ಕೃ.ವಿ.ವಿಶ್ವವಿದ್ಯಾಲಯಕ್ಕೆ ಸಂಶೋಧನೆ ಆಧಾರಿತ ಗುಣಮಟ್ಟ ಪ್ರಶಸ್ತಿ

ರಾಯಚೂರು.ನ.೧೧-ನ.೯ನೇ ವರ್ಚುವಲ್ ಮುಖಾಂತರ ನಡೆದ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಭರವಸೆ ಎಂಬ ರಾಷ್ಟ್ರೀಯ ಕಾರ್‍ಯಾಗಾರದಲ್ಲಿ ಕೃಷಿ ವಿಜ್ಞಾನಗಳ ವಿಶ್ವ ದ್ಯಾಲಯದಲ್ಲಿನ ಸಂಶೋಧನೆಗಳು ಮತ್ತು ಸಂಶೋಧನೆಗಳಿಗಾಗಿ ಇರುವ ಉತ್ತಮ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶಕ್ಕೆ ಶ್ರೇಷ್ಠ ಕೋಶ ಎಂದು ಪ್ರಶಸ್ತಿ ನೀಡಲಾಯಿತು.
ಈ ಕಾರ್‍ಯಾಗಾರದಲ್ಲಿ ರಾಷ್ಟ್ರಮಟ್ಟದಲ್ಲಿ ಕೇವಲ ಮೂರು ವಿಶ್ವವಿದ್ಯಾಲಯಗಳನ್ನು ಗುರುತಿಸಿದ್ದು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಸಹ ಇದರಲ್ಲಿರುವುದು ಅತ್ಯಂತ ಸಂತೋಷದ ವಿಷಯ. ಈ ಕಾರ್ಯಾಗಾರದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಅನೇಕ ಶಿಕ್ಷಣ ತಜ್ಞರು ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದರ ಕುರಿತು ವಿಶೇಷ ಉಪನ್ಯಾಸ ನೀಡಿದರು. ನೇಪಾಳದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಅಧ್ಯಕ್ಷರಾದ ಡಾ. ಭೀಮಪ್ರಸಾದ ಸುಬೇದಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರೀನ್ ಮೆಂಟರ್ ಸಂಸ್ಥೆಯ ನಿರ್ದೇಶಕರಾದ ವಿರೇಂದ್ರ ರಾವತ್ ಮತ್ತಿತರರು ಉಪಸ್ಥಿತರಿದ್ದರು. ಈ ದಿಸೆಯಲ್ಲಿ ’ಗ್ರೀನ್ ಮೆಂಟರ್‍ಸ್’ ಸಂಸ್ಥೆ, ಅಹಮ್ಮದಾಬಾದ್‌ಗೆ ಸೂಕ್ತವಾದ ಮಾಹಿತಿಯನ್ನು ನೀಡಿ ಪ್ರಶಸ್ತಿಗೆ ಭಾಜನರಾಗಲು ಸಹಕರಿಸಿದ ಸಂಶೋಧನಾ ನಿರ್ದೇಶಕರಾದ ಡಾ. ಬಿ.ಕೆ. ದೇಸಾಯಿ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕರಾದ ಡಾ. ಪ್ರಮೋದ ಕಟ್ಟಿ ಇವರನ್ನು ಕುಲಪತಿಗಳಾದ ಡಾ. ಕೆ.ಎನ್.ಕಟ್ಟಿಮನಿ ಇವರು ಅಭಿನಂದಿಸಿದರು.
ಅದೇ ರೀತಿ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿಯ ಸದಸ್ಯರು ಕೊಟ್ರಪ್ಪ ಬಿ. ಕೊರೇರ, ತ್ರಿವಿಕ್ರಮ ಜೋಶಿ, ಸುನೀಲ್ ವರ್ಮಾ, ಮಹಾಂತೇಶ ಗೌಡ ಪಾಟೀಲ್, ಜಿ ಶ್ರೀಧರ್ ಕೇಸರಹಟ್ಟಿ ಇವರುಗಳು ವಿಶ್ವಿದ್ಯಾಲಯದ ಈ ಸಾಧನೆಗೆ ಸಂತೋಷ ವ್ಯಕ್ತ ಪಡಿಸಿದರು. ಆರಂತರಿಕ ಗುಣಮಟ್ಟ ಭರವಸೆ ಕೋಶದ ಎಲ್ಲಾ ಕಾರ್‍ಯಕಾರಿ ಸಮಿತಿಯ ಸದಸ್ಯರುಗಳು ಸಹ ವಿಶ್ವವಿದ್ಯಾಲಯದ ಈ ಸಾಧನೆಯನ್ನು ಕೊಂಡಾಡಿದರು.
ಡಾ. ಕೆ.ಎನ್. ಕಟ್ಟಿಮನಿ ಕುಲಪತಿಗಳು ಇವರು ಮಾತನಾಡುತ್ತಾ, ವಿಶ್ವವಿದ್ಯಾಲಯದ ಈ ಸಾಧನೆ ಕಲ್ಯಾಣ-ಕರ್ನಾಟಕದ ಸಮಸ್ತ ರೈತ ಬಾಂಧವರಿಗೆ ಅರ್ಪಿತ ಎಂದು ತಿಳಿಸಿದರು. ಅಲ್ಲದೇ, ವಿಶ್ವವಿದ್ಯಾಲಯದ ಅಧಿಕಾರಿಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೂ ಸಹ ಈ ಸಂದರ್ಭದಲ್ಲಿ ಅವರ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.