ಕೃಷ್ಣಾಪುರ ಮಠಾಧೀಶರಿಂದ ಪುರಪ್ರವೇಶ


ಉಡುಪಿ, ಜ.೧೧- ಇದೇ ಜನವರಿ ೧೮ರಂದು ನಾಲ್ಕನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು, ದೇಶಪರ್ಯಟನೆ ಮುಗಿಸಿ ನಿನ್ನೆ ಉಡುಪಿ ನಗರ ಪ್ರವೇಶಿಸಿದರು. ಈ ವೇಳೆ ಅವರನ್ನು ಮೆರವಣಿಗೆಯಲ್ಲಿ ಶ್ರೀಕೃಷ್ಣ ಮಠಕ್ಕೆ ಕರೆತಂದು ಸಂಜೆ ರಥಬೀದಿಯಲ್ಲಿ ಉಡುಪಿ ನಗರಸಭೆಯ ವತಿಯಿಂದ ಪೌರ ಸನ್ಮಾನ ನೀಡಲಾಯಿತು.
ಪೌರಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷ್ಣಾಪುರ ಶ್ರೀಗಳು, ಉಡುಪಿಯಲ್ಲಿ ಮಧ್ವಾಚಾರ್ಯರು ಹಾಗೂ ವಾದಿರಾಜರ ಚಿತ್ತಕ್ಕೆ ಬಂದ ಕಾರ್ಯಗಳು ಮಾತ್ರ ನೆರವೇರುತ್ತವೆ. ಹೀಗಾಗಿ ದೇವರ ತೃಪ್ತಿಗೆ ಪ್ರಥಮ ಆದ್ಯತೆ. ಇದರೊಂದಿಗೆ ಭಕ್ತರ ಅನುಕೂಲಕ್ಕೆ ಮನ ನೀಡಲಾಗುವುದು ಎಂದರು. ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ಪೌರ ಸನ್ಮಾನ ಸಮಾರಂಭ ನಡೆಯಿತು. ಪರ್ಯಾಯ ಸಂದರ್ಭದಲ್ಲಿ ಸಂಪ್ರದಾಯಕ್ಕೆ ಯಾವುದೇ ಚ್ಯುತಿ ಬರಬಾರದು ಎಂಬುದು ನಮ್ಮ ಪ್ರಮುಖ ಉದ್ದೇಶ. ವಾದಿರಾಜರು ಪ್ರಾರಂಭಿಸಿದ ಪರ್ಯಾಯ ವಿಧಿವಿಧಾನಗಳು ಕಳೆದ ಸುಮಾರು ೫೦೦ ವರ್ಷಗಳಿಂದ ನಡೆಯುತ್ತಿದೆ. ಇದಕ್ಕೆ ವಿರುದ್ಧವಾಗಿ ನಡೆದರೆ ದೇವದ್ರೋಹಿ ಗಳಾಗುತ್ತೇವೆ. ಹೀಗಾಗಿ ಜನತೆ ಮಠದೊಂದಿಗೆ ಸಹಕರಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಇದರಿಂದ ಲೋಕಕ್ಕೆ ಒಳಿತಾಗಬೇಕು. ಸನ್ಮಾನದಿಂದ ನಮ್ಮ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದರು. ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂಧನ ಸಚಿವ ಸುನೀಲ್ ಕುಮಾರ್ ಮಾತನಾಡಿ, ದೇಶದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಧರ್ಮ ಜಾಗೃತಿ ಕಾರ್ಯ ನಿರಂತರ ನಡೆಯುತ್ತಿದೆ ಎಂದರು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ಪರ್ಯಾಯದಲ್ಲಿ ಧಾರ್ಮಿಕ ಸಂಪ್ರದಾಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು. ವಿದ್ವಾನ್ ಡಾ. ಗುರುರಾಜ ಆಚಾರ್ಯ ನಿಪ್ಪಾಣಿ ಅಭಿನಂದನಾ ಭಾಷಣ ಮಾಡಿದರು. ಶಾಸಕ ರಘುಪತಿ ಭಟ್, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಗುರುರಾಜ್, ಸದಸ್ಯೆ ಮಾನಸಿ ಪೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪರ್ಯಾಯೋತ್ಸವ ಸಮಿತಿ ಅಧ್ಯಕ್ಷ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಇಂದಿರಾ ಪಾಲಿಟೆಕ್ನಿಕ್ ಆಡಳಿತಾಧಿಕಾರಿ ಡಾ. ಮೋಹನದಾಸ ಭಟ್ ಉಪಸ್ಥಿತರಿದ್ದರು.