ಕೃಷಿ ಸಂಜೀವಿನಿ ಸಂಚಾರಿ ವಾಹನಗಳಿಗೆ ಹಸಿರು ನಿಶಾನೆ

Cm yudiurappa flagging off the krishi vehicles infront of v.soudha


ಬೆಂಗಳೂರು, ಜ. ೭- ರೈತರ ಹೊಲಗಳಿಗೆ ಹೋಗಿ ಮಣ್ಣು, ನೀರು, ರೋಗ ಪರೀಕ್ಷೆ ಮಾಡುವ ಕೃಷಿ ಸಂಜೀವಿನಿ ಯೋಜನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಚಾಲನೆ ನೀಡಿದ್ದು, ಕೃಷಿ ಸಂಜೀವಿನಿ ಸಂಚಾರಿ ಸಸ್ಯ ಚಿಕಿತ್ಸಾ ವಾಹನಗಳಿಗೆ ಹಸಿರು ನಿಶಾನೆ ತೋರಿದರು.
ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮುಂಭಾಗ ನಡೆದ ಕೃಷಿ ಸಂಜೀವಿನಿ ಸಂಚಾರಿ ಸಸ್ಯ ಚಿಕಿತ್ಸಾ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ೪೦ ಕೃಷಿ ಸಂಜೀವಿನಿ ವಾಹನಗಳಿಗೆ ಹಸಿರು ನಿಶಾನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣಸವದಿ, ಕೃಷಿ ಸಚಿವ ಬಿ.ಸಿ. ಪಾಟೀಲ್, ಸಹಕಾರ ಮತ್ತು ಎಪಿಎಂಸಿ ಸಚಿವ ಎಸ್.ಟಿ. ಸೋಮಶೇಖರ್ ತೋರಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಕೃಷಿ ಸಂಜೀವಿನಿಯ ೪೦ ವಾಹನಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ಆಯಾ ಹೊಲಗಳಿಗೆ ಹೋಗಿ ಮಣ್ಣು, ನೀರು ರೋಗ ಪರೀಕ್ಷೆ ಮಾಡುವ ವಾಹನ ಇದಾಗಿದೆ. ಲ್ಯಾಬ್ ಟು ಲ್ಯಾಂಡ್ ಪರಿಕಲ್ಪನೆಯ ಯೋಜನೆಯಾಗಿದೆ ಎಂದರು.
ಈ ಕೃಷಿ ಸಂಜೀವಿನಿ ಸಂಚಾರಿ ವಾಹನಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಎಂಬ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಈ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವ ಚಿಂತನೆಯೂ ಇದೆ ಎಂದರು.
ಕೃಷಿ ಇಲಾಖೆ ಪ್ರತಿಯೊಂದು ರೈತ ಸಂಪರ್ಕ ಕೇಂದ್ರಕ್ಕೂ ಒಂದೊಂದು ಕೃಷಿ ಸಂಜೀವಿನಿ ವಾಹನಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಅವರು ಹೇಳಿದರು.
ಈ ವಾಹನಗಳ ಕಾರ್ಯಕ್ಷಮತೆ ಉತ್ತಮವಾಗಿ ಇದರಿಂದ ರೈತರಿಗೆ ಅನುಕೂಲವಾದರೆ ಈ ವಾಹನಗಳ ಸಂಖ್ಯೆ ಹೆಚ್ಚಿಸಲು ಒಪ್ಪಿಗೆ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ನೀಡಿದರು.
ಏನಿದು ಕೃಷಿ ಸಂಜೀವಿನಿ?
ಕೃಷಿಯಲ್ಲಿ ತೊಡಗಿರುವ ರೈತರಿಗೆ ಕಾಲ ಕಾಲಕ್ಕೆ ಮಣ್ಣು, ಶೀತರೋಗ, ನೀರು ಪರೀಕ್ಷೆ ಮತ್ತಿತರೆ ತಾಂತ್ರಿಕ ನೆರವನ್ನು ಈ ಸಂಚಾರಿ ಕೃಷಿ ಸಂಜೀವಿನಿ ವಾಹನಗಳು ಒದಗಿಸಲಿವೆ. ರೈತರ ಹೊಲಗಳಿಗೆ ತೆರಳಿ ರಸಗೊಬ್ಬರಗಳ ಸಮರ್ಪಕ ಬಳಕೆ, ರೋಗ ಕೀಟಗಳ ಹತೋಟಿ, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ ಸೂಕ್ತ ಸಲಹೆ ಪಡೆಯಲು ಪ್ರೋತ್ಸಾಹಿಸಲಾಗುತ್ತದೆ. ಸಕಾಲದಲ್ಲಿ ಬೆಳೆಯ ಎಲ್ಲ ಹಂತಗಳಲ್ಲಿ ಸರ್ವೇಕ್ಷಣೆಯನ್ನು ಕೈಗೊಂಡು ಕಂಡು ಬರಬಹುದಾದ ಶೀತ, ರೋಗ, ಬೆಳೆಗಳ ನಿರ್ವಹಣಾ ಮಾರ್ಗೋಪಾಯಗಳನ್ನು ರೈತರಿಗೆ ತಿಳಿಸುವ ಕೆಲಸವನ್ನು ಈ ಯೋಜನೆಯಡಿ ಮಾಡಲಾಗುತ್ತದೆ.
ರೈತರು ಬಳಸಿರುವ ರಸಗೊಬ್ಬರಗಳು ಕಲಬೆರೆಕೆಯಾಗಿದೆಯೇ ಅಥವಾ ನಕಲಿ ಗೊಬ್ಬರವೇ ಎಂಬುದನ್ನು ಈ ಯೋಜನೆಯ ಮೂಲಕ ರೈತರಿಗೆ ತಿಳಿಸಲಾಗುತ್ತದೆ.
ಈ ಕೃಷಿ ಸಂಜೀವಿನಿ ಸಹಾಯ ವಾಣಿ ಸಂಖ್ಯೆ ೧೫೫೩೧೩ ಇದಕ್ಕೆ ದೂರವಾಣಿ ಮಾಡಿದರೆ ರೈತರ ಸಮಸ್ಯೆಯನ್ನು ತಿಳಿಸಿ ಪರಿಹಾರವನ್ನು ಪಡೆಯಬಹುದಾಗಿದೆ.