ಕೆಂಪಯ್ಯ ನಿಧನ: ಪಕ್ಷಕ್ಕೆ ತುಂಬಲಾರದ ನಷ್ಟ: ಧ್ರುವನಾರಾಯಣ್‍

ಹನೂರು: ಮೇ.31: ಪಕ್ಷದ ನಿಷ್ಠಾವಂತ ಮುಖಂಡರಾಗಿದ್ದ ಇಕ್ಕಡಹಳ್ಳಿ ಕೆಂಪಯ್ಯ ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಮಾಜಿ ಸಂಸದ ಹಾಗೂ ರಾಜ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ತಿಳಿಸಿದರು.
ಹನೂರು ಪಟ್ಟಣದ ಕಾಂಗ್ರೇಸ್ ಕಛೇರಿಯಲ್ಲಿ ಹನೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ಇಕ್ಕಡಹಳ್ಳಿ ಕೆಂಪಯ್ಯ ನಿಧನದ ಹಿನ್ನಲೆಯಲ್ಲಿ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ದಿ.ಕೆಂಪಯ್ಯ ಹಗಲು ಇರುಳು ಎನ್ನದೇ ಪಕ್ಷದ ಏಳ್ಗೆಗಾಗಿ ಶ್ರಮಿಸುತ್ತಿದ್ದವರು, ವಿಚಾರವಾದಿ ಹಾಗೂ ಉತ್ತಮ ವಾಗ್ಮಿಯಾಗಿದ್ದ ಅವರು ಮಾಜಿ ಸಚಿವ ದಿ.ಜಿ.ರಾಜೂಗೌಡರ ಅನುಯಾಯಿ ಆಗಿದ್ದವರು. 8 ವರ್ಷಗಳ ಕಾಲ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಕೆಂಪಯ್ಯ ಅವರ ನಿಧನಕ್ಕೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದರು. ಕೆಂಪಯ್ಯ ಅವರ ಸಂಬಂಧಿ ಚಿಕ್ಕಲ್ಲೂರು ಗ್ರಾ.ಪಂ.ಅಧ್ಯಕ್ಷ ರಾಜು ನಿಧನರಾದದ್ದು ತೀವ್ರ ನೋವುಂಟು ಮಾಡಿದೆ. ಇದೇ ರೀತಿ ಜಿಲ್ಲೆಯಾದ್ಯಂತ ಕೋವಿಡ್‍ಗೆ ಪಕ್ಷದ ಕಾರ್ಯಕರ್ತರು ನಿಧನರಾಗಿದ್ದಾರೆ. ಅವರುಗಳ ಕುಟುಂಬದವರಿಗೆ ದುಃಖ ತಡೆಯುವ ಶಕ್ತಿಯನ್ನು ನೀಡಲಿ ಎಂದರು.
ಶಾಸಕ ಆರ್.ನರೇಂದ್ರ ಮಾತನಾಡಿ, ಕೆಂಪಯ್ಯ ಅವರು ಹಿರಿಯರಾಗಿ, ಮಾರ್ಗದರ್ಶಕರಾಗಿ ಪಕ್ಷದ ಒಳಿತಿಗೆ ಶ್ರಮಿಸಿದವರು. ಕಾಂಗ್ರೇಸ್ ಪಕ್ಷ, ಧೃವನಾರಾಯಣ್ ಸೇರಿದಂತೆ ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸುತ್ತಿರಲಿಲ್ಲ ಅಂತಹವರಿಗೆ ಸ್ಥಳದಲ್ಲಿಯೇ ಪ್ರತ್ತುತ್ಯರ ನೀಡುತ್ತಿದ್ದರು. ಅವರ ಮಗ ರಾಜು ಅವರನ್ನು ಗ್ರಾ.ಪಂ.ಅಧ್ಯಕ್ಷರನ್ನಾಗಿ ಮಾಡಿ ಎಂದು ಕೇಳಿಕೊಂಡರೇ ಹೊರತು ಇಲ್ಲಿಯವರೆಗೆ ತಮ್ಮ ವೈಯಕ್ತಿಕ ವಿಷಯಗಳಲ್ಲಿ ನನ್ನಿಂದ ಸಹಾಯ ಹಸ್ತ ಚಾಚಲಿಲ್ಲ. ರಾಜು ನಿಧನ ಕೂಡ ಸಹಿಸಲಾಗದು. ಕ್ಷೇತ್ರದಲ್ಲಿ ಕೋವಿಡ್‍ನಿಂದ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ನಿಧನರಾಗಿದ್ದಾರೆ ಎಲ್ಲರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದ ಅವರು ಯಾರು ಕೂಡ ಕೋವಿಡ್ ಸೋಂಕು ಧೃಢಪಟ್ಟರೇ ಪ್ರಾಥಮಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಕೆಂಪಯ್ಯ ಹಾಗೂ ಕ್ಷೇತ್ರದಲ್ಲಿ ಮೃತಪಟ್ಟವರಿಗೆ 5 ನಿಮಿಷಗಳ ಮೌನಾಚರಣೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಮಾಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಈಶ್ವರ್, ಮುಖಂಡರಾದ ಶಿವಕುಮಾರ್, ದೇವರಾಜು, ತಾ.ಪಂ.ಸದಸ್ಯ ಜವಾದ್‍ಅಹಮ್ಮದ್ ಸೇರಿದಂತೆ ಪ.ಪಂ.ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.