ಕೆಂಭಾವಿ‌ ಪುರಸಭೆ ಕೈ ಮಡಿಲಿಗೆ

ಕೆಂಭಾವಿ:ನ.7:ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆದು ಅಧ್ಯಕ್ಷರಾಗಿ ಮಾಸಮ್ಮ ಹಲಗಿ, ಉಪಾಧ್ಯಕ್ಷರಾಗಿ ಸೋಫಿಶರಮತ್ ನಾಸಿ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು ೨೩ ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೇಸ್ ೧೪ ಸದಸ್ಯರನ್ನು ಹೊಂದಿದ್ದು ಸ್ಪಷ್ಟ ಬಹುಮತ ಹೊಂದಿದೆ.
ಪುರಸಭೆ ಸಭಾಣಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಮಾಸಮ್ಮ ಹಲಗಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಫಿಶರಮತ್ ನಾಸಿ ಅವರು ಮಾತ್ರ ನಾಮಪತ್ರ ಸಲ್ಲಿಸಿದರು. ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರು ಅವಿರೋಧ ಆಯ್ಕೆ ಘೋಷಿಸಿದರು. ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದುನಡೆದ ಚುನಾವಣೆಯಲ್ಲಿ ಪುರಸಭೆ ಸದಸ್ಯರೆಲ್ಲರೂ ಸೇರಿ ಅವಿರೋಧ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇಷ್ಟುದಿನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಖಾಲಿಯಾಗಿದ್ದರಿಂದ ಪಟ್ಟಣದ ಅಭಿವೃದ್ಧಿಗೆ ಕೊಂಚ ತೊಡಕಾಗಿತ್ತು. ಈಗ ನೂತನ ಅಧ್ಯಕ್ಷ ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷೆ ಮಾಸಮ್ಮ ಹಲಗಿ ಹಾಗೂ ಉಪಾಧ್ಯಕ್ಷ ಸೋಫಿಶರಮತ್ ನಾಸಿ ಮಾತನಾಡಿ ಎಲ್ಲರ ಸಹಕಾರದೊಂದಿಗೆ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ವಾಮನರಾವ ದೇಶಪಾಂಡೆ, ಶಿವಮಾಂತ ಚಂದಾಪುರ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಬಗಲಿ, ವ್ಯವಸ್ಥಾಪಕ ಮಲ್ಲಿಕಾರ್ಜುನ, ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಬಸವರಾಜ ಎಸ್ ಪಾಟೀಲ ಚಿಂಚೋಳಿ, ನಿಂಗನಗೌಡ ಮರಡ್ಡಿ, ಖಾಜಾಪಟೇಲ ಕಾಚೂರ, ಯಲಗೋಡ, ರಂಗಪ್ಪ ವಡ್ಡರ ರೇವಣಸಿದ್ದಪ್ಪ ಯಾಳಗಿ ಸೇರಿದಂತೆ ಪುರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ಇದ್ದರು.