ಕೆಆರ್‌ಎಸ್‌ನಲ್ಲಿ ೧೦೦ ಅಡಿ ನೀರು

ಬೆಂಗಳೂರು, ಜು. ೨೫- ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯ ೧೦೦ ಅಡಿಯಷ್ಟು ಭರ್ತಿಯಾಗಿದೆ.
ನಿನ್ನೆ ಒಂದೇ ದಿನ ಜಲಾಶಯಕ್ಕೆ ೫ ಅಡಿ ನೀರು ಹರಿದು ಬಂದಿದ್ದು, ೪೮ ಗಂಟೆಗಳಲ್ಲಿ ೮ ಅಡಿ ಹರಿದು ಬಂದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ೮ ಗಂಟೆ ವೇಳೆಗೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ೧೦೦ ಅಡಿ ತಲುಪಿದೆ.ಜಲಾಶಯದ ಗರಿಷ್ಠ ನೀರಿನ ಮಟ್ಟ ೧೨೪.೮೦ ಆಗಿದ್ದು, ಹೀಗೆ ಮಳೆಯಾದರೆ ಇನ್ನೊಂದು ವಾರದಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಗಳಿವೆ.ಸದ್ಯ ಡ್ಯಾಂನಲ್ಲಿ ೨೨.೮೦೯ ಟಿಎಂಸಿ ನೀರು ಶೇಖರಣೆಯಾಗಿದೆ. ೪೯.೪೫೨ ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯವನ್ನು ಕೆಆರ್‌ಎಸ್ ಜಲಾಶಯ ಹೊಂದಿದೆ.
ಕೆಆರ್‌ಎಸ್ ಜಲಾಶಯಕ್ಕೆ ಸದ್ಯ ೪೮,೦೨೫ ಕ್ಯೂಸೆಕ್ಸ್ ಒಳ ಹರಿವು ಇದ್ದು, ೫,೪೪೯ ಕ್ಯೂಸೆಕ್ಸ್ ನೀರು ಹೊರ ಹರಿವು ಇದೆ.
ಮಂಡ್ಯದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ
ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಸಂಗ್ರಹ ೧೦೦ ಅಡಿ ಆಗುತ್ತಿದ್ದಂತೆಯೇ ಮಂಡ್ಯ ಜಿಲ್ಲೆಯ ರೈತರಲ್ಲಿ ಸಂತಸ ಮನೆ ಮಾಡಿದ್ದು, ಕಳೆದ ಒಂದೂವರೆ ತಿಂಗಳಿನಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರು ಇದೀಗ ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ.