ಕೃಷ್ಣ ನದಿ ೧.೬೦ ಲಕ್ಷ ಕ್ಯೂಸಕ್ ಪ್ರವಾಹ – ಶೀಲಹಳ್ಳಿ ಸೇತುವೆ ಮುಳುಗಡೆ ಸಾಧ್ಯ

ರಾಯಚೂರು.ಜು.೧೬- ನಾರಾಯಣಪೂರು ಜಲಾಶಯದಿಂದ ಕೃಷ್ಣಾ ನದಿಗೆ ಬಿಡುವ ನೀರಿನ ಪ್ರಮಾಣದಲ್ಲಿ ಹೆಚ್ಚಿಸಲಾಗಿದ್ದು, ಪ್ರಸ್ತುತ ನದಿಯಲ್ಲಿ ೧.೬೦ ಲಕ್ಷ ಕ್ಯೂಸಕ್ ಗೂ ಅಧಿಕ ನೀರು ಹರಿಯುತ್ತಿರುವುದರಿಂದ ಶೀಲಹಳ್ಳಿ ಸೇತುವೆ ಇಂದು ಸಂಜೆ ವೇಳೆಗೆ ಮುಳುಗಡೆಗೊಳ್ಳುವ ಸಾಧ್ಯತೆಗಳು ಸ್ಪಷ್ಟವಾಗಿವೆ.
ನಾರಾಯಣಪೂರು ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಳದಿಂದಾಗಿ ನದಿಗೆ ನೀರು ಬಿಡುವ ಪ್ರಕ್ರಿಯೆ ತೀವ್ರಗೊಳಿಸಲಾಗಿದೆ. ನದಿ ಪಾತ್ರದಲ್ಲಿರುವ ಜನರು ಹೆಚ್ಚುತ್ತಿರುವ ಪ್ರವಾಹದ ಹಿನ್ನೆಲೆಯಲ್ಲಿ ಎಚ್ಚರ ವಹಿಸಲು ಸೂಚಿಸಲಾಗಿದೆ. ಶೀಲಹಳ್ಳಿ ಜಲಾಶಯ ಮುಳುಗಡೆಯಿಂದ ಈ ಭಾಗದ ಗ್ರಾಮ ಮತ್ತು ನಡುಗಡ್ಡೆಗಳ ಸಂಪರ್ಕ ಕಳೆದು ಹೋಗಲಿದೆ. ಹೂವಿನಹೆಡಗಿ ಸೇತುವೆ ಬಳಿ ಕಳೆದ ಎರಡು ದಿನಕ್ಕಿಂತ ನೀರಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. ೨.೫೦ ಲಕ್ಷ ಕ್ಯೂಸಕ್ ನೀರು ನದಿಯಲ್ಲಿ ಪ್ರವಹಿಸಿದರೆ, ಹೂವಿನಹೆಡಗಿ ಸೇತುವೆ ಮುಳುಗಡೆಗೊಳ್ಳಲಿದೆ.
ಪ್ರಸ್ತುತ ಹೂವಿನಹೆಡಗಿ ಸೇತುವೆ ಮುಳುಗಡೆ ಸಮಸ್ಯೆಯಿಲ್ಲವಾದರೂ, ಹೆಚ್ಚುತ್ತಿರುವ ಪ್ರವಾಹದಿಂದಾಗಿ ಆತಂಕ ಮತ್ತಷ್ಟು ತೀವ್ರಗೊಳ್ಳುವಂತೆ ಮಾಡಿದೆ. ಗೂಗಲ್ ಮತ್ತು ಗುರ್ಜಾಪೂರು ಬಾಂದರುಗಳ ಗೇಟ್ ತೆರೆಯಲಾಗಿದೆ. ಭಾರೀ ಪ್ರಮಾಣದ ನೀರು ನದಿಯಲ್ಲಿ ಹರಿಯುತ್ತಿರುವುದರಿಂದ ನದಿ ಪಾತ್ರದ ಜನರು ನದಿಯ ಹತ್ತಿರಕ್ಕೆ ಹೋಗದಿರುವಂತೆ ಸೂಚಿಸಲಾಗಿದೆ. ನಡುಗಡ್ಡೆಗಳಲ್ಲಿರುವ ನಿವಾಸಿಗಳಿಗೆ ಅಗತ್ಯವಾದ ಎಲ್ಲಾ ಎಚ್ಚರಿಕೆ ನೀಡಲಾಗಿದ್ದು, ತೀವ್ರ ಪ್ರವಾಹದ ಹಿನ್ನೆಲೆಯಲ್ಲಿ ಯಾರು ಸಹ ನದಿ ದಾಟುವ ಪ್ರಯತ್ನ ಮಾಡದಿರುವಂತೆ ಸೂಚಿಸಲಾಗಿದೆ.
ಮಹಾರಾಷ್ಟ್ರದ ಮಳೆ ಪ್ರಮಾಣ ಕೊಂಚ ಕುಸಿದಿದ್ದರಿಂದ ಮೇಲ್ಭಾಗದಿಂದ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿಗೆ ಒಳ ಹರಿವು ಕಡಿಮೆಯಾದರೆ, ನದಿಯ ಪ್ರವಾಹದಲ್ಲೂ ವ್ಯತ್ಯಾಸವಾಗಲಿದೆ. ಇಲ್ಲಿವರೆಗೂ ನದಿ ಪ್ರವಾಹದಿಂದ ಯಾವುದೆ ಸಮಸ್ಯೆ ಉಂಟಾಗಿಲ್ಲ. ಆದರೆ, ನೀರಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಕಳವಳ ತೀವ್ರಗೊಂಡಿದೆ.