ಕೃಷಿ ಸ.ಸಂಘದಲ್ಲಿ ಕೋಟ್ಯಂತರ ಲೂಟಿ, ತನಿಖೆಗೆ ಆಗ್ರಹ

ರಾಯಚೂರು,ಜ.೨೩:ಜಾಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೋಟ್ಯಂತರ ರೂ. ಲೂಟಿ ಮಾಡಿರುವ ನಿವೃತ್ತ ಕಾರ್ಯದರ್ಶಿ ವೀರಭದ್ರಪ್ಪ ಚೆಂಚರಕಿ ಅವರ ವಿರುದ್ಧ ವಿಶೇಷ ತನಿಖೆ ನಡೆಸಿ ವಂಚನೆ ಪ್ರಕರಣ ದಾಖಲಿಸಬೇಕೆಂದು ರೈತ ಸಹಕಾರ ಸಂಘಗಳ ಸಂರಕ್ಷಣೆ ಹೋರಾಟ ಸಮಿತಿ ಆಗ್ರಹಿಸಿದೆ.
ಜಾಲಹಳ್ಳಿ ಕೃಷಿಪತ್ತಿನ ನಿವೃತ್ತ ಕಾರ್ಯದರ್ಶಿ ವೀರಭದ್ರಪ್ಪ ಚೆಂಚರಕಿ ಸೇವಾವಧಿ ಪೂರ್ಣಗೊಂಡಿದ್ದರೂ ಒಂದು ವರ್ಷ ಹೆಚ್ಚುವರಿ ಅವಧಿ ಅಧಿಕಾರದಲ್ಲಿ ಮುಂದುವರೆದು ಆಡಳಿತ ಮಂಡಳಿಯ ಗಮನಕ್ಕೆ ತರದೆ ಮಾಸಿಕ ೪೦ ಸಾವಿರ ರೂ.ಗಳಂತೆ ಒಂದು ವರ್ಷಕ್ಕೆ ೪ ಲಕ್ಷ ೮೦ ಸಾವಿರ ರೂ.ಗಳನ್ನು ವೇತನ ರೂಪದಲ್ಲಿ ಪಡೆದುಕೊಂಡಿರುವುದು ದಾಖಲೆಗಳಿಂದ ಸಾಬೀತಾಗಿದೆ. ಉಳಿದಂತೆ ಸಹಕಾರ ಸಂಘದಲ್ಲಿ ಗ್ರಾಚ್ಯುಟಿ ಅನುದಾನವನ್ನು ಕಾರ್ಯಕಾರಿ ಮಂಡಳಿ ಶರ ಧಿಕ್ಕರಿಸಿ ೧೩,೭೪,೬೩೬ ರೂ.ಗಳನ್ನು ತಮ್ಮ ಮಗನ ಖಾತೆಗಳ ಮೂಲಕ ಆರ್‌ಡಿಸಿಸಿ ಬ್ಯಾಂಕ್ ದೇವದುರ್ಗ ಖಾತೆಯಿಂದ ಪಾವತಿಸಿಕೊಂಡಿದ್ದಾರೆಂದು ಮುಂಡರಗಿ ಸಹಕಾರ ಸಂಘದ ಪ್ರಧಾನ ಸಂಚಾಲಕ ಹಾಗೂ ಉಪಾಧ್ಯಕ್ಷ ಮಲ್ಲಯ್ಯಕಟ್ಟಿಮನ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ದೇವದುರ್ಗ ತಾಲ್ಲೂಕಿನ ಸಹಕಾರ ಸಂಘಗಳು ನಿಯಮಬಾಹಿರ ಕಾರ್ಯನಿರ್ವಹಿಸುತ್ತಿರುವ ಕುರಿತು ಸಹಕಾರ ಸಂಘಗಳ ನಿಬಂಧಕರಿಗೆ ದೂರು ಸಲ್ಲಿಸಿದ್ದರೂ ವಿಚಾರಣೆ ನಡೆಸದೆ ತಪ್ಪಿತಸ್ಥರನ್ನು ರಕ್ಷಿಸಲು ಹುನ್ನಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಹಾಯಕ ನಿಬಂಧಕ ಶೇಖ್‌ಹುಸೇನ್ ಮತ್ತು ತಾಲ್ಲೂಕು ವಿಸ್ತರಣಾಧಿಕಾರಿ ರಾಜು ಅವರ ವಿರುದ್ಧ ತನಿಖೆ ನಡೆಸಿ ಅಮಾನತು ಮಾಡಬೇಕೆಂದು ಮಲ್ಲಯ್ಯ ಒತ್ತಾಯಿಸಿದರು.
ವೀರಭದ್ರಪ್ಪ ಚೆಂಚರಕಿ ಅವರ ವಿರುದ್ಧ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕ ಕೆ.ಎಸ್ ನಾಡಗೌಡ ಇವರಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಜಾರಿಯಾಗಿಲ್ಲ. ತಕ್ಷಣ ಸಹಕಾರ ಸಂಘದ ಹಣ ಲೂಟಿ ಮಾಡಿರುವ ವೀರಭದ್ರಪ್ಪ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ ಸಹಕಾರಿ ಸಂಘಗಳನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಾಲಹಳ್ಳಿ ಸಹಕಾರಿ ಸಂಘದ ಹಾಲಿ ನಿರ್ದೇಶಕ ಕೆ.ಎಸ್ ನಾಡಗೌಡ, ದೇವದುರ್ಗ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಹಸಂಚಾಲಕ ಬಸವರಾಜ ನಾಯಕ ಇದ್ದರು.