ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಟನ್ ಕಬ್ಬಿಗೆ 3000 ದರ ನಿಗದಿ : ಅಧ್ಯಕ್ಷ ಪರಪ್ಪಣ್ಣ ಸವದಿ,

ಅಥಣಿ : ನ.3: ಸಹಕಾರ ತತ್ವದ ಆಧಾರದ ಮೇಲೆ ನಿರ್ಮಾಣಗೊಂಡಿರುವ ಅಥಣಿ ತಾಲೂಕಿನ ದಿ. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ 2023 -24 ನೇ ಸಾಲಿಗೆ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂ. ನೀಡಲಾಗುವುದೆಂದು ಕಾರ್ಖಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ ಹೇಳಿದರು.
ಈ ಬಗ್ಗೆ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ದರಿಸಲಾಗಿದೆ ಎಂದು ತಿಳಿಸಿದರು.
ನಮ್ಮ ಕಾರಖಾನೆಗೆ ಸರಕಾರವು ಪ್ರತಿ ಟನ್ ಕಬ್ಬಿಗೆ ನ್ಯಾಯ ಮತ್ತು ಲಾಭದಾಯಕ ಬೆಲೆ (ಎಫ್.ಆರ್.ಪಿ.), ರೂ.3528 – (ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚ ಸೇರಿ) ಗಳನ್ನು ನಿಗದಿಪಡಿಸಿರುವರು ಇದರಲ್ಲಿ ಕಬ್ಬು ಕಟಾವು ಹಾಗೂ ಸಾಗಾಣಿಕೆ ಸರಾಸರಿ ವೆಚ್ಚ ರೂ. 795/- ಗಳಿದ್ದು, ಆದರೆ ಎಫ್.ಆರ್.ಪಿ ಪ್ರಕಾರ ಕಾರಖಾನೆಯು ಕಬ್ಬು ಪೂರೈಸಿದ ರೈತರಿಗೆ ರೂ. 2733/- ಗಳನ್ನು ಮಾತ್ರ ಪಾವತಿಸಬೇಕಾಗಿರುತ್ತದೆ. ಆದರೆ, ಕಾರಖಾನೆಯ ಆಡಳಿತ ಮಂಡಳಿಯವರು ರೈತರ ಆರ್ಥಿಕ ಏಳಿಗೆಗಾಗಿ ಸನ್ 2023-24ನೇ ಸಾಲಿಗೆ ಪೂರೈಕೆಯಾಗುವ ಪ್ರತಿ ಟನ್ ಕಬ್ಬಿಗೆ ರೂ.3000/- ಗಳಂತೆ (ಕಬ್ಬು ಕಟಾವು ಹಾಗೂ ಸಾರಿಗೆ ವೆಚ್ಚ ಹೊರತುಪಡಿಸಿ) ಬಿಲ್ಲನ್ನು ಪಾವತಿಸಲು ನಿರ್ಧರಿಸಿದೆ. ಆದುದರಿಂದ ಪ್ರಸ್ತುತ ಹಂಗಾಮಿಗೆ ರೈತ ಬಾಂಧವರು ಕಾರಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚು ರಿಕವರಿಯುಳ್ಳ ಉತ್ತಮ ಗುಣಮಟ್ಟದ ಕಬ್ಬನ್ನು ಪೂರೈಕೆ ಮಾಡಬೇಕೆಂದು ಕಾರಖಾನೆಯ ಆಡಳಿತ ಮಂಡಳಿಯವರ ಪರವಾಗಿ ಮನವಿ ಮಾಡಿದರು.
ಪ್ರಸಕ್ತ ಹಂಗಾಮಿನಲ್ಲಿ 8 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ. ಆದರೆ ಈ ವರ್ಷ ಮಳೆಯಾಗದೇ ಇರುವದರಿಂದ ಕಬ್ಬಿನ ಬೆಳೆ ಅಲ್ಪ ಪ್ರಮಾಣದಲ್ಲಿರುವುದರಿಂದ. ರೈತ ಬಾಂಧವರು ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಕಬ್ಬನ್ನು ಕಾರ್ಖಾನೆಗೆ ಕಳಿಸುವಂತೆ ಅಧ್ಯಕ್ಷ ಪರಪ್ಪಣ್ಣ ಸವದಿ ಮನವಿ ಮಾಡಿದರು.
ಈ ವೇಳೆ ಉಪಾಧ್ಯಕ್ಷ ಶಂಕರ ವಾಘಮೊಡೆ, ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಜಿ.ಎಮ್. ಪಾಟೀಲ, ನಿರ್ದೇಶಕರಾದ ಗುರುಬಸು ತೆವರಮನಿ, ಶಾಂತಿನಾಥ ನಂದೇಶ್ವರ, ಘೂಳಪ್ಪ ಜತ್ತಿ, ಸೌರಭ ಪಾಟೀಲ, ವಿಶ್ವನಾಥ ಪೂಲೀಸಪಾಟೀಲ, ರಮೇಶ ಪಟ್ಟಣ, ಮಲ್ಲಿಕಾರ್ಜುನ ಗೊಟಖಿಂಡಿ, ಸಿದ್ರಾಯ ನಾಯಿಕ, ಹಣಮಂತ ಜಗದೇವ, ಸುನಂದಾ ನಾಯಿಕ, ರುಕ್ಮಿಣಿ ಕುಲಕರ್ಣಿ, ಉಪಸ್ಥಿತರಿದ್ದರು. ಕಾರ್ಖಾನೆಯ ಕಚೇರಿಯ ಅಧಿಕ್ಷಕ ಸುರೇಶ ಠಕ್ಕಣ್ಣವರ ಸ್ವಾಗತಿಸಿ ವಂದಿಸಿದರು.