ಕೃಷ್ಣೆಯ ಒಡಲಿನಲ್ಲಿಗ “ಜಲ-ಜೀವ-ಕಳೆ” ವೈಭವ ಶುರು !

ಆಲಮಟ್ಟಿ:ಜು.14: ಜಲ ವೈಭವದ ಸಿಂಗಾರ ತೀರಾ ಮಾಸಿಕೊಂಡು ದಿನೇದಿನೇ ಸೊರಗುತ್ತಿದ್ದ ಕೃಷ್ಣೆಯ ಒಡಲಿನಲ್ಲಿಗ ಮತ್ತೆ “ಜಲ-ಜೀವ-ಕಳೆ” ಶುರುವಾಗಿದೆ. ಈ ಜಲಗತ ವೈಭವ ಕೃಷ್ಣೆಯ ಸೆರೆಗಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಭಾರೀ ವಿಳಂಬವಾಗಿ ಗೋಚರಿಸಿದೆ.

ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿಯಲ್ಲಿ ಈಗ ಮೆಲ್ಲಗೆ ನೀರಿನ ಜುಳುಜುಳು ಸದ್ದು ಕೇಳಿಬರುತ್ತಿದೆ. ಪರಿಣಾಮ ಜನತೆಯ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಋತುವಿನಲ್ಲಿ ಮೊದಲ ಬಾರಿಗೆ ಒಳಹರಿವಿನ ಮೂಲಕ ಜಲರಾಶಿ ದರ್ಶನ ಲಭಿಸಿದೆ. ಇದಕ್ಕೆಲ್ಲ ಮೂಲ ಕಾರಣ ನೆರೆಯ ಮಹಾರಾಷ್ಟ್ರದ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ವರ್ಷಧಾರೆ ಜಿನುಗುತ್ತಿರುವ ಹಿನ್ನಲೆಯಲ್ಲಿ ಇದೀಗ ಕೃಷ್ಣಾನದಿಯಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಕೃಷ್ಣಾ ನದಿ ತೀರದ ಅನ್ನದಾತರು ಹಾಗೂ ಜನಸಾಮಾನ್ಯರು ಅಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಮುಂಗಾರು ಪ್ರವೇಶಿಸಿ ತಿಂಗಳಾದರೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿರಲಿಲ್ಲ. ಹೀಗಾಗಿ ಜನತೆಯ ಮನದಲ್ಲಿ ಆತಂಕದ ಕಾರ್ಮೋಡ ಎಲ್ಲೆಡೆ ಆವರಿಸಿತ್ತು. ಕೃಷ್ಣೆಯ ಒಡಲು ಬರಿದಾಗುತ್ತಿದ್ದರಿಂದ ಆತಂಕದ ಭಿತ್ತಿ ಮನೆ ಮಾಡಿತ್ತು. ಕೃಷ್ಣಾನದಿ ಮೂಲಕ ಇಲ್ಲಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಜೀವಜಲ ಹರಿದು ಬರುತ್ತಿದೆ. ಸಣ್ಣ ಪ್ರಮಾಣದಲ್ಲಿ ಅಲೆಗಳು ಪುಟಿದೇದ್ದು ನಲಿದಾಡುತ್ತಿವೆ. ಅಪ್ಪಳಿಸುತ್ತಿರುವ ಅಲೆಗಳ ನಿನಾದಕ್ಕೆ ಜನ ಖುಷ್ ಗೊಂಡಿದ್ದಾರೆ. ಈ ದೃಶ್ಯವನ್ನು ನೋಡುಗರು ಹರ್ಷದಿಂದ ಕಣ್ಮನ ತಣಿಸಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ನಿಂದ ಬಂದಾಗಿದ್ದ ಆಲಮಟ್ಟಿ ಜಲಾಶಯದ ಒಳಹರಿವು ಅತಿ ತಡವಾಗಿ ಬುಧವಾರದಿಂದ ಆರಂಭಗೊಂಡಿದೆ.

ಬುಧವಾರ ಜಲಾಶಯಕ್ಕೆ 19,172 ಕ್ಯುಸೆಕ್ ನೀರು ಹರಿದು ಬಂದಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಈ ಒಳಹರಿವು ಆರಂಭಗೊಂಡಿದೆ. ಆದರೆ ಅಲ್ಲಿನ ಜಲಾಶಯದಿಂದ ಇನ್ನೂ ನೀರು ಹರಿದು ಬಿಟ್ಟಿಲ್ಲ.

ಜುಲೈ 12 ರಂದು ಒಳಹರಿವು ಆರಂಭಗೊಂಡಿದ್ದು, ಅತಿ ತಡವಾಗಿ ಆರಂಭಗೊಂಡ ಒಳಹರಿವು ಇದಾಗಿದೆ. ಇದರಿಂದಾಗಿ ಜಲಾಶಯದ ಭರ್ತಿ ವಿಳಂಬವಾಗಲಿದೆ. ಮಹಾರಾಷ್ಟ್ರದಲ್ಲಿಯೂ ಮಳೆಯ ಅಬ್ಬರ ಹೇಳಿಕೊಳ್ಳುವಷ್ಟಿಲ್ಲ, ಅಲ್ಲಿನ ಜಲಾಶಯಗಳು ಕೂಡಾ ಇನ್ನೂ ಶೇ 25 ರಷ್ಟು ಭರ್ತಿಯಾಗಿಲ್ಲ. ಹೀಗಾಗಿ ಇನ್ನೂ 15 ದಿನ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿ ನೀರಿನ ಹಾಹಾಕಾರ ಸಾಕಷ್ಟು ಇತ್ತು. ಈಗ ಅದರ ನಿವಾರಣೆಯಾದಂತಾಗಿದೆ. ಈಗ ಜುಲೈ 2024 ರವರೆಗೆ ಕುಡಿಯುವ ನೀರಿನ ಅಗತ್ಯತೆಯನ್ನು ಹಿಡಿದಿಟ್ಟುಕೊಂಡು ಹೆಚ್ಚುವರಿ ನೀರನ್ನು ಕೃಷಿಗೆ ಬಳಸಲಾಗುತ್ತದೆ.

ರೈತರ ನಿರೀಕ್ಷೆ:

ತಡವಾಗಿ ಒಳಹರಿವು ಆರಂಭಗೊಂಡರೂ ಜಲಾಶಯ ಶೀಘ್ರ ಭರ್ತಿಯತ್ತ ಸಾಗಲಿ, ಈ ಭಾಗದಲ್ಲಿ ಮುಂಗಾರು ಮಳೆಯ ಕೊರತೆಯಿದೆ. ಹೀಗಾಗಿ ಕಾಲುವೆಗೆ ಬೇಗ ನೀರು ಹರಿಯುವಂತಾಗಲಿ ಎಂಬುದು ರೈತರ ನಿರೀಕ್ಷೆಯಾಗಿದೆ.

ನೀರಿನ ಸಂಗ್ರಹದ ಮಾಹಿತಿ:

519.60 ಮೀ ಗರಿಷ್ಟ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಗುರುವಾರ 508.22 ಮೀ, ವರೆಗೆ ನೀರು ಇತ್ತು. 123.081 ಟಿಎಂಸಿ ಗರಿಷ್ಟ ಸಂಗ್ರಹದ ಜಲಾಶಯದಲ್ಲಿ 20.54ಟಿಎಂಸಿ ನೀರು ಇದೆ. 20,028 ಕ್ಯುಸೆಕ್ ಒಳಹರಿವು ಇದ್ದು, ಜಲಾಶಯದ ಹಿನ್ನೀರಿನ ಬಳಕೆ 561 ಕ್ಯುಸೆಕ್ ಹೊರಹರಿವು 98 ಇದೆ.

ಕಳೆದ ವರ್ಷ ಇದೇ ದಿನದಂದು ಆಲಮಟ್ಟಿ ಜಲಾಶಯದಲ್ಲಿ 517.28 ಮೀ, ವರೆಗೆ ನೀರು ಇತ್ತು. ಆಗ ಜಲಾಶಯಕ್ಕೆ 1,04,852 ಕ್ಯುಸೆಕ್ ನೀರು ಹರಿದು ಬರುತ್ತಿತ್ತು.

ಆಲಮಟ್ಟಿ ಜಲಾಶಯಕ್ಕೆ ಸಾವಿರಾರು ಕ್ಯುಸೆಕ್ ನೀರು ಹರಿದು ಬರುತ್ತಿದ್ದಂತೆ ಅವಳಿ ಜಿಲ್ಲೆಯ ಜನ ನದಿ ತೀರಕ್ಕೆ ಹೋಗಿ ನೋಡಲಾರಂಭಿಸಿದರು. ಅನೇಕರು ನದಿಗೆ ತೀರಕ್ಕೆ ಅಪ್ಪಳಿಸುತ್ತಿದ್ದ ಅಲೆಗಳನ್ನು ಕಂಡು ಹರ್ಷರಾದರು. ಸಂತಸದ ಅಲೆಯಲ್ಲಿ ತೇಲಿ ಧನ್ಯತೆಯ ಭಾವ ತೋರಿದರು.