ಕೃಷಿ ಸಂಜೀವಿನಿ ಕುರಿತು ರೈತರಿಗೆ ಮಾಹಿತಿ ನೀಡಿದ ಅಧಿಕಾರಿಗಳು

ಕಲಬುರಗಿ.ಏ23: ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಸಹಭಾಗಿತ್ವದಲ್ಲಿ ಕೃಷಿ ಸಂಜೀವಿನಿ ಯೋಜನೆಯಡಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಶುಕ್ರವಾರ ಕಲಬುರಗಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಮಣ್ಣು ಮಾದರಿಯ ಸಂಗ್ರಹಣೆ, ಮಣ್ಣು ಪರೀಕ್ಷೆಯ ಮಹತ್ವ, ಮಣ್ಣು ಆರೋಗ್ಯ ಚೀಟಿ, ರಸಗೊಬ್ಬರ ನಿರ್ವಹಣೆ ಸೇರಿದಂತೆ ಮುಂತಾದ ಕೃಷಿ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಅಧಿಕಾರಿಗಳ ತಂಡ ಪಶುವಿಜ್ಞಾನಿ ಡಾ. ಮಂಜುನಾಥ ಪಾಟೀಲ ಅವರೊಂದಿಗೆ ಕಲಬುರಗಿ ತಾಲೂಕಿನ ಧರ್ಮಾಪೂರ ಹೋಬಳಿಯ ನಂದೂರ್ (ಬಿ), ನಂದೂರ್ (ಕೆ) ಹಾಗೂ ಫರಹತಾಬಾದ ಹೋಬಳಿಯ ಸಿರನೂರ, ಫರಹತಾಬಾದ, ಸರಡಗಿ ಗ್ರಾಮಗಳಿಗೆ ತೆರಳಿ ದನ ಕರುಗಳಿಗೆ ಬರುವ ವಿವಿಧ ರೋಗಗಳು ಹಾಗೂ ಹತೋಟಿ ಕ್ರಮಗಳ ಕುರಿತು ಸಹ ರೈತರಿಗೆ ತಿಳಿಹೇಳಿದರು.
ಈ ಸಂಧರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಅವರು ಮಾತನಾಡಿ, ರೈತರಿಗೆ ಕೃಷಿ ಸಂಜೀವನಿ ಯೋಜನೆಯ ಕುರಿತು ವಿವರಿಸಿದರು. ರೈತರು ತಮ್ಮ ಬೆಳೆಗಳಿಗೆ ಕೀಟ ರೋಗ ಭಾದೆ ಆದರೆ ಕೃಷಿ ಸಂಜೀವನಿ ವಾಹನದ ಸಹಾಯ ಪಡೆಯಬೇಕು ಎಂದು ಅವರು ತಿಳಿದರು.
ಕೃಷಿ ಸಂಜೀವಿನಿ ಸಹಾಯವಾಣಿ 155313 ಗೆ ಕರೆ ಮಾಡಿ ಸದುಪಯೋಗ ಪಡೆಯಲು ಕೋರಿದರು. ಈ ಸಂಧರ್ಭದಲ್ಲಿ ಕೃಷಿ ಅಧಿಕಾರಿಗಳಾದ ಆಕಾಶ ರೆಡ್ಡಿ, ಪ್ರಿಯಾಂಕ ಕುಲಕರ್ಣಿ, ಆತ್ಮ ಹಾಗೂ ಕೃಷಿ ಸಂಜೀವಿನಿ ಯೋಜನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.