು. ರೋಗಿಗಳು ಕೂರಲು ಹೊರಗೆ ಸರಿಯಾದ ವ್ಯವಸ್ಥೆ ಇಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಅಗತ್ಯವಿರುವ ಅನುದಾನ ಬಿಡುಗಡೆಗೆ ಸಲಹೆ ನೀಡಲಾಗುವುದು. ರೋಗಿಗಳ ಮತ್ತು ಸಂಬಂಧಿಕರಿಂದ ಹಣಕ್ಕೆ ಡಿಮ್ಯಾಂಡ್ ಮಾಡುವುದನ್ನು ತಪ್ಪಿಸಬೇಕು. ಈ ಬಗ್ಗೆ ಆಗಿಂದಾಗ್ಗೆ ಸಭೆ ಕರೆದು ತಿಳಿವಳಿಕೆ, ಎಚ್ಚರಿಕೆ ಕೊಡಬೇಕು ಎಂದು ನುಡಿದರು.
ಹೊರಗಿನ ಬಿಲ್ ಗೂ ಆಸ್ಪತ್ರೆ ಹಣ ಕೊಡಲಿ
ಆಸ್ಪತ್ರೆ ಭೇಟಿ ವೇಳೆ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರ ಕುಂದುಕೊರತೆಗಳ ಆಲಿಸಿದ ಉಪ ಲೋಕಾಯುಕ್ತರು ರೋಗಿಗಳಿಗೆ ಟೆಸ್ಟ್ ಗಳನ್ನು ಆಸ್ಪತ್ರೆಯಲ್ಲಿ ಮಾಡದೇ ಹೊರಗಡೆ ಟೆಸ್ಟ್ ಮಾಡಿಸುವಂತೆ ತಿಳಿಸುತ್ತಾರೆ. ಇದರಿಂದ ಬಿಪಿಎಲ್ ಕಾರ್ಡ್ ಇರುವವರು ಕೂಡ ಆಚೆ ಟೆಸ್ಟ್ ಮಾಡಿಸಿ ದುಡ್ಡು ಕೊಡಬೇಕಾಗಿರುವ ಪರಿಸ್ಥಿತಿ ಇದೆ ಎಂದು ತಿಳಿಸಿದ ಅವರು ಸಂಬಂಧಿಸಿದ ಬಿಲ್ ಗಳನ್ನು ಆಸ್ಪತ್ರೆಯವರೆ ಭರಿಸಬೇಕು ಎಂದು ತಿಳಿಸಿದರು.
ಬಾಲಕೀಯರ ಬಾಲ ಮಂದಿರಕ್ಕೆ ಭೇಟಿ
ನಂತರ ಮಹಿಳಾ ಮತ್ತು ಮಕ್ಕಳ ಇಲಾಖೆಯ ಬಾಲಕೀಯರ ಬಾಲ ಮಂದಿರ ಭೇಟಿ ನೀಡಿದ ಉಪ ಲೋಕಾಯುಕ್ತರು ಬಾಲಕಿಯರ ಮಂದಿರದಲ್ಲಿ ಉತ್ತಮವಾದ ವಾತಾವರಣ ನಿರ್ಮಾಣ ಮಾಡಬೇಕು. ಮಕ್ಕಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಒಡೆಯುವುದು, ಅಡಿಗೆಯಲ್ಲಿ ರುಚಿ ಇಲ್ಲದೇ ಇರುವುದು, ಶೌಚಾಲಯದಲ್ಲಿ ಸ್ವಚ್ಚತೆ ಇಲ್ಲದೆ ಇರುವ ವಿಷಯವನ್ನು ಮಕ್ಕಳು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಇದರ ಬಗ್ಗೆ ಅಗತ್ಯ ಕ್ರಮವಹಿಸಿ 15 ದಿನದೊಳಗೆ ವರದಿ ನೀಡುವಂತೆ ಸೂಚಿಸಿದರು.
ಲೋಕಾಯುಕ್ತ ಉಪ ನಿಬಂಧಕ ಚನ್ನಕೇಶವ ರೆಡ್ಡಿ, ಅಪರ ನಿಬಂಧಕ ಬಿ.ಶಿವಕುವಾರ್, ಲೋಕಾಯುಕ್ತ ಎಸ್‍ಪಿ ಸುರೇಶ್ ಬಾಬು, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಮ್, ಮೈಸೂರು ಮೆಡಿಕಲ್ ಕಾಲೇಜ್ ಡೀನ್ ದಾಕ್ಷಾಯಿಣಿ, ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಶ್‍ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಇನ್ನಿತರರು ಹಾಜರಿದ್ದರು.