ಕೆಆರ್‌ಎಸ್ ನಿಂದ ನೀರು ಬಿಡುಗಡೆ

ಮಂಡ್ಯ, ಜು.೨೩- ಇಂದಿನಿಂದ ಹತ್ತು ದಿನಗಳ ಕಾಲ ಕೆಆರ್‌ಎಸ್ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗಿದ್ದು,
ಮೈಸೂರು, ಮಂಡ್ಯ, ರಾಮನಗರ,ಬೆಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಗೂ ಕೆರೆಕಟ್ಟೆ ತುಂಬಿಸಲು ಸರ್ಕಾರ ಮುಂದಾಗಿದೆ.
ಇಂದಿನಿಂದ ಹತ್ತು ದಿನಗಳ ಕಾಲ ನಾಲೆ ಹಾಗೂ ನದಿಗಳ ಮುಖಾಂತರ ನೀರನ್ನು ಹರಿಸಲು ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಿ ನಿರ್ದೇಶಿಸಲಾಗಿರುತ್ತದೆ.
ಹೀಗಾಗಿ ಅಚ್ಚು ಕಟ್ಟು ಪ್ರದೇಶದ ರೈತರು ಹೊಸದಾಗಿ ಯಾವುದೇ ಬೆಳೆಗಳನ್ನು ಹಾಕದೆ, ಬಿತ್ತನೆ ಕಾರ್ಯ ಕೈಗೊಳ್ಳದಂತೆ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಮಾತ್ರ ಈ ನೀರನ್ನು ಮಿತವಾಗಿ ಬಳಸಬೇಕೆಂದು ವಿನಂತಿಸಿಕೊಳ್ಳಲಾಗಿದ್ದು, ಬೆಳೆಗಳನ್ನು ಬೆಳೆದು ನೀರಿನ ಕೊರತೆಯಿಂದ ಬೆಳೆ ಹಾನಿಯಾದಲ್ಲಿ ನೀರಾವರಿ ಇಲಾಖೆಯಾಗಲೀ ಕಾವೇರಿ ನೀರಾವರಿ ನಿಗಮವಾಗಲೀ ಹೊಣೆಯಾಗುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.
ಇನ್ನು ಕೃಷ್ಣರಾಜಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ೨೦೪ ಕೆರೆಗಳಿದ್ದು ಅವುಗಳಲ್ಲೂ ಶೇ. ೨೦ಗಿಂತಲೂ ಕಡಿಮೆ ನೀರು ಸಂಗ್ರಹವಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆಯು ಜುಲೈ ತಿಂಗಳಲ್ಲಿ ಪ್ರಾರಂಭವಾಗಿದ್ದು ಮಳೆಯ ಪ್ರಮಾಣ ತುಂಬಾ ಕಡಿಮೆ ಇರುವುದರಿಂದ ಕೃಷ್ಣರಾಜಸಾಗರ ಜಲಾಶಯದಲ್ಲಿ ಒಳಹರಿವು ಕ್ಷೀಣಿಸಿದೆ.
ಈ ಹಿನ್ನೆಲೆಯಲ್ಲಿ ಕೆರೆಕಟ್ಟೆ ತುಂಬಿಸಲು ನೀರು ಬಿಡುಗಡೆ ಮಾಡಲಾಗುತ್ತಿದ್ದು ರೈತರು ಬೆಳೆ ಬೆಳೆಯದಂತೆ ಸೂಚನೆ ನೀಡಲಾಗಿದೆ