ಅಥಣಿ :ಜೂ.10: ಪರಿಸರ ರಕ್ಷಣೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಪರಿಸರ ರಕ್ಷಣೆಗೆ ಮುಂದಾಗಬೇಕು, ಗಿಡ ಮರಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಪ್ರೇಮವನ್ನು ಮೆರೆಯಬೇಕಾಗಿದೆ ಎಂದು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ ಹೇಳಿದರು.
ಅವರು ಕೃಷ್ಣಾ ಸಕ್ಕರೆ ಕಾರ್ಖಾನೆಯ ಪರಿಸರದಲ್ಲಿ ಲಕ್ಷ-ವೃಕ್ಷ ವನಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಗರ ಪ್ರದೇಶಗಳು ಬೆಳೆದಂತೆಲ್ಲಾ ಕಾರ್ಖಾನೆಗಳ ಸ್ಥಾಪನೆ ರಸ್ತೆ ಅಭಿವೃದ್ಧಿ ಹೀಗೆ ಹತ್ತು ಹಲವಾರು ಸೌಲಭ್ಯಗಳನ್ನು ಒದಗಿಸಲು ಗಿಡ ಮರಗಳನ್ನು ಕಡೆಯುತ್ತಿದ್ದಾರೆ. ಆದರೆ ಅದೇ ಪ್ರಮಾಣದಲ್ಲಿ ಸಸಿಗಳನ್ನು ನೆಡುವ ಕಾರ್ಯವಾಗಬೇಕೆಂದ ಅವರು ಈಗಲೇ ನಾವುಗಳು ಎಚ್ಚೆತ್ತುಕೊಂಡು ಪರಿಸರ ಸಂರಕ್ಷಿಸದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಎಂದೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ 156 ಎಕರೆ ಭೂ ಪ್ರದೇಶದಲ್ಲಿ ಒಂದು ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದ್ದೇವೆ, ಈಗಾಗಲೇ ನೆಟ್ಟ್ 10 ಸಾವಿರ ಸಸಿಗಳೆಲ್ಲವು ಹುಲುಸಾಗಿ ಬೆಳೆದು ಒಳ್ಳೆಯ ನೆರಳು ಗಾಳಿಯನ್ನು ನೀಡುತ್ತಿವೆ. ಪ್ರತಿಯೊಬ್ಬರು ತಮ್ಮ ಮನೆಯ ಆವರಣ, ತೋಟಗಳಲ್ಲಿ ಗೀಡಗಳನ್ನು ಬೆಳೆಯುವಂತೆ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ ಮನವಿ ಮಾಡಿದರು.
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಚೇರಿ ಅಧಿಕ್ಷಕರಾದ ಸುರೇಶ ಠಕ್ಕಣ್ಣವರ ಮಾತನಾಡಿ ಮಾನವ ಇಂದು ತನ್ನ ಸ್ವಾರ್ಥಕ್ಕಾಗಿ ಗಿಡ, ಮರಗಳನ್ನು ಕಡೆದು ವಾತಾವರಣ ಕಲುಷಿತಗೊಳಿಸುತ್ತಿದ್ದಾನೆ. ಇದರಿಂದ ಈ ಭೂಮಂಡಲದ ಮೇಲೆ ದುಷ್ಪರಿಣಾಮ ಬೀರಿ ಪರಿಸರ ಮಾಲಿನ್ಯ ಉಂಟಾಗಿ ಮಳೆಯಾಗದೇ ಬರಗಾಲದ ಛಾಯೆ ಮೂಡುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಪರಿಸರವನ್ನು ಸ್ವಚ್ಛಂದವಾಗಿಡಬೇಕೆಂದು ಕರೆ ನೀಡಿದರು.
ಈ ವೇಳೆ ಕಾರ್ಖಾನೆಯ ಅಧಿಕಾರಿಗಳಾದ ಕೆ.ಪಿ.ಓಣಿ. ಸುರೇಶ ಠಕ್ಕಣ್ಣವರ, ವ್ಹಿ.ಪಿ.ಮನಗೂಳಿ, ಡಿ.ಬಿ.ಪವಾರದೇಸಾಯಿ, ಎಸ್.ಎಸ್.ಪಾಟೀಲ. ಆರ್.ಬಿ.ಪವಾರದೇಸಾಯಿ ಸೇರಿದಂತೆ ಅನೇಕರು ಇದ್ದರು.