ಕೃಷಿ ಸಾಮಗ್ರಿಗಳ ಕಳ್ಳತನ: ಇಬ್ಬರು ಆರೋಪಿಗಳ ಸೆರೆ

ಕಲಬುರಗಿ:ಆ.27:ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮಹಾಗಾಂವ್ ಕ್ರಾಸ್‍ನಿಂದ ಚಿಂಚೋಳಿ ಮಾರ್ಗದಲ್ಲಿ ಬರುವ ಕುರಿಕೋಟಾ ಸೀಮಾಂತರದಲ್ಲಿ ಸಿದ್ಧರಾಜ್ ಲೆಂಗಟಿ ಅವರ ಹೊಲದಲ್ಲಿ ನೀರುಣಿಸಲು ಹಾಕಿದ ವಿದ್ಯುತ್ ತಂತಿ ಕೇಬಲ್ ಹಾಗೂ ಕೃಷಿ ಸಾಮಗ್ರಿಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಗಾಂವ್ ಠಾಣೆಯ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕಲಬುರ್ಗಿ ನಗರದ ಜಿಡಿಎ ಕಾಲೋನಿ, ಶಹಬಜಾರ್‍ನ ಗೋಕುಲನಗರದ ನಿವಾಸಿ ಹಾಗೂ ಚಾಲಕ ಮಲ್ಲಿಕಾರ್ಜುನ್ ತಂದೆ ಸಿದ್ದಯ್ಯಸ್ವಾಮಿ (26) ಹಾಗೂ ಕಲಬುರ್ಗಿ ನಗರದ ಹೊರವಲಯದ ಕೆಸರಟಗಿ ಉದ್ಯಾನವನದ ಹತ್ತಿರದ ನಿವಾಸಿ ಪ್ರಶಂತ್ ತಂದೆ ಯಲ್ಲಪ್ಪಾ (24) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ 4000ರೂ.ಗಳ ಮೌಲ್ಯದ 1080 ಅಡಿಯ ವಿದ್ಯುತ್ ಸರ್ವಿಸ್ ವೈರ್, 5000ರೂ.ಗಳ ಮೌಲ್ಯದ 200 ಅಡಿಯ ವಿದ್ಯುತ್ ತಂತಿ, 300ರೂ.ಗಳ ಮೌಲ್ಯದ ಎರಡು ಟಿ., 300ರೂ.ಗಳ ಮೌಲ್ಯದ ಎರಡು ಬೆಂಡ್‍ಗಳು, 3000ರೂ.ಗಳ ಮೌಲ್ಯದ ಒಂದು ಎಡಿ ಸೈಕಲ್, 5000ರೂ.ಗಳ ಮೌಲ್ಯದ ಒಂದು ಸ್ಟಾಟರ್ ಡಬ್ಬಾ, 5400ರೂ.ಗಳ ಮೌಲ್ಯದ ಐದು ಸ್ಪಿಂಕಲರ್ ಚಡಿಗಳು ಸೇರಿ ಒಟ್ಟು 23000ರೂ.ಗಳ ಮೌಲ್ಯದ ವಸ್ತುಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಪಿಎಸ್‍ಐ ಶ್ರೀಮತಿ ಆಶಾ, ಎಎಸ್‍ಐ ಗುಲಾಬ್, ಸಿಬ್ಬಂದಿಗಳಾದ ಅಮರನಾಥ್, ರಾಮಲಿಂಗ್, ಶ್ರವಣಕುಮಾರ್, ಸಿದ್ಧರಾಮ್, ಸೋಮನಾಥ್, ಸಿದ್ದಲಿಂಗ್ ಅವರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೋಲಿಸರ ಕಾರ್ಯಾಚರಣೆಯನ್ನು ಜಿಲ್ಲಾ ಪೋಲಿಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.