ಕೃಷ್ಣಾ ನೀರಿನ ಪ್ರವಾಹ ಕುಸಿತ : ಇನ್ನೂ ತೆರೆದುಕೊಳ್ಳದ ಗುರ್ಜಾಪೂರು ಗೇಟ್

ರಾಯಚೂರು.ಜು.೧೯- ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಕೃಷ್ಣಾ ಒಳ ಹರಿವಿನಲ್ಲಿ ಗಣನೀಯವಾಗಿ ಕುಸಿತ ಉಂಟಾಗಿ ನದಿಗೆ ಬಿಡುವ ನೀರಿನ ಪ್ರಮಾಣವೂ ಕಡಿತಗೊಳಿಸಲಾಗಿದೆ.
ನಿನ್ನೆ ಮುಂಜಾನೆವರೆಗೂ ೧.೭೦ ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿತ್ತು. ಆದರೆ, ಇಂದು ಬೆಳಗಿನಿಂದ ನೀರಿನ ಹೊರ ಹರಿವಿನ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಪ್ರಸ್ತುತ ನದಿಗೆ ೯೦ ರಿಂದ ೧ ಲಕ್ಷ ಕ್ಯೂಸೆಕ್ ನೀರು ಮಾತ್ರ ಬಿಡಲಾಗುತ್ತಿದೆ. ಇದರಿಂದ ನದಿಯಲ್ಲಿ ನೀರು ಹರಿಯುವ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಶೀಲಹಳ್ಳಿ ಸೇತುವೆ ಮುಳುಗಡೆಗೊಂಡಿತ್ತು. ಪ್ರವಾಹದ ಕುಸಿತದಿಂದ ಸದ್ಯ ಶೀಲಹಳ್ಳಿ ಸಂಚಾರ ಯಥಾಸ್ಥಿತಿಗೆ ಮರಳಿದೆ. ಹೂವಿನಹೆಡಗಿ ಸೇತುವೆಯ ಸಂಚಾರದ ಆತಂಕವೂ ನಿವಾರಣೆಗೊಂಡಿದೆ.
ಕಳೆದ ೯ ದಿನಗಳಿಂದ ಗುರ್ಜಾಪೂರು ಬ್ಯಾರೇಜ್ ಗೇಟ್ ತೆರೆಯುವ ಹರಸಾಹಸ ಇಂದು ಸಹ ಮುಂದುವರೆದಿದ್ದು, ಪ್ರವಾಹದಲ್ಲಿ ಭಾರೀ ಕಡಿಮೆಯಾಗಿದ್ದರಿಂದ ಗೇಟ್ ತೆರೆಯುವ ಪ್ರಕ್ರಿಯೆಗೆ ಒಂದಷ್ಟು ಹೆಚ್ಚಿನ ಅವಕಾಶಗಳು ದೊರೆತಂತಾಗಿದೆ. ೧೯೪ ಗೇಟ್ ಹೊಂದಿದ ಗುರ್ಜಾಪೂರು ಬ್ಯಾರೇಜ್‌ನಲ್ಲಿ ೯೪ ಗೇಟ್‌ಗಳು ಇನ್ನೂವರೆಗೂ ತೆರೆದುಕೊಳ್ಳದಿರುವುದರಿಂದ ಆತಂಕ ಹೆಚ್ಚುವಂತೆ ಮಾಡಿದೆ. ನದಿಯಲ್ಲಿ ನೀರಿನ ಪ್ರವಾಹ ಕಡಿಮೆಯಾಗಿದ್ದರಿಂದ ಅಧಿಕಾರಿಗಳು ಒಂದಷ್ಟು ನಿಟ್ಟುಸಿರು ಬಿಡುವಂತೆ ಮಾಡಿದೆ. ಇಲ್ಲದಿದ್ದರೆ ಪ್ರವಾಹದ ಒತ್ತಡಕ್ಕೆ ಏನಾದರೂ ಅನಾಹುತ ಸಂಭವಿಸುವ ಸಾಧ್ಯತೆಗಳ ಬಗ್ಗೆ ಕೆಪಿಸಿ ಅಧಿಕಾರಿಗಳು ಭಾರೀ ಆತಂಕಗೊಂಡಿದ್ದರು.
ಕೇರಳ ರಾಜ್ಯ ಸೇರಿದಂತೆ ಇತರೆ ತಂಡಗಳಿಂದ ಗೇಟ್ ತೆರೆಯುವ ಪ್ರಯತ್ನ ನಡೆಸಲಾಗಿತ್ತು. ೧.೭೦ ಕ್ಯೂಸೆಕ್ ನೀರಿನ ಪ್ರವಾಹದ ಸಂದರ್ಭದಲ್ಲಿ ಜೆಸಿಬಿಯಿಂದ ಗೇಟ್ ತೆರೆಯುವಂತಹ ಪ್ರಯತ್ನ ನಡೆದವು. ೧೦೦ ಗೇಟ್ ತೆರೆಯುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಇನ್ನೂ ೯೪ ಗೇಟ್ ತೆರೆಯಲು ಸಾಧ್ಯವಾಗದೆ, ಪೇಚಿಗೆ ಸಿಕ್ಕಿದ್ದಾರೆ.