ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಭರವಸೆ ನೀಡಿದ್ದ ಸಿಎಂ ಒಂದು ರೂ. ಅನುದಾನ ನೀಡಿಲ್ಲಃ ಯೋಗಿ ಕಲ್ಲಿನಾಥ ದೇವರು

ವಿಜಯಪುರ, ಜ.3-ಆಲಮಟ್ಟಿಗೆ ಬಾಗಿನ ಅರ್ಪಣೆ ಸಂದರ್ಭದಲ್ಲಿ ಆಗಮಿಸಿದ್ದ ಮುಖ್ಯಮಂತ್ರಿಗಳು ಕೃಷ್ಣಾ ಕೊಳ್ಳದ ಯೋಜನೆಗಳಿಗೆ 20 ಸಾವಿರ ಕೋಟಿ ರೂ.ಹೆಚ್ಚು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದರು, ಆದರೆ ಇಂದಿಗೂ ಒಂದೇ ಒಂದು ರೂ. ಅನುದಾನ ನೀಡಿಲ್ಲ ಎಂದು ಕೊಲ್ಹಾರ ದಿಗಂಬರೇಶ್ವರ ಮಠದ ಪೂಜ್ಯ ಯೋಗಿ ಕಲ್ಲಿನಾಥ ದೇವರು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಬಾಗಿನ ಅರ್ಪಣೆ ಮಡಲು ಬಂದ ಸಂದರ್ಭದಲ್ಲಿ ಸಾಕಷ್ಟು ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು, ಆಗ ನಾವು ಸಹ ಸಂತೋಷಗೊಂಡಿದ್ದೇವೆ, ಆದರೆ ಇಂದಿಗೂ ಒಂದೇ ಒಂದು ರೂ. ಅನುದಾನ ನೀಡಿಲ್ಲ, ಬಳೂತಿ ಜಾಕವೆಲ್ ಪಂಪಸೆಟ್ ಕೆಟ್ಟುಹೋಗಿದ್ದೂ ದುರಸ್ತಿಗೂ ಸಹ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಎನ್‍ಟಿಪಿಸಿಗೆ ನಮ್ಮ ರೈತರು ಜಮೀನು ನೀಡಿದ್ದಾರೆ, ಆದರೆ ವಿದ್ಯುತ್ ಮಾತ್ರ ದಕ್ಷಿಣ ಕರ್ನಾಟಕಕ್ಕೆ, ಈ ಹಿನ್ನೆಲೆಯಲ್ಲಿ ಕೂಡಲೇ ವಿಜಯಪುರ ಜಿಲ್ಲೆಗೆ ಉಚಿತವಾಗಿ 24*7 ವಿದ್ಯುತ್ ನೀಡಬೇಕು ಎಂದರು.
ರಾಗಿ ಬೆಳೆಗಾರರು ಒಂದೇ ದಿನ ಪ್ರತಿಭಟನೆ ನಡೆಸಿದರೆ ಅವರಿಗೆ ಬೆಂಬಲ ಬೆಲೆ ನೀಡಲಾಗುತ್ತದೆ, ಆದರೆ ಉ.ಕ. ಭಾಗದ ರೈತ ಹಲವಾರು ದಿನ ಪ್ರತಿಭಟನೆ ನಡೆಸಿದರೂ ವೈಜ್ಞಾನಿಕ ಬೆಂಬಲ ಬೆಲೆ ಸಿಗುವುದಿಲ್ಲ, ಇದು ತಾರತಮ್ಯವಲ್ಲವೇ ಎಂದು ಶ್ರೀಗಳು ಪ್ರಶ್ನಿಸಿದರು.
ಉತ್ತರ ಕರ್ನಾಟಕದ ನ್ಯಾಯಯುತ ಹಕ್ಕಿಗಾಗಿ ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ನಾವು ಸಂಪೂರ್ಣ ಬೆಂಬಲ ನೀಡಲಿದ್ದೇವೆ ಎಂದರು.
ಯಾವುದೇ ಪಕ್ಷವಿರಲಿ ಉತ್ತರ ಕರ್ನಾಟಕ ಭಾಗದವರು ಮುಖ್ಯಮಂತ್ರಿಯಾಗಬೇಕು, ಈ ಹಿಂದೆ ನಮ್ಮ ಜಿಲ್ಲೆಯವರು ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ನೀರಾವರಿ ಯೋಜನೆಗಳು ಸಾಕಷ್ಟು ಪ್ರಗತಿ ಹೊಂದಿದ್ದವು ಎಂದರು.
ಪಾದಯಾತ್ರೆಯ ನೇತೃತ್ವ ವಹಿಸಿರುವ ಯಾಸೀನ್ ಜವಳಿ, ಶಂಕರಗೌಡ ಬಿರಾದಾರ, ಉದಯ ಮಾಂಗ್ಲೇಕರ, ಅಜೀಜ್ ಬಾಗವಾನ್, ಇಬ್ರಾಹಿಂ ಜವಳಿ, ಮನ್ನಾನ್ ಶಾಬಾದಿ, ಸಂಗಮೇಶ ಓಲೇಕಾರ, ರೂಹ್ ಉಲ್ಲಾ ಮುಲ್ಲಾ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.