ಕೃಷ್ಣಾ ಸೇತುವೆ : ಸ್ವಂತ ಖರ್ಚಿನಲ್ಲಿ ಗುಂಡಿಗೆ ಡಾಂಬರೀಕರಣ

ಪ್ರಥಮ ದರ್ಜೆ ಗುತ್ತೇದಾರ ಮುಜೀಬುದ್ದೀನ್ ಕಾರ್ಯಕ್ಕೆ ಪ್ರಶಂಸೆ
ರಾಯಚೂರು.ನ.೧೫- ರಾಜ್ಯ, ಕೇಂದ್ರ ಸರ್ಕಾರಗಳು ಮತ್ತು ಈ ಭಾಗದ ಜನಪ್ರತಿನಿಧಿಗಳು ಕೈಗೊಳ್ಳದ ಜನೋಪಯೋಗಿ ಕಾರ್ಯಕ್ರಮವನ್ನು ಪ್ರಥಮ ದರ್ಜೆ ಗುತ್ತೇದಾರ ಮುಜೀಬುದ್ದೀನ್ ಅವರು ಕೈಗೊಳ್ಳುವ ಮೂಲಕ ಸಾಮಾಜಿಕ ಕಾಳಜಿ ಪ್ರದರ್ಶಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ೧೬೭ ರಲ್ಲಿ ರಾಯಚೂರು ಮತ್ತು ಹೈದ್ರಾಬಾದ್ ಸಂಪರ್ಕ ಕಲ್ಪಿಸುವ ಕೃಷ್ಣಾ ಸೇತುವೆ ನಿರ್ವಹಣೆಯಿಲ್ಲದೇ, ಸಂಪೂರ್ಣ ಹದಗೆಟ್ಟು ರಸ್ತೆಯ ಮಧ್ಯೆ ಗುಂಡಿಗಳು ಬಿದ್ದು, ಕಬ್ಬಿಣದ ರಾಡ್ ತೇಲಿ, ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿತ್ತು. ಈ ರಸ್ತೆಯಲ್ಲಿ ಪ್ರಮುಖರು ಮತ್ತು ಜನಪ್ರತಿನಿಧಿಗಳು ಅದು ಎಷ್ಟು ಸಲ ಸುತ್ತಾಡಿದ್ದಾರೋ, ಲೆಕ್ಕವೇ ಇಲ್ಲ. ಆದರೆ, ಈ ರಸ್ತೆಯ ಸಂಚಾರಿಗಳು ಅನುಭವಿಸುತ್ತಿರುವ ತೊಂದರೆಯನ್ನು ಒಮ್ಮೆಯಾದರೂ ಮನವರಿಕೆ ಮಾಡಿಕೊಳ್ಳದೇ, ಬೇಜವಾಬ್ದಾರಿಯಲ್ಲಿದ್ದ ಜನಪ್ರತಿನಿಧಿಗಳಿಗೆ ಮುಜೀಬುದ್ದೀನ್ ಅವರ ಈ ಕಾರ್ಯ ಮುಜುಗರಕ್ಕೀಡಾಗುವಂತಾಗಿದೆ.
ಕೃಷ್ಣಾ ಸೇತುವೆ ಮೇಲೆ ಸಂಚರಿಸಿದ ಅವರು, ಅಲ್ಲಿಯ ಪರಿಸ್ಥಿತಿ ಗಮನಿಸಿ, ಕಳೆದ ನಾಲ್ಕು ದಿನಗಳ ಹಿಂದೆ ರಸ್ತೆಯ ರಾಡ್‌ನಿಂದಾಗಿ ವಾಹನವೊಂದು ಪಂಚರ್ ಆದ ಘಟನೆಯಿಂದ ಉಂಟಾದ ಸಂಚಾರ ಅಸ್ತವ್ಯಸ್ತತೆಯನ್ನು ಗಮನಿಸಿದ ಅವರು, ತಮ್ಮ ಸ್ವಂತ ಹಣದಲ್ಲಿ ಇಂದು ಕೃಷ್ಣಾ ಸೇತುವೆಯ ಗುಂಡಿಗಳಿಗೆ ಡಾಂಬರೀಕರಣಗೊಳಿಸಿ, ಸೇತುವೆ ಸಂಚಾರ ಸುಗಮಗೊಳಿಸಿದ್ದಾರೆ. ಸರ್ಕಾರವೇ ಅಸ್ತಿತ್ವದಲ್ಲಿದ್ದು, ರಸ್ತೆ ಮತ್ತು ಸೇತುವೆ ನಿರ್ವಹಣೆಗೆ ಕೋಟ್ಯಾಂತರ ರೂ. ವೆಚ್ಚ ಮಾಡುತ್ತಿದ್ದರೂ, ಕೃಷ್ಣಾ ಸೇತುವೆ ದುರಸ್ತಿ ಬಗ್ಗೆ ಯಾರು ಗಮನಿಸಿರಲಿಲ್ಲ. ಅದೆಷ್ಟೋ ಸಲ ಕಳಪೆ ಕಾಮಗಾರಿ ನಡೆಸಿ, ಹಣ ಲೂಟಿ ಮಾಡುವುದು ಬಿಟ್ಟರೇ, ಈ ಸೇತುವೆ ಸಂಚಾರಿಗಳಿಗೆ ಒಂದಷ್ಟು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಆದರೆ, ಮುಜೀಬುದ್ದೀನ್ ಅವರು ಆ ರಸ್ತೆಯ ದುಸ್ಥಿತಿ ಕಂಡು ಕೂಡಲೇ ತಮ್ಮ ಸಿಬ್ಬಂದಿಯನ್ನು ಒಂದು ಲಾರಿ ಡಾಂಬರ್ ಮಿಶ್ರಣವನ್ನು ಸೇತುವೆಗೆ ಕಳುಹಿಸಿ, ತಮ್ಮ ಸ್ವಂತ ಖರ್ಚಿನಲ್ಲಿ ಸೇತುವೆಯ ಗುಂಡಿಗಳನ್ನು ಮುಚ್ಚುವ ಮೂಲಕ ಸಾವಿರಾರು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಕಾಮಗಾರಿಯನ್ನು ಸ್ವತಃ ಉಸ್ತುವಾರಿ ವಹಿಸಿ, ನಿಗದಿತ ಅವಧಿಯಲ್ಲಿ ಗುಂಡಿ ತುಂಬುವ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಇವರ ಈ ಸಾಮಾಜಿಕ ಕಳಕಳಿ ಎಲ್ಲಾ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ.
ಕೋಟ್ಯಾಂತರ ರೂ. ಬಿಡುಗಡೆ ಬಗ್ಗೆ ಕಥೆ ಹೇಳುವ ಎಲ್ಲಾ ಹಂತದ ಜನಪ್ರತಿನಿಧಿಗಳಿಗೆ ಮುಜೀಬುದ್ದೀನ್ ಅವರ ಈ ಕಾರ್ಯ ಒಬ್ಬ ಜನಪ್ರತಿನಿಧಿಯ ಕರ್ತವ್ಯ ಮನವರಿಕೆ ಮಾಡಿದಂತಿದೆ. ಇನ್ನಾದರೂ ಇಲ್ಲಿಯ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಜನ ಸಂಚರಿಸುವ ಅದರಲ್ಲೂ ಸೇತುವೆಯ ರಸ್ತೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವ ಜವಾಬ್ದಾರಿಯನ್ನು ಪ್ರದರ್ಶಿಸುವರೇ?.