ಕೃಷಿ ಸಚಿವರಿಗೆ ಹಿರೇಮಠ್ ನೇತೃತ್ವದಲ್ಲಿ ಮುತ್ತಿಗೆ: ರೈತ ಅನುವುಗಾರರ ಮುಂದುವರಿಕೆಗೆ ಭರವಸೆ

ಕಲಬುರಗಿ,ಸೆ.16: ರೈತ ಅನುವುಗಾರರ ಸೇವೆಯನ್ನು ಮೊಟಕುಗೊಳಿಸುವ ರಾಜ್ಯ ಸರ್ಕಾರದ ಹುನ್ನಾರವನ್ನು ವಿರೋಧಿಸಿ ಬುಧವಾರ ಬೆಳಿಗ್ಗೆ ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ಎಸ್. ಹಿರೇಮಠ್ ಅವರ ನೇತೃತ್ವದಲ್ಲಿ ರೈತ ಸಂಘಟನೆಗಳ ಕಾರ್ಯಕರ್ತರು ಆಳಂದ್ ಚೆಕ್‍ಪೋಸ್ಟ್ ಬಳಿ ಇರುವ ಕೃಷಿ ವಿಶ್ವವಿದ್ಯಾಲಯದ ಬಳಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ವಿಶ್ವವಿದ್ಯಾಲಯದಲ್ಲಿ ಸಭೆ ಮುಗಿಸಿಕೊಂಡು ಕಾರಿನಲ್ಲಿ ಹೋಗುತ್ತಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಪ್ರತಿಭಟನೆಕಾರರನ್ನು ನೋಡಿ ಕಾರಿನಿಂದ ಇಳಿದು ಸಮಾಲೋಚನೆ ಮಾಡಲು ಆರಂಭಿಸಿದರು.
ರಸ್ತೆಯಲ್ಲಿಯೇ ಸಚಿವ ಬಿ.ಸಿ. ಪಾಟೀಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಚಂದ್ರಶೇಖರ್ ಹಿರೇಮಠ್ ಅವರು, ಕಳೆದ 12 ವರ್ಷಗಳಿಂದ ಕೇವಲ ಕಮೀಷನ್ ಮೇಲೆ ಇಲಾಖೆಯ ಎಲ್ಲ ಕೆಲಸ ಮಾಡಿದ ರಾಜ್ಯದ ಸುಮಾರು 6500 ರೈತ ಅನುವುಗಾರರನ್ನು ದಿಢೀರನೇ ತೆಗೆಯುವ ಕಾರ್ಯ ಕಾರ್ಮಿಕ ವಿರೋಧಿ ಅಷ್ಟೇ ಅಲ್ಲ, ರೈತ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಮೊದಲು ಭೂ ಚೇತನ ಎನ್ನುವ ಯೋಜನೆ ಜಾರಿಗೊಳಿಸಿದಾಗ ರೈತ ಮಕ್ಕಳಿಗೆ ಉದ್ಯೋಗ ನೀಡುವ ಹೇಳಿಕೆಯೊಂದಿಗೆ 2008ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅವರನ್ನು ನೇಮಕ ಮಾಡಿಕೊಂಡು 12 ವರ್ಷಗಳ ಕಾಲ ದುಡಿಸಿ ಈಗ ಅವರನ್ನು ತೆಗೆದು ಹೊಸ ನೇಮಕಾತಿ ಮಾಡುವುದು ರೈತ ಮಕ್ಕಳಿಗೆ ಮಾಡಿದ ಮಹಾಮೋಸ ಎಂದು ಅವರು ಕಟುವಾಗಿ ಟೀಕಿಸಿದರು.
ಸದ್ಯ ಬೆಳೆ ಸಮೀಕ್ಷೆ, ಮಣ್ಣು ಪರೀಕ್ಷೆ, ಸಿರಿಧಾನ್ಯ ಯೋಜನೆ ಮುಂತಾದ ಯೋಜನೆಗಳು ಕುಂಠಿತಗೊಂಡಿದ್ದು, ಇಡೀ ಕೃಷಿ ಇಲಾಖೆಗೆ ಪೆಟ್ಟು ಬಿದ್ದಿದೆ. ಬೆಳೆ ಹಾನಿ ಕುರಿತು ಪ್ರಸ್ತಾವನೆ ಸಲ್ಲಿಸಲು ಇಲಾಖೆಯ ಹತ್ತಿರ ಅಂಕಿ, ಅಂಶಗಳಿಲ್ಲ. ಬೇಜವಾಬ್ದಾರಿತನದಿಂದ ವರ್ತಿಸದೇ ರೈತ ಪರವಾಗಿ ಕೆಲಸ ಮಾಡಲು ರೈತ ಅನುವುಗಾರರನ್ನು ಸೇವೆಯಲ್ಲಿ ಮುಂದುವರೆಸಬೇಕು ಎಂದು ಅವರು ಪಟ್ಟು ಹಿಡಿದರು.
ಆಗ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಉತ್ತರಿಸಿ, ಈ ಕುರಿತು ಸಹಾನುಭೂತಿ ಇದೆ. ನೇರವಾಗಿ ಬೆಳೆ ಸಮೀಕ್ಷೆ ಮಾಡಿ ಭಾವಚಿತ್ರ ಹಾಕುವ ಯೋಜನೆ ರೂಪಿಸಿದ್ದು, ಅದು ವಿಫಲಗೊಂಡಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡರು.
ಸ್ಥಳದಲ್ಲಿಯೇ ಇದ್ದ ಆಳಂದ್ ತಾಲ್ಲೂಕಿನ ಗೋಳಾ ಗ್ರಾಮದ ರೈತ ರಾಜಶೇಖರ್ ಪಾಟೀಲ್ ಅವರು ತನ್ನ ಮೊಬೈಲ್ ತೆಗೆದು, ಅದರಲ್ಲಿ ಭಾವಚಿತ್ರ ತೆಗೆಯೋಕೆ ಬರುವುದಿಲ್ಲ. ನಾನು ಹೇಗೆ ಮಾಡಬೇಕು? ಎಂದು ಪ್ರಶ್ನಿಸಿದ. ಆಗ ಸಚಿವರು ಪ್ರತಿಕ್ರಿಯಿಸಿ, ಬೇರೆಯವರಿಂದ ತೆಗಿಸಬಹುದು ಎಂದಾಗ, ಬೇರೆಯವರು ನಮ್ಮ ಜಮೀನಿಗೆ ಬಂದು ಭಾವಚಿತ್ರ ತೆಗೆಯಲು 300ರೂ.ಗಳನ್ನು ಕೇಳುತ್ತಾರೆ. ರೈತ ಅನುವುಗಾರರು ಪುಕ್ಕಟ್ಟೆ ತೆಗೆದು ಇಲಾಖೆಯಿಂದ ಕೇವಲ ಐದು ರೂ.ಗಳನ್ನು ಪಡೆಯುತ್ತಿದ್ದರು ಹಾಗೂ ಸ್ಥಳೀಯವಾಗಿ ಮಾಹಿತಿ ಕೊಡುತ್ತಿದ್ದರು ಎಂದು ಸಚಿವರಿಗೆ ಹೇಳುವ ಮೂಲಕ ವಿಶೇಷ ಗಮನ ಸೆಳೆದರು.
ಸಚಿವ ಬಿ.ಸಿ. ಪಾಟೀಲ್ ಅವರು ಪ್ರತಿಕ್ರಿಯಿಸಿ, ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹಣಕಾಸಿನ ವ್ಯವಸ್ಥೆ ಮಾಡಿ ಅವರನ್ನು ಸೇವೆಯಲ್ಲಿ ಮುಂದುವರೆಸುವ ಪ್ರಸ್ತಾವನೆ ರೂಪಿಸುವುದಾಗಿ ಭರವಸೆ ನೀಡಿದರು. ಆಗ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಕಲ್ಯಾಣ ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ಬಸವ ಸಂಗೋಳಗಿ, ಕಾರ್ಯದರ್ಶಿ ಚಂದ್ರಕಾಂತ್ ಕೊಂಡಾಪೂರೆ, ಹಸಿರು ಸೇನೆ ಜಿಲ್ಲಾಧ್ಯಕ್ಷ ಇಜೇರಿ, ಅಲ್ಲಾ ಪಟೇಲ್ ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.