ಕೃಷಿ ಸಾಲ ವಿತರಿಸಿ ಸೊರಗಿರುವ ಕೃಷಿ ವಲಯ ಉತ್ತೇಜಿಸಿ: ಜಿಲ್ಲಾಧಿಕಾರಿ ರಾಜೇಂದ್ರ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.16:- ತೀವ್ರ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದು, ಬ್ಯಾಂಕುಗಳು ಒತ್ತಾಯ ಪೂರ್ವಕವಾಗಿ ರೈತರಿಂದ ಸಾಲ ವಸೂಲಿ ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧÀವಾರ ಮೈಸೂರು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ನಡೆದ ಜಿಲ್ಲಾ ಬ್ಯಾಂಕುಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕುಗಳು ರೈತರ ಮೇಲೆ ಸಿಂಪತಿ ಹೊಂದಿರಬೇಕು. ಈಗಾಗಲೇ ಎಲ್ಲಾ ರೈತರು ತೀವ್ರ ಬರಗಾಲದಿಂದ ತತ್ತರಿಸಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾಲ ಪಡೆದ ರೈತರಿಂದ ಬ್ಯಾಂಕುಗಳು ಒತ್ತಾಯ ಪೂರ್ವಕವಾಗಿ ಸಾಲ ವಸೂಲಿ ಮಾಡುವುದನ್ನು ಸಧÀ್ಯಕ್ಕೆ ನಿಲ್ಲಿಸಬೇಕು ಎಂದು ಬ್ಯಾಂಕುಗಳ ಅಧಿಕಾರಿಗಳಿಗೆ ಸೂಚಿಸಿದರು.
ಜತೆಗೆ ಕೃಷಿ ಸಾಲವನ್ನು ಹೆಚ್ಚಿನ ರೀತಿಯಲ್ಲಿ ವಿತರಿಸುವ ಮೂಲಕ ಸೊರಗಿರುವ ಕೃಷಿ ವಲಯವನ್ನು ಮತ್ತಷ್ಟು ಉತ್ತೇಜಿಸುವ ಕೆಲಸ ಮಾಡಬೇಕು ಎಂದರು.
ಐಎಫ್‍ಎಸ್‍ಸಿ ಕೋಡ್ ಸಮಸ್ಯೆ: ರಾಜ್ಯ ಸರ್ಕಾರ ಇತ್ತೀಚೆಗೆ ಎಲ್ಲಾ ರೈತರಿಗೂ ಬರ ಪರಿಹಾರ ಬಿಡುಗಡೆ ಮಾಡಿದ್ದು, ಇದರಲ್ಲಿ 2 ಸಾವಿರಕ್ಕೂ ಹೆಚ್ಚು ರೈತರಿಗೆ ಪರಿಹಾರ ಸಂದಾಯವಾಗಿಲ್ಲ. ಕೆಲ ಬ್ಯಾಂಕುಗಳ ವಿಲೀನದಿಂದಾಗಿ 2 ಸಾವಿರಕ್ಕೂ ಹೆಚ್ಚು ಐಎಫ್‍ಎಸ್‍ಸಿ ಕೋಡ್‍ಗಳು ಸಮಸ್ಯೆಯಾಗಿದೆ. ಪರಿಣಾಮ ಪರಿಹಾರ ವಿತರಣೆಯಾಗಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ರಾಜೇಂದ್ರ, ಶ್ರೀಘ್ರವೇ ಆಯಾ ಬ್ಯಾಂಕುಗಳು ತಮ್ಮ ವ್ಯಾಪ್ತಿಯ ರೈತರ ಮಾಹಿತಿ ಪಡೆದು ಹೊಸ ಅಕೌಂಟ್ ತೆರೆದು ಪರಿಹಾರ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಹೇಳಿದರು.
ಕೃಷಿ, ಶಿಕ್ಷಣ, ಕೈಗಾರಿಕೆಗೆ ಸಾಲ ನೀಡಿ: ಬ್ಯಾಂಕುಗಳು ಆದ್ಯತೆ ಮೇರೆಗೆ ಕೃಷಿ, ಶಿಕ್ಷಣ ಹಾಗೂ ಕೈಗಾರಿಕಾ ವಲಯಕ್ಕೆ ಸಾಲ ನೀಡಬೇಕು. ವೃತ್ತಿಪರ ಕೋರ್ಸ್ ಮಾಡುವವರಿಗೆ, ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಸಾಲ ನೀಡಬೇಕು. ಈ ಮೂರು ವಲಯಕ್ಕೆ ಸಾಲ ನೀಡುವುದರಿಂದ ಅಭಿವೃದ್ಧಿಗೆ ಕೊಡುಗೆ ನೀಡಿದಂತಾಗಲಿದೆ ಎಂದರು.
ಹೊಸ ಬ್ಯಾಂಕ್ ತೆರೆಯಿರಿ: ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಬ್ಯಾಂಕಿಂಗ್ ಸೇವೆ ವಿಸ್ತರಿಸುವ ಅಗತ್ಯವಿದ್ದು, 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮದಲ್ಲಿ ಬ್ಯಾಂಕ್ ಶಾಖೆ ತೆರೆಯಬೇಕು. ಈ ಮೂಲಕ ಪ್ರತಿಯೊಬ್ಬರೂ ಬ್ಯಾಂಕಿನ ಸೇವೆ ಪಡೆದುಕೊಳ್ಳುವಂತೆ ಮಾಡಬೇಕು ಎಂದರು.
ಕನ್ನಡ ಅನುಷ್ಠಾನ ಕಡ್ಡಾಯ: ಜಿಲ್ಲೆಯ ಹಲವು ಬ್ಯಾಂಕುಗಳಲ್ಲಿ ಕನ್ನಡ ಅನುಷ್ಠಾನ ಸಮರ್ಪಕವಾಗಿಲ್ಲ ಎಂಬ ದೂರುಗಳಿವೆ. ಆಯಾ ಬ್ಯಾಂಕಿನ ವ್ಯವಸ್ಥಾಪಕರು ಈ ಬಗ್ಗೆ ಗಮನ ಹರಿಸಬೇಕು. ಕಡ್ಡಾಯವಾಗಿ ಕನ್ನಡ ಅನುಷ್ಠಾನ ಮಾಡಬೇಕು. ಬಹಳಷ್ಟು ರೈತರು ಮತ್ತು ಜನಸಾಮಾನ್ಯರಿಗೆ ಇಂಗ್ಲೀಷ್, ಹಿಂದಿ ಬರುವುದಿಲ್ಲ. ಹಾಗಾಗಿ ಗ್ರಾಹಕರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದು ಹೇಳಿದರು.
ನಬಾರ್ಡ್ ಯೋಜನೆ ಜನತೆಗೆ ತಲುಪಲಿ: ನಬಾರ್ಡ್‍ನಿಂದ ಹತ್ತಾರು ಯೋಜನೆಗಳಿದ್ದು, ಅವುಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಬ್ಯಾಂಕುಗಳು ಮಾಡಬೇಕು. ಜತೆಗೆ ನಬಾರ್ಡ್ ಅನುದಾನ ಸಮರ್ಪಕವಾಗಿ ಸದ್ಬಳಕೆ ಮಾಡಬೇಕು. ಹಳ್ಳಿ ಸಂತೆ ನಿರ್ಮಾಣಕ್ಕೆ ವಿಶೇಷ ಅನುದಾನವಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯೇ ಜನರಿಗೆ ಇಲ್ಲ. ಸ್ಥಳೀಯ ಆಡಳಿತ ಪ್ರತಿ ತಾಲೂಕಿನಲ್ಲಿ ಒಂದರಂತೆ 1.5 ಲಕ್ಷ ರೂ. ಹೂಡಿಕೆ ಮಾಡಿ ಹಳ್ಳಿ ಸಂತೆ ನಿರ್ಮಾಣಕ್ಕೆ ಮುಂದಾದರೆ ನಬಾರ್ಡ್ 15 ಲಕ್ಷ ರೂ. ನೀಡಲಿದೆ. ಇದು ನಮ್ಮ ಜಿಲ್ಲೆಯಲ್ಲೂ ಅನುಷ್ಠಾನವಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ನಾಗೇಶ್ ವಿ.ಎನ್. ಇತರೆ ಅಧಿಕಾರಿಗಳು ಇದ್ದರು.
ಹತ್ತು ರೂ. ನಾಣ್ಯ ಚಲಾವಣೆಯಲ್ಲಿದೆ
ಸಭೆಯಲ್ಲಿ ಕೆಲ ಬ್ಯಾಂಕ್‍ಗಳ ವ್ಯವಸ್ಥಾಪಕರು ಹತ್ತು ರೂ. ನಾಣ್ಯ ಚಲಾವಣೆಯಲ್ಲಿದ್ದು, ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಹತ್ತು ರೂ. ನಾಣ್ಯ ಚಲಾವಣೆಯಲ್ಲಿದ್ದು, ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ತಿಳಿಸಲಾಗುವುದು. ಜತೆಗೆ ಬ್ಯಾಂಕುಗಳ ಬಸ್ ಕಂಡಕ್ಟರ್‍ಗಳಿಗೆ ಹತ್ತು ರೂ. ನಾಣ್ಯ ಚಲಾವಣೆ ಸಂಬಂಧ ಅರಿವು ಕಾರ್ಯಾಗಾರ ಹಮ್ಮಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.