
ದೇವದುರ್ಗ.ಜು.೧೮- ಮಹಾರಾಷ್ಟ್ರದಲ್ಲಿ ಸತತ ಮಳೆಯಾಗುತ್ತಿರುವ ಕಾರಣ ಆಲಮಟ್ಟಿ ಜಲಾಶಯದಿಂದ ಸುಮಾರು ೧.೬೦ ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದ ನಾರಾಯಣಪುರ ಜಲಾಶಯದ ಒಳಹರಿವು ೧.೭೫ ಲಕ್ಷ ಕ್ಯೂಸೆಕ್ಗೆ ಏರಿಕೆ ಕಂಡಿದ್ದು, ಯಥಾವತ್ತಾಗಿ ಕೃಷ್ಣಾ ನದಿಗೆ ೧.೭೫ಲಕ್ಷ ಕ್ಯೂಸೆಕ್ ನೀರು ಭಾನುವಾರ ಹರಿಸಲಾಗಿದೆ.
ತಾಲೂಕಿನಲ್ಲಿ ೫೭ಕಿಮೀ ವ್ಯಾಪ್ತಿಯಲ್ಲಿ ಹರಿಯುವ ಕೃಷ್ಣಾ ನದಿ ನೆರೆಆತಂಕ ತಂದೊಡ್ಡಿದೆ. ನದಿದಂಡೆ ಗ್ರಾಮಗಳಲ್ಲಿ ಆತಂಕ ಮನೆಮಾಡಿದ್ದು, ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬವ ಜತೆಗೆ ಎಚ್ಚರಿಕೆಯಿಂದ ಇರಲು ತಿಳುವಳಿಕೆ ಮೂಡಿಸುತ್ತಿದ್ದಾರೆ.
ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ವಿವಿಧ ಇಲಾಖೆ ಅಧಿಕಾರಿಗಳ ಜತೆಗೆ ನದಿದಂಡೆ ಗ್ರಾಮಗಳಿಗೆ ಭೇಟಿನೀಡಿ ಪರಿಸ್ಥಿತಿ ಅವಲೋಕಿಸಿದರು. ಕೊಪ್ಪರದ ಶ್ರೀಲಕ್ಷ್ಮಿನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ಅರ್ಚಕರು ಹಾಗೂ ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು. ಯಾವುದೇ ಕಾರಣಕ್ಕೂ ನದಿಗೆ ಇಳಿಯದೆ, ಸದಾ ಎಚ್ಚರಿಕೆಯಿಂದ ಇರಲು ಸೂಚಿಸಿದರು.
ನಂತರ ಗೂಗಲ್ ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್, ಶ್ರೀಅಲ್ಲಮಪ್ರಭು ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ಪೂಜಾರಿಗಳ ಜತೆ ಮಾತುಕತೆ ನಡೆಸಿದರು. ಬ್ರಿಡ್ಜ್ ಕಂ ಬ್ಯಾರೇಜ್ ಸಮರ್ಪಕವಾಗಿ ನಿರ್ವಹಿಸಲು ಸೂಚಿಸಿದರು. ದೇವಸ್ಥಾನದಲ್ಲಿ ರಾತ್ರಿವೇಳೆ ವಾಸ್ತವ್ಯ ಮಾಡದಂತೆ ತಿಳಿಸಿದರು. ಇದಕ್ಕು ಮುನ್ನ ಹೂವಿನಹೆಡಗಿ ಸೇತುವೆ, ಸೇರಿ ವಿವಿಧ ಗ್ರಾಮಗಳಿಗೆ ತೆರಳಿ ಪರಿಶೀಲಿಸಿದರು.
- ಮೀನುವಾರರು ಅತಂತ್ರ
ಕೃಷ್ಣಾ ನದಿಗೆ ಕಳೆದ ೧೦ದಿನಗಳಿಂದ ಹೆಚ್ಚುವರಿ ನೀರು ಹರಿಸಿದ್ದರಿಂದ ಮೀನುವಾರಿಕೆ ನಂಬಿ ಬದುಕು ಕಟ್ಟಿಕೊಂಡಿದ್ದ ಮೀನುವಾರರ ಕುಟುಂಬಗಳು ಕೆಲಸವಿಲ್ಲದೆ ಅತಂತ್ರವಾಗಿವೆ. ಗೂಗಲ್, ಹೂವಿನಹೆಡಗಿ, ಜೋಳದಹೆಡಗಿ, ಕೊಪ್ಪರ ಸೇರಿ ವಿವಿಧೆಡೆ ಸುಮಾರು ೪೦ಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆ ಮಾಡುತ್ತಿವೆ. ೧೦ದಿನಗಳಿಂದ ನದಿಗೆ ನೀರು ಹರಿಸಿದ್ದರಿಂದ ಮೀನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಲೆ ಎಣೆಯುವುದು ಸೇರಿ ಇತರೆ ಕಾರ್ಯ ಮಾಡುತ್ತಾ ಕುಳಿತ್ತಿದ್ದಾರೆ. ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಮೀನುವಾರರ ಜತೆ ಮಾತುಕತೆ ನಡೆಸಿ ಅರಿವು ಮೂಡಿಸುವ ಜತೆಗೆ ಧೈರ್ಯ ತುಂಬಿದರು.
ಕೋಟ್=====
ಎರಡು ದಿನಗಳಿಂದ ನೀರಿನ ಪ್ರಮಾಣ ಹೆಚ್ಚಾಗಿದ್ದು, ಎಲ್ಲ ಹಳ್ಳಿಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಾಗಿದೆ. ಮೀನುವಾರರು, ದೇವಸ್ಥಾನ ಪೂಜಾರಿಗಳು ಹಾಗೂ ಗ್ರಾಮಸ್ಥರ ಜತೆ ಮಾತುಕತೆ ನಡೆಸಿ ಎಚ್ಚರಿಕೆ ನೀಡಿದ್ದೇನೆ. ತಾಲೂಕು ಆಡಳಿತ ದಿನದ ೨೪ಗಂಟೆ ನೆರೆ ಎದುರಿಸಲು ಸಿದ್ದವಿದೆ.
ಶ್ರೀನಿವಾಸ್ ಚಾಪೇಲ್
ತಹಸೀಲ್ದಾರ್