ಕೆಂಪರಂಗಪ್ಪನ ಕಟ್ಟೆ ಅಭಿವೃದ್ಧಿಯಲ್ಲಿ ಅವ್ಯವಹಾರ

ಮಧುಗಿರಿ, ಅ. ೩೧- ತಾಲ್ಲೂಕಿನ ಪುರವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಹಲವಾರು ಕೆಲಸಗಳನ್ನು ಮಾಡಿಸುತ್ತಿದ್ದು, ಒಂದು ಸಾಲಿಗೆ ಕೆಂಪ ರಂಗಪ್ಪನ ಕಟ್ಟೆ ಅಭಿವೃದ್ಧಿ ಕೂಡ ಇದ್ದು, ಈ ಹಿಂದೆ ಇಲ್ಲಿ ಕಾಮಗಾರಿಯು ಕೂಡ ಪ್ರಾರಂಭಗೊಂಡಿದ್ದು, ಇದರ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದವು.
ಆದ್ದರಿಂದ ಈ ಕಟ್ಟೆಯು ಅವ್ಯವಹಾರದಿಂದ ಕೂಡಿದೆ ಎಂದು ಪುರವರದ ಸಾಮಾಜಿಕ ಕಾರ್ಯಕರ್ತರಾದ ರಾಮಚಂದ್ರ, ಪ್ರಸನ್ನಕುಮಾರ್ ಈ ಹಿಂದೆ ಒಂಬುಡ್ಸ್ಮನ್ ಗೆ ದೂರು ಸಲ್ಲಿಸಿದ್ದರು.
ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆಗಾಗಿ ಆಗಮಿಸಿದ್ದರು. ಒಂಬುಡ್ಸ್‌ಮನ್ ವೆಂಕಟೇಶ್ವರರಾವ್ ಸ್ಥಳಕ್ಕೆ ಭೇಟಿ ನೀಡಿ ಈ ಸ್ಥಳಕ್ಕೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಇಲ್ಲಿ ಅವ್ಯವಹಾರ ಏನಾದರೂ ನಡೆದಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಸಹಾಯಕ ನಿರ್ದೇಶಕರಾದ ಮಧುಸೂದನ್, ಇಂಜಿನಿಯರ್ ದಿವ್ಯಾ, ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಶಿವರುದ್ರಪ್ಪ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.