ಕೃಷಿ ವಿಶ್ವವಿದ್ಯಾಲಯದ ಪಕ್ಕ ಬಾರ್ ತೆರೆಯುವುದಕ್ಕೆ ಕರವೇ ವಿರೋಧ : ಪ್ರತಿಭಟನೆಯ ಎಚ್ಚರಿಕೆ

ಮೈಸೂರು,ನ.6: ಮೈಸೂರು ತಾಲೂಕು ನಾಗನಹಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ನಾಗನಹಳ್ಳಿ ಗ್ರಾಮದಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಪಕ್ಕದಲ್ಲಿ ಬಾರ್‍ನ್ನು ತೆರೆಯಲು ಮುಂದಾಗಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ಕರವೇ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ ಮೈಸೂರು ತಾಲೂಕು ನಾಗನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ನಾಗನಹಳ್ಳಿ ಗ್ರಾಮದಲ್ಲಿರುವ ಕೃಷಿ ವಿಶ್ವವಿದ್ಯಾಲಯ ಬೇರೆ ರಾಜ್ಯಗಳು ಹಾಗೂ ರಾಜ್ಯದ ಹಲವು ಜಿಲ್ಲೆಗಳಿಂದ ರೈತಾಪಿ ವರ್ಗದವರು ಕೃಷಿ ವಿಚಾರವಾಗಿ ತರಬೇತಿ ಪಡೆಯಲು ಮತ್ತು ಮಣ್ಣಿನ ಪರೀಕ್ಷೆಗೂ ಕೇಂದ್ರಕ್ಕೆ ಆಗಮಿಸುತ್ತಾರೆ. ಈ ಕೃಷಿ ವಿಶ್ವವಿದ್ಯಾಲಯದ ಎದುರು 10 ಮೀಟರ್ ದೂರದಲ್ಲಿ ಬಾರ್(ಮದ್ಯದಂಗಡಿ) ತೆರೆಯಲು ಮುಂದಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಯಾವುದೇ ಸರ್ಕಾರಿ ಕಛೇರಿಗಳು, ಶಾಲಾ ಕಾಲೇಜುಗಳು ಮತ್ತು ಪ್ರಾರ್ಥನಾ ಮಂದಿರಗಳಿಂದ 100 ಮೀಟರ್ ದೂರದಲ್ಲಿ ಇರಬೇಕೆಂದು ಸರ್ಕಾರಿ ಆದೇಶವಿದ್ದರೂ ಈ ಸ್ಥಳದಲ್ಲಿ ಮದ್ಯದಂಗಡಿ ತೆರೆಯುತ್ತಿರುವುದು ವಿಷಾದನೀಯ ಎಂದರು.
ಈ ಗ್ರಾಮದ ವ್ಯಾಪ್ತಿಯಲ್ಲಿ ಕೃಷಿ ವಿಶ್ವವಿದ್ಯಾಲಯದ ತರಬೇತಿ ಸಂಸ್ಥೆಯು ಇದ್ದರೂ ಅಬಕಾರಿ ನಿರೀಕ್ಷಕರು ಯಾವ ಮಾನದಂಡದ ಮೇಲೆ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ್ದೀರಿ ಎನ್ನುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸರ್ಕಾರಿ ಆದೇಶವನ್ನು ಪಾಲಿಸದೆ ಆದೇಶವನ್ನು ಧಿಕ್ಕರಿಸಿ ತಾವು ಅನುಮತಿ ನೀಡುತ್ತಿರುವುದು ಕಾನೂನು ವಿರುದ್ಧವಾದ ನಿಯಮವಾಗಿದೆ. ಇದು ಭ್ರಷ್ಟಾಚಾರದ ಕೈಗನ್ನಡಿಯಂತೆ ತೋರುತ್ತಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ತಾವು ಸೂಕ್ತ ಕ್ರಮ ಕೈಗೊಳ್ಳಬೇಕು. ರೈತಾಪಿ ವರ್ಗದ ನಾವೆಲ್ಲರೂ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದರು. ಅಲ್ಲದೇ ತಪ್ಪಿದಲ್ಲಿ ಈ ವಿಚಾರದ ವಿಷಯದಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳುವುದಾಗಿಯೂ ಎಚ್ಚರಿಸಿದರು.
ಈಗಾಗಲೇ ಮುಖ್ಯಮಂತ್ರಿಗಳಿಗೂ, ಅಬಕಾರಿ ಸಚಿವರಿಗೂ, ಕೃಷಿಸಚಿವರಿಗೂ, ಮುಖ್ಯ ಅಬಕಾರಿ ಆಯುಕ್ತರಿಗೂ(ಬೆಂಗಳೂರು), ಜಿಲ್ಲಾಧಿಕಾರಿಗಳಿಗೂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೂ, ಅಬಕಾರಿ ಅಧಿಕಾರಿಗಳಿಗೂ, ತಾಲೂಕು ದಂಡಾಧಿಕಾರಿಗಳಿಗೂ ಮನವಿ ನೀಡಿರುವುದಾಗಿ ತಿಳಿಸಿದರು.