ಕಾಗವಾಡ : ಎ.12:ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಈ ಭಾಗದ ಜೀವನದಿ ಕೃಷ್ಣ ಬರಿದಾಗುತ್ತಿದ್ದಾಳೆ. ಅದಕ್ಕಾಗಿ ಮಹಾರಾಷ್ಟ್ರದ ಕೊಯ್ನಾ, ಇಲ್ಲವೇ ಕಾಳಮ್ಮವಾಡಿ ಜಲಾಶಯದಿಂದ2 ಟಿಎಂಸಿ ನೀರು ಬಿಡುಗಡೆಗೊಳಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಹಾರಾಷ್ಟ್ರ ನೀರಾವರಿ ಸಚಿವರಿಗೆ ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ತಾಲೂಕಿನ ಉಗಾರ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿಯಲ್ಲಿಯ ನೀರು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಕೃಷ್ಣಾನದಿಯಲ್ಲಿಯ ನೀರು ಬತ್ತುವ ಸಾಧ್ಯತೆ ಇದೆ. ಬೇಸಿಗೆ ಇನ್ನು ಎರಡು ತಿಂಗಳು ಇದೆ. ಅದಕ್ಕಾಗಿ ಸರ್ಕಾರ ಮುನ್ನೆಚ್ಚರಿಕೆ ವಹಿಸಿ ಸದ್ಯ ಹರಿಯುವ ನೀರಿಗೆ ಮಹಾರಾಷ್ಟ್ರದ ಕೊಯ್ನಾ ಇಲ್ಲವೇ ಕಾಳಮ್ಮನಾಡಿ ಜಲಾಶಯದಿಂದ 2 ಟಿಎಂಸಿ ನೀರು ಬಿಡುಗಡೆಗೊಳಿಸಿದರೇ ಜನ ಜಾನುವಾರುಗಳಿಗೆ ಕುಡಿಯಲು ಮತ್ತು ರೈತರ ಬೆಳೆಗಳಿಗೆ ಅನುಕೂಲವಾಗುತ್ತದೆ ಎಂದರು. ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಹಾರಾಷ್ಟ್ರದ ನೀರಾವರಿ ಸಚಿವರಿಗೆ ಮನವಿ ಮಾಡಿದ್ದೇನೆ. ಕೃಷ್ಣಾ ನದಿಯನ್ನೇ ನಂಬಿಕೊಂಡು ಬೆಳಗಾವಿ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಲಕ್ಷಾಂತರ ರೈತಾಪಿ ವರ್ಗದವರು ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಕಬ್ಬು, ಬಾಳೆ, ದ್ರಾಕ್ಷಿ, ಪಪ್ಪಾಯಿ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆದಿದ್ದಾರೆ. ಕಳೆದ 10 ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿರುವುದರಿಂದ ಬೆಳೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರದೊಂದಿಗೆ ಪಕ್ಷಾತೀತವಾಗಿ ಸಮಾಲೋಚನೆ ಮಾಡಿ ಕೃಷ್ಣಾ ನದಿಗೆ ನೀರು ಬಿಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಈ ವೇಳೆ ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಘಮೋಡೆ, ದೂದಗಂಗಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಣ್ಣಾಸಾಬ ಪಾಟೀಲ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವೀಂದ್ರ ಪೂಜಾರಿ, ರೇಖಾ ಪುಂಜಪ್ಪಗೋಳ, ಕಾಕಾ ಪಾಟೀಲ, ಚಿದಾನಂದ ಮಾಳಿ, ಗಜಾನನ ಯರಂಡೋಲಿ, ವಿನೋದ ಕೊಳೇಕರ, ಪ್ರವೀಣ ಗಾಣಿಗೇರ, ಸಂಜಯ ಭೀರಡಿ, ಅರುಣ ಗಾಣಿಗೇರ, ಪ್ರಶಾಂತ ಅಪರಾಜ, ವಿಜಯಕುಮಾರ ಅಕಿವಾಟೆ, ನಾಥಗೌಡ ಪಾಟೀಲ, ರಮೇಶ ಚೌಗುಲಾ, ಜ್ಯೋತಿಕುಮಾರ ಪಾಟೀಲ, ರಾಜು ಮದನೆ ಸೇರಿದಂತೆ ಅನೇಕರು ಇದ್ದರು.