ಕೆಂಡಕಾರುತ್ತಿರುವ ಸೂರ್ಯ, ತತ್ತರಿಸಿದ ಜನರುತಂಪುಪಾನೀಯ, ಮರದ ನೆರಳು ಬಯಸಿದ ಜೀವಸಂಕುಲ

ಬಾಬುಅಲಿ ಕರಿಗುಡ್ಡ
ದೇವದುರ್ಗ.ಮಾ.೧೫- ತಾಲೂಕಿನಲ್ಲಿ ಬಿಸಿಲಿನಶಾಖ ದಿನೇದಿನೇ ಏರಿಕೆಯಾಗುತ್ತಿದೆ. ಬೆಂಕಿ ಉಗುಳುತ್ತಿರುವ ಸೂರ್ಯನಿಂದ ತಾಲೂಕಿನ ಜನರು ಬಸವಳಿದಿದ್ದು ಬೇಸಿಗೆ ಸೆಕೆ ತಣಿಸಲು ಜನರು ನಾನಾ ಕಸರತ್ತು ನಡೆಸಿದ್ದಾರೆ.
ತಾಲೂಕು ನೀರಾವರಿ ಪ್ರದೇಶಕ್ಕೆ ಒಳಪಟ್ಟಿದ್ದರೂ ಬೇಸಿಗೆಬಿಸಿಲು ಜನರನ್ನು ಹೈರಾಣ ಮಾಡಿದೆ. ತಣ್ಣನೆಯ ನೆಮ್ಮದಿಗಾಗಿ ಯುವಕರು ನದಿ, ಬಾವಿ, ಕೆರೆ, ಕಾಲುವೆಯಲ್ಲಿ ಈಜಾಡಿದರೆ, ಕೆಲವರು ತಂಪು ಪಾನೀಯ ಮೊರೆ ಹೋಗಿದ್ದಾರೆ. ಹಿರಿಯರು ಮರದ ನೆರಳಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಜಾನುವಾರುಗಳು ಜೀವಜಲಕ್ಕಾಗಿ ಹಳ್ಳಿಕೊಳ್ಳ, ನದಿ, ಕೆರೆಗಳಿಗೆ ಅಲೆಯುತ್ತಿವೆ.
ಈ ವರ್ಷ ಬರ ಆವರಿಸಿದ್ದರಿಂದ ಫೆಬ್ರುವರಿ ಮಧ್ಯದಿಂದಲೇ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ತಾಲೂಕಿನಲ್ಲಿ ನಿತ್ಯ ೩೬-೩೮ಸೆಲ್ಸಿಯಸ್ ಡಿಗ್ರಿ ಬಿಸಿಲು ಬೀಳುತ್ತಿದ್ದು, ಜನ ಜಾನುವಾರುಗಳನ್ನು ಸುಸ್ತಾಗಿವೆ. ಪಕ್ಷಿಗಳು ಕೂಡ ದಾಹ ನೀಗಿಸಲು ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಸಂಘ, ಸಂಸ್ಥೆಗಳು, ಸ್ವಯಂ ಸೇವಕರು ನೀರಿನ ಅರವಟಿ ಅಳವಡಿಸುವಲ್ಲಿ ಈವರ್ಷ ಮರೆತಂತೆ ಕಾಣುತ್ತಿದ್ದು ನೀರಿನ ದಾಹ ಹೆಚ್ಚಾಗಿದೆ.
ಕುಡಿವ ನೀರಿಗಾಗಿ ತಾಲೂಕು ಬಹುತೇಕ ಕೃಷ್ಣಾ ನದಿ ಹಾಗೂ ನಾರಾಯಣಪುರ ಬಲದಂಡೆ ನಾಲೆ ಅವಲಂಬಿಸಿದ್ದಾರೆ. ಈ ವರ್ಷ ಒಂದೇ ಬೆಳೆಗೆ ನೀರು ಹರಿಸಿ ಬಂದ್ ಮಾಡಿದ್ದರಿಂದ ಕಾಲುವೆಗಳು ಹನಿ ನೀರಿಲ್ಲದೆ ಬಣಗುಡುತ್ತಿವೆ. ಕೃಷ್ಣಾನದಿ ಸಂಪೂರ್ಣ ಬತ್ತಿದ್ದು ಇತ್ತೀಚೆಗೆ ೧ಟಿಎಂಸಿ ಅಡಿ ನೀರು ನದಿಗೆ ಹರಿಸಿದ್ದರೂ ಬಕಾಸುರ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ನದಿಯ ಅಲ್ಲಲ್ಲಿ ನಿಂತ ನೀರಲ್ಲಿ ಜನರು ಮಿಂದೇಳುತ್ತಿದ್ದಾರೆ. ತಿಂಥಣಿ ಬ್ರಿಡ್ಜ್, ವೀರಗೋಟ, ಲಿಂಗದಹಳ್ಳಿ, ಬಾಗೂರು, ಹೂವಿನಹೆಡಗಿ, ಜೋಳದಹೆಡಗಿ, ಕೊಪ್ಪರ, ಗಾಗಲ್, ಗೂಗಲ್ ಸೇರಿ ವಿವಿಧೆಡೆ ನದಿಗೆ ತೆರಳಿ ಈಜಾಡುತ್ತಿದ್ದಾರೆ.
ದೇವದುರ್ಗದ ವಿವಿಧ ಪುರಾತನ ಕೆರೆ, ಬಾವಿ, ಚಿಕ್ಕಹೊನ್ನಕುಣಿ, ಕಕ್ಕಲದೊಡ್ಡಿ, ಮುಷ್ಟೂರು, ಗಬ್ಬೂರು, ಗಲಗ ಸೇರಿ ವಿವಿಧೆಡೆ ಪುರಾತನ ಬಾವಿಗಳಲ್ಲಿ ಯುವಕರು ಈಜಾಡುತ್ತಿದ್ದಾರೆ. ಪಟ್ಟಣದ ವಿವಿಧೆಡೆ ತಂಪುಪಾನೀಯ ಅಂಗಡಿ ಆರಂಭವಾಗಿದ್ದರೆ, ಕಲ್ಲಂಗಡಿ, ಕರಬುಜ ಲಗ್ಗೆ ಹಾಕಿವೆ. ಮಣ್ಣಿನ ಮಡಿಕೆಗಳಿಗೂ ಬೇಡಿಕೆ ಬಂದಿದೆ. ಹಿರಿಯರು ದೇವಸ್ಥಾನ, ಮರದ ನೆರಳಿನಲ್ಲಿ ಆಶ್ರಯ ಪಡೆದು ನಿದ್ರಿಸುತ್ತಿದ್ದಾರೆ. ಸಾರ್ವಜನಿಕ ಗ್ರಂಥಾಲಯ, ಆಸ್ಪತ್ರೆ ಆವರಣ, ಅಂಬಾಭವಾನಿ ದೇವಸ್ಥಾನ, ಗೂಗಲ್ ಸೇರಿ ವಿವಿಧೆಡೆ ಇರುವ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಬೇಸಿಗೆ ಉಷ್ಣತೆ ಹೆಚ್ಚುತ್ತಿರುವ ಕಾರಣ ಜನರು ಆರೋಗ್ಯದ ಜತೆ ಕಾಳಜಿವಹಿಸಲು ವೈದ್ಯರು ಸೂಚಿಸುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅದರಲ್ಲೂ ಮಕ್ಕಳು ಹಾಗೂ ವೃದ್ಧರಲ್ಲಿ ಸಮಸ್ಯೆಯಾಗಲಿದೆ. ತಲೆನೋವು, ಪುಟ್ಟ ಮಕ್ಕಳಲ್ಲಿ ವಾಂತಿ ಬೇಧಿ, ಜ್ವರ, ಮೈಕೈನೋವು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರ ನಿರ್ವಹಣೆಗೆ ಹೆಚ್ಚಾಗಿ ನೀರು ಸೇವಿಸುವ ಜತೆಗೆ ತಂಪುಪಾನಿಯ, ಸರಳ ಆಹಾರ ಸೇವಿಸಬೇಕು. ಅನಗತ್ಯವಾಗಿ ಬಿಸಿಲಿನಲ್ಲಿ ಓಡಾಟ ಕಡಿಮೆ ಮಾಡಿ ಮನೆಯಲ್ಲೇ ರೆಸ್ಟ್ ಮಾಡಲು ವೈದ್ಯರು ಸಲಹೆ ನೀಡಿದ್ದಾರೆ.