ಕೃಷಿ ಸಮಾಜದ ವತಿಯಿಂದ ಬೆಳೆ ಹಾನಿ ಸಮೀಕ್ಷೆಪ್ರತಿ ಹೆಕ್ಟರ್ ಗೆ 15 ಸಾವಿರ ರೂ.ಪರಿಹಾರ ನೀಡಿ

ಅಫಜಲಪುರ: ಸೆ.12:ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇನ್ನೂ ತಡ ಮಾಡದೆ ರೈತರಿಗೆ ಪ್ರತಿ ಹೆಕ್ಟೇರ್ ಗೆ 15 ಸಾವಿರ ರೂ.ಪರಿಹಾರ ವಿತರಣೆ ಮಾಡಬೇಕು ಎಂದು ಜಿಪಂ ಮಾಜಿ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ್ ಆಗ್ರಹಿಸಿದರು.ತಾಲೂಕಿನ ಗೊಬ್ಬೂರ(ಬಿ) ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ರೈತರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಈ ವರ್ಷ ಬಿಡುವಿಲ್ಲದೆ ಸುರಿಯುತ್ತಿರುವ ಅಪಾರ ಪ್ರಮಾಣದ ಮಳೆಯಿಂದಾಗಿ ರೈತರು ಬೆಳೆದ ತೊಗರಿ, ಹತ್ತಿ, ಸೋಯಾಬೀನ್, ಮೆಕ್ಕೆಜೋಳ, ಕಬ್ಬು ಸೇರಿದಂತೆ ಇತರೆ ಬೆಳೆಗಳು ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿವೆ.ಈಗಾಗಲೇ ಕೇಂದ್ರದಿಂದ ತಂಡ ಬಂದು ಸಮೀಕ್ಷೆ ನಡೆಸಿ ಹೋಗಿದೆ.ಆದರೆ ಕಾಟಾಚಾರಕ್ಕಾಗಿ ಅಲ್ಪಸ್ವಲ್ಪ ಪರಿಹಾರ ನೀಡದೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪರಿಹಾರ ವಿತರಣೆ ಮಾಡಬೇಕು. ಕೇಂದ್ರ ಸರ್ಕಾರ ನೀಡುವ ಪರಿಹಾರ ಜತೆಗೆ ರಾಜ್ಯ ಸರ್ಕಾರವು ಸಹ ಹೆಚ್ಚಿನ ಮುತುವರ್ಜಿ ವಹಿಸಿ ರಾಜ್ಯ ಸರ್ಕಾರದ ವತಿಯಿಂದ ಸಹ ಪರಿಹಾರ ಒದಗಿಸಬೇಕು.ಭಾರತ ದೇಶದ ಬೆನ್ನೆಲುಬಾಗಿರುವ ರೈತರ ಹೆಸರಿನ ಮೇಲೆ ಪ್ರಮಾಣ ವಚನ ಮಾಡಿದ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಸಿದ್ದರಾಮಪ್ಪ ಪಾಟೀಲ್ ದಂಗಾಪುರ ಮಾತನಾಡಿ ಈಗಾಗಲೇ ಕೃಷಿ ಸಮಾಜ ವತಿಯಿಂದ ಎಲ್ಲಾ ತಾಲೂಕುಗಳಿಗೆ ತೆರಳಿ ಬೆಳೆ ಹಾನಿ ಸಮೀಕ್ಷೆ ಮಾಡಲಾಗುತ್ತಿದೆ.ಅಧಿಕಾರಿಗಳು ಸಹ ಮಾಹಿತಿ ಸರ್ಕಾರಕ್ಕೆ ನೀಡಿದ್ದಾರೆ. ಹೀಗಾಗಿ ಸೆಪ್ಟಂಬರ್ 17ರಂದು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗುವುದು.ಈಗಾಗಲೇ ಕೇಂದ್ರ ಸರ್ಕಾರ 6800 ರೂ.ಒಣ ಬೇಸಾಯಕ್ಕೆ ಪರಿಹಾರ ನೀಡಲು ತೀರ್ಮಾನಿಸಿದೆ.ಆದರೆ ಅದು ಬಹಳ ಕಡಿಮೆಯಾಗುತ್ತದೆ ಹೀಗಾಗಿ ಪ್ರತಿ ಹೆಕ್ಟೇರ್ ಗೆ 15 ಸಾವಿರ ರೂ. ಪರಿಹಾರ ವಿತರಣೆ ಮಾಡಬೇಕು.ಬೆಳೆ ಹಾನಿಯಾಗಿರುವ ರೈತರಿಗೆ ಹಿಂಗಾರು ಬೆಳೆ ಬಿತ್ತನೆ ಮಾಡಲು ಬೀಜ ಹಾಗೂ ರಸಗೊಬ್ಬರ ಉಚಿತವಾಗಿ ವಿತರಣೆ ಮಾಡಬೇಕು.ಈಗಾಗಲೇ ಕೇಂದ್ರ ಸರ್ಕಾರ ಪರಿಹಾರ ನೀಡಲು ಮುಂದಾಗಿದೆ ಅದೇ ರೀತಿ ರಾಜ್ಯದಲ್ಲೂ ಸಹ ಮುಂದೆ ಬರಬೇಕು. ಅಧಿಕಾರಿಗಳ ಹಾಗೂ ರಾಜಕಾರಣಿಗಳ ಪ್ರತಿ ವರ್ಷ ಸಂಬಳ ಹೆಚ್ಚಾಗುತ್ತದೆ ಆದರೆ ರೈತರ ಪರಿಹಾರ ಏಕೆ ಹೆಚ್ಚು ಮಾಡೋದಿಲ್ಲ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.ಕಲಬುರಗಿ ಸಂಸದ ಡಾ.ಉಮೇಶ ಜಾಧವ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ಗಡಗೀಮನಿ ಮಾತನಾಡಿ ಈ ಬಾರಿ ನಿರಂತರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿ 15281 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ.ಈಗಾಗಲೇ ಬೆಳೆ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.ಕೇಂದ್ರ ಸರ್ಕಾರದಿಂದ ಒಣ ಬೇಸಾಯ ಪ್ರತಿ ಹೆಕ್ಟೇರ್ ಗೆ 6800 ರೂ.ಹಾಗೂ ನೀರಾವರಿಗೆ 13500 ರೂ.ಪರಿಹಾರ ನೀಡಲಾಗುತ್ತಿದೆ.ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ರೈತರು ಸುಮಾರು 12771 ಬೆಳೆ ವಿಮೆ ಮಾಡಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಲ್ಲಿನಾಥ ಪಾಟೀಲ್, ಅಸ್ಫಾಕ್ ಬಂದರವಾಡ, ಶ್ರೀಮಂತ ಪಾಟೀಲ್,ದತ್ತು ಪವರ,ಸಚೀನ ಲಿಂಗಶೆಟ್ಟಿ,ಜಟ್ಟೆಪ್ಪ ಪೂಜಾರಿ, ಶಂಕ್ರಪ್ಪ ದೇವತ್ಕಲ್, ಬಸಲಿಂಗಪ್ಪ ದೇವತ್ಕಲ್, ಪ್ರವೀಣ ದೇವತ್ಕಲ್, ಅಣವೀರ ಗುಡಿ, ಮೆಹಬೂಬ್ ಸಾಬ್,ಯಲ್ಲನಗೌಡ ಪಾಟೀಲ್ ಸೇರಿದಂತೆ ಇನ್ನಿತರು ಇದ್ದರು.