ಕೃಷಿ ಸಾಲ ವಸೂಲಾತಿ ವಿರೋಧಿಸಿ ರೈತರ ಪ್ರತಿಭಟನೆ

ಕಲಬುರಗಿ,ಸೆ.05: ಕೃಷಿ ಸಾಲ ವಸೂಲಾತಿ ತಡೆಯುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ, ರಾಜ್ಯ ಮತ್ತೆ ಬರಗಾಲಕ್ಕೆ ತುತ್ತಾಗಿದೆ. ಈಗಾಗಲೇ ಸರ್ಕಾರವು ಸುಮಾರು 130 ತಾಲ್ಲೂಕುಗಳನ್ನು ಬರ ಪ್ರದೇಶವೆಂದು ಘೋಷಿಸಲು ಆಲೋಚನೆ ಮಾಡಿದೆ. ಕೂಡಲೇ ಬರ ಪ್ರದೇಶಗಳೆಂದು ಘೋಷಿಸಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ಕೊಡುವಂತೆ, ಬರ ತಡೆಯಲು ನೀರಾವರಿಗೆ ಒತ್ತು ನೀಡಿ ಅಂತರ್ ಜಲ ಮಟ್ಟವನ್ನು ಹೆಚ್ಚಿಸುವಂತೆ, ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ವಿಸ್ತರಿಸಿ ರೈತ ಕುಟುಂಬದ ಇಬ್ಬರು ಸದಸ್ಯರಿಗೆ ಅನ್ವಯಿಸುವಂತೆ, ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ, ಜಾನುವಾರುಗಳಿಗೆ ಮೇವು ಒದಗಿಸುವಂತೆ, ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್ ನೀತಿಯು ಓಬೇರಾಯನ ಕಾಲದ್ದಾಗಿದ್ದು, ಅದನ್ನು ಮಾರ್ಪಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ, ರಾಜ್ಯ ಸರ್ಕಾರವೂ ಸಹ ಎನ್‍ಡಿಆರ್‍ಎಫ್ ಮಾನದಂಡಗಳನ್ನು ಮಾರ್ಪಡಿಸುವಂತೆ ಅವರು ಆಗ್ರಹಿಸಿದರು.
ಕೃಷಿ ಪಂಪ್‍ಸೆಟ್ಟುಗಳಿಗೆ ಗುಣಾತ್ಮಕ ತ್ರಿಫೇಸ್ ವಿದ್ಯುಚ್ಛಕ್ತಿಯನ್ನು ಕನಿಷ್ಠ ಏಳು ತಾಸುಗಳ ಕಾಲ ಪೂರೈಸುವಂತೆ, ಕಾವೇರಿ ಜಲಾಶಯಗಳಿಂದ ನೀರು ಹರಿಸುವುದನ್ನು ನಿಲ್ಲಿಸಿ ಕಾನೂನು ಹೋರಾಟಕ್ಕೆ ಮುಂದಾಗಿ ರಾಜ್ಯದ ರೈತರನ್ನು ರಕ್ಷಿಸುವಂತೆ, ಸರ್ಕಾರ ರಾಜ್ಯದ ರೈತರನ್ನು ರಕ್ಷಿಸಲು ವಿಫಲವಾದಲ್ಲಿ ಎಕರೆ ಒಂದಕ್ಕೆ 25000ರೂ.ಗಳ ಪರಿಹಾರ ಒದಗಿಸುವಂತೆ, ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವಂತೆ, ನಿರಂತರವಾಗಿ ಬಡ ರೈತನ ಕುಟುಂಬಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸವನ್ನು ಕೊಡುವಂತೆ ಅವರು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ಥಂಬೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಉಮಾಪತಿ ಪಾಟೀಲ್, ರಮೇಶ್ ರಾಗಿ, ಸುನೀಲಕುಮಾರ್ ಮಠಪತಿ, ಮಂಜುಳಾ ಭಜಂತ್ರಿ, ಸಂತೋಷ್ ರಾಠೋಡ್, ಈರಣ್ಣಾ ಬಿರಾದಾರ್, ಬೀರಣ್ಣಾ ಪೂಜಾರಿ, ಸೈನಾಜ್ ಬೀ, ಸಿದ್ದು ವೇದಶೆಟ್ಟಿ, ವಿಜಯಕುಮಾರ್ ಹತ್ತರಕಿ ಮುಂತಾದವರು ಪಾಲ್ಗೊಂಡಿದ್ದರು.