ಕೃಷ್ಣಾ ನದಿ – ತೆರೆದುಕೊಳ್ಳದ ೯೦ ಗುರ್ಜಾಪೂರು ಬ್ಯಾರೇಜ್ ಗೇಟ್

ರಾಯಚೂರು.ಜು.೧೭- ಕೃಷ್ಣಾ ನದಿಯಲ್ಲಿ ಪ್ರವಾಹ ಪ್ರಮಾಣ ದಿನೇ ದಿನೇ ಹೆಚ್ಚುತ್ತ ಆತಂಕಕ್ಕಾರಿ ಪರಿಸ್ಥಿತಿ ನಿರ್ಮಿಸಿದೆ. ಆದರೆ, ನದಿಯ ನೀರು ಸುಗಮವಾಗಿ ಹರಿದು ಹೋಗಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಆಯಾ ಸೇತುವೆ ಮತ್ತು ಬಾಂದರುಗಳ ಅಧಿಕಾರಿಗಳು ಮಾತ್ರ ಈ ಬಗ್ಗೆ ಯಾವುದೇ ಎಚ್ಚರಿಕೆ ವಹಿಸದ ಪರಿಣಾಮ ಗುರ್ಜಾಪೂರು ಬಾಂದರೂ ಗೇಟ್ ತೆರೆಯಲು ಹರಸಾಹಸ ಮಾಡಬೇಕಾಗಿದೆ. ಗುರ್ಜಾಪೂರು ಬಾಂದರಿಗೆ ಒಟ್ಟು ೧೯೪ ಗೇಟ್‌ಗಳಿವೆ. ಇದರಲ್ಲಿ ೯೦ ಗೇಟ್‌ಗಳು ಮಾತ್ರ ತೆರೆದಿದ್ದರೆ, ಇನ್ನೂ ಉಳಿದ ಗೇಟ್ ತೆರೆಯದಿರುವುದರಿಂದ ಪ್ರವಾಹದ ನೀರು ಸುಗಮವಾಗಿ ಹರಿಯಲು ಸಮಸ್ಯೆಯಾಗಿ ಪರಿಣಮಿಸಿದೆ. ಕೆಪಿಸಿಎಲ್‌ನಿಂದ ಈ ಬಾಂದರು ನಿರ್ವಹಣೆ ಮಾಡಲಾಗುತ್ತಿದೆ. ನದಿ ಪ್ರವಾಹ ಬರುತ್ತಿರುವ ಸಂಪೂರ್ಣ ಮಾಹಿತಿ ಇದ್ದರೂ, ಪ್ರವಾಹದ ನೀರಿನ ಮಟ್ಟ ಕಡಿಮೆ ಇರುವ ಸಂದರ್ಭದಲ್ಲಿ ಗೇಟ್ ತೆರೆಯದಿರುವುದರಿಂದ ಗೇಟ್ ತೆರೆಯಲು ಭಾರೀ ಹರಸಾಹಸ ಮಾಡಬೇಕಾಗಿದೆ.
ಕಳೆದ ಮೂರು ದಿನಗಳಿಂದ ಗೇಟ್ ತೆರೆಯುವ ಪ್ರಯತ್ನಗಳು ನಡೆಯುತ್ತಲೆ ಇವೆ. ಮತ್ತೊಂದುಕಡೆ ನೀರಿನ ಪ್ರವಾಹ ಮಟ್ಟ ದಿನೇ ದಿನೇ ಹೆಚ್ಚುತ್ತಿದೆ. ಪ್ರವಾಹದ ಹಿನ್ನೆಲೆಯಲ್ಲಿ ಗೇಟ್ ತೆರೆಯುವ ಪ್ರಯತ್ನಗಳಿಗೆ ಭಾರೀ ಹಿನ್ನೆಡೆಯಾಗಿದೆ. ಅರ್ಧಕ್ಕೂ ಅಧಿಕ ಗೇಟ್‌ಗಳು ತೆರೆಯಲು ಸಾಧ್ಯವಾಗದಿರುವುದರಿಂದ ಬಾಂದರೂ ಮೇಲೆ ಪ್ರವಾಹದ ಒತ್ತಡ ಹೆಚ್ಚಲು ಕಾರಣವಾಗಿದೆ. ಇನ್ನೂ ಪ್ರವಾಹ ಹೆಚ್ಚುವ ಸಾಧ್ಯತೆಗಳಿಂದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಜೆಸಿಬಿಯೊಂದಿಗೆ ಬಿಡಾರ ಹೂಡಿ, ಗೇಟ್ ತೆರೆಯುವ ಪ್ರಯತ್ನ ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಆದರೆ, ನಿರೀಕ್ಷಿತ ಮಟ್ಟದಲ್ಲಿ ಗೇಟ್ ತೆರೆಯುವ ಕಾರ್ಯ ನಡೆಯುತ್ತಿಲ್ಲ. ಇದು ಮತ್ತಷ್ಟು ಆತಂಕಕ್ಕೆ ದಾರಿ ಮಾಡಿದೆ. ಪ್ರವಾಹ ಮತ್ತಷ್ಟು ಹೆಚ್ಚಳವಾದರೆ, ಗೇಟ್ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕಾಗುತ್ತದೆ. ಹೆಚ್ಚುತ್ತಿರುವ ಪ್ರವಾಹದ ಒತ್ತಡ ಗುರ್ಜಾಪೂರು ಸೇತುವೆಗೆ ಧಕ್ಕೆ ಮಾಡುವ ಅಪಾಯವೂ ಅಲ್ಲಗಳೆಯಲಾಗದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.