ಕೃಷಿ ವಿವಿ ೧೦ ಘಟಿಕೋತ್ಸವ: ೪೯೬ ಪದವಿ ಪ್ರದಾನ

ರಾಷ್ಟ್ರೀಯ ಮಟ್ಟದಲ್ಲಿ ೨೧ ನೇ ರ್ಯಾಂಕ್
ಗಂಗಾವತಿಯಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆ-ಡಾ.ಕಟ್ಟಿಮನಿ
ರಾಯಚೂರು,ಜ.೯- ರಾಷ್ತ್ರೀಯ ಮಟ್ಟದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯವು ೬೦ ರಾಂಕ್ ದಿಂದ ಸ್ಥಾನದಿಂದ ೨೦೧೯ ರಲ್ಲಿ ೨೧ ರಾಂಕ್ ಪಡೆದಿದ್ದು, ಮುಂದಿನ ದಿನಗಳಲ್ಲಿ ೧೦ ರೊಳಗೆ ರಾಂಕ್ ಪಡೆಯಲು ಶ್ರಮಿಸಲಾಗುವುದು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಹೇಳಿದರು.
ಅವರಿಂದು ನಗರದ ಕೃಷಿ ವಿಶ್ವವಿದ್ಯಾಲಯದ ೧೦ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಯಚೂರು ಕೃಷಿ ವಿಶ್ವವಿದ್ಯಾಲಯವು ರಾಷ್ಟ್ರೀಯ ಮಟ್ಟದ ರಾಂಕಿಂಗ್ ನಲ್ಲಿ ೬೦ನೇ ಸ್ಥಾನದಿಂದ ೨೧ನೇ ಸ್ಥಾನಕ್ಕೆರಿದ್ದು, ಮುಂದಿನ ದಿನಗಳಲ್ಲಿ ೧೦ರೊಳಗೆ ಸ್ಥಾನ ಪಡೆಯುವ ದಿಸೆಯಲ್ಲಿ ಶ್ರಮಿಸಲಾಗುವುದು ಎಂದರು.
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹೊಸದಾಗಿ ಕೃಷಿ ಮಹಾವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ವಿಶ್ವವಿದ್ಯಾಲಯದ ಬೋಧನಾ ಚಟುವಟಿಕೆಗಳನ್ನು ಮೂರು ಆವರಣಗಳ ನಾಲ್ಕು ಮಹಾವಿದ್ಯಾಲಯಗಳಲ್ಲಿ ನಡೆಸಲಾಗುತ್ತಿದ್ದು, ಕೃಷಿಯಲ್ಲಿ ಸ್ನಾತಕ ಪದವಿಯನ್ನು ರಾಯಚೂರು, ಭೀಮರಾಯನಗುಡಿ ಮತ್ತು ಕಲಬುರಗಿ ಮಹಾವಿದ್ಯಾಲಯಗಳಲ್ಲಿ, ಕೃಷಿ ತಾಂತ್ರಿಕ ಸ್ನಾತಕ ಪದವಿಯನ್ನು ಕೃಷಿ ತಾಂತ್ರಿಕ ಮಹಾವಿದ್ಯಾಲಯ ರಾಯಚೂರು ಆವರಣದಲ್ಲಿ ನಡೆಸಲಾಗುತ್ತಿದೆ. ಸ್ನಾತಕೋತ್ತರದ ೧೫ ಹಾಗೂ ಪಿ.ಹೆಚ್.ಡಿ ಯ ೧೪ ಪದವಿ ಕಾರ್ಯಕ್ರಮಗಳು ರಾಯಚೂರು ಆವರಣದ ವಿವಿಧ ವಿಭಾಗಗಳಲ್ಲಿ ನಡೆಯುತ್ತಿವೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ಹೊಸ ಕೃಷಿ ಮಹಾವಿದ್ಯಾಲಯವನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ಡಿಪ್ಲೋಮಾ ಅಧ್ಯಯನವು ರಾಯಚೂರು, ಹಗರಿ, ಬೀದರ್ ಮತ್ತು ಭೀಮರಾಯನಗುಡಿಯಲ್ಲಿ ನಡೆಯುತ್ತಿವೆ. ೨೦೧೮-೧೯ನೇ ಸಾಲಿನಲ್ಲಿ ಸ್ನಾತಕ ಪದವಿಗೆ ಒಟ್ಟು ೩೪೩ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಅದರಲ್ಲಿ ೧೩೪ ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಅಲ್ಲದೆ ಸ್ನಾತಕೋತ್ತರ ಪದವಿಗೆ ೧೧೬ ಮತ್ತು ಪಿ.ಹೆಚ್.ಡಿ ಕೋರ್ಸ್‌ಗಳಿಗೆ ೩೮ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ಅದರಲ್ಲಿ ಒಟ್ಟು ೬೮ ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಅಲ್ಲದೇ , ೨೦೧೮-೧೯ನೇ ಸಾಲಿನಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನಲ್ಲಿ ಒಟ್ಟು ೧೨೬೨ ಸ್ನಾತಕ ಮತ್ತು ೪೧೩ ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ ವಿದ್ಯಾರ್ಥಿಗಳು ಹಾಗೂ ೧೩೦ ಡಿಪ್ಲೋಮಾ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದರು.
೨೦೧೮-೧೯ ರಲ್ಲಿ ೨೬ ವಿದ್ಯಾರ್ಥಿಗಳು ಐಸಿಎಅರ್ ಜೆಅರ್ ಎಫ್ ಶಿಷ್ಯವೇತನ, ೪ ವಿದ್ಯಾರ್ಥಿಗಳು ಐಸಿಎಅರ್ ಎಸ್.ಆರ್.ಎಫ್. ಶಿಷ್ಯವೇತನ, ೯ ವಿದ್ಯಾರ್ಥಿಗಳು ಯುಜಿಸಿ ಸಂಸ್ಥೆಯ ರಾಜೀವ್ ಗಾಂಧಿ ಫೆಲೊಷಿಪ್, ಒಬ್ಬ ವಿದ್ಯಾರ್ಥಿಗೆ ಮೌಲಾನಾ ಆಝಾದ್ ಫೆಲೊಷಿಪ್ ಮತ್ತು ೬ ವಿದ್ಯಾರ್ಥಿಗಳು ಗೇಟ್ ಪರೀಕ್ಷೆ ತೇರ್ಗಡೆಯಾಹಿ ಶಿಷ್ಯವೇತನ ಪಡೆದಿದ್ದಾರೆ. ಇದಲ್ಲದೆ ಸ್ನಾತಕೋತ್ತರ ವಿಭಾಗದಲ್ಲಿ ೬೦ ವಿದ್ಯಾರ್ಥಿಗಳು ಕೃವಿವಿ ಮೆರುಟ್ ಶಿಷ್ಯವೇಶನ ಮತ್ತು ೧೬೩ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಶಿಷ್ಯವೇತನವನ್ನು ಪಡೆದಿದ್ದಾರೆ. ಸ್ನಾತಕ ಪದವಿ ಯೋಜನೆಯಲ್ಲಿ ೬೩ ವಿದ್ಯಾರ್ಥಿಗಳಿಗೆ ಕೃವಿವಿ ಮೆರಿಟ್ ಹಾಗೂ ೪೩ ವಿದ್ಯಾರ್ಥಿಗಳಿಗೆ ಸಾಮಾನ್ಯ ಶಿಷ್ಯವೇತನವು, ತಲಾ ವಿದ್ಯಾರ್ಥಿಗೆ ಡಾ . ಎ.ಎಸ್.ಹಾದಿಮನಿ ಹಾಗೂ ಡಾ.ಸಿ.ವಿ.ಪಾಟೀಲ್ ಶಿಷ್ಯವೇತನ ಲಭಿಸಿವೆ.
ಈ ಹತ್ತನೇ ಘಟಿಕೋತ್ಸವದಲ್ಲಿ ೩೦೦ ಸ್ನಾತಕ, ೧೬೦ ಸ್ನಾತಕೋತ್ತರ ಹಾಗೂ ೩೬ ಡಾಕ್ಟರೇಟ್ ಸೇರಿ ಒಟ್ಟು ೪೯೬ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನಮಾಡಲಾಯಿತು ಮತ್ತು ಸ್ನಾತಕ ಪದವಿಯಲ್ಲಿ ೨೪ ಚಿನ್ನದ ಪದಕ, ಸ್ನಾತಕೋತ್ತರ ಪದವಿಗಳಲ್ಲಿ ೧೪ ಚಿನ್ನದ ಪದಕ, ಹಾಗೂ ೧೧ ಚಿನ್ನದ ಪದಗಳು ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಸಂಶೋಧನೆ: ವಿವಿ ವತಿಯಿಂದ ಬೆಳೆ ಅಭಿವೃದ್ಧಿಯಲ್ಲಿ, ಬ್ಯಾಕ್ಟೀರಿಯ ಅಂಗಮಾರಿ ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದ ಮತ್ತು ಪ್ರತಿ ಎಕರೆಗೆ ೨೫ರಿಂದ ೩೦ ಕ್ವಿಂಟಾಲ್ ಇಳುವರಿ ಕೊಡುವ ಭತ್ತದ ಹೊಸತಳಿ ಆರ್.ಪಿ.ಬಯೋ-೨೨೬, ಮೆಕ್ಕೆಜೋಳದ ಸಂಕರಣ ತಳಿ ಆರ್.ಪಿ.ಆರ್.ಎಂ.ಹೆಚ್.-೨, ಹೆಚ್ಚಿನ ಇಳುವರಿ ನೀಡುವ ಸಜ್ಜೆಯ ಎಂ.ಬಿ.ಪಿ-೨ ಮತ್ತು ಹತ್ತಿಯ ಬಿ.ಜಿ.ಡಿ.ಹೆಚ್-೬೯೭ತಳಿಯನ್ನು ರೈತರ ಉಪಯೋಗಕ್ಕಾಗಿ ಬಡಿಗೆರ ಮಾಡಲಾಗಿದೆ ಎಂದವರು ತಿಳಿಸಿದರು.
ವಿಶ್ವವಿದ್ಯಾಲಯದ ಬೋಧನ ವಂಶೋಧನೆ ಮತ್ತು ವಿಸ್ತರಣೆ ವಿಭಾಗಗಳಿಗೆ ಸಂಬಂಧಿಸಿದಂತೆ ಕೆಲವು ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ಬೋಧನೆ ಕಾರ್ಯಯೋಜನೆಯಲ್ಲಿ ಭೀಮರಾಯನಗುಡಿ ಮತ್ತು ಕಲಬುರಗಿ ಆವರಣಗಳಲ್ಲಿ ಅವಶ್ಯಕ ಸೌಕರ್ಯವಿರುವ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪ್ರಾರಂಭಿಸುವುದನ್ನು ಯೋಜಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಮತ್ತು ರಾಜ್ಯದಾದ್ಯಂತ ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಬಗ್ಗೆ ಹೆಚ್ಚಿನ ಒತ್ತು ಕೊಡುತ್ತಿರುವುದರಿಂದ ಆಹಾರ ತಂತ್ರಜ್ಞಾನದಲ್ಲಿ ಸ್ನಾತಕ ಪದವಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಪ್ರಸ್ತಾವನೆಯನ್ನು ಕರ್ನಾಟಕ ಸರಕಾರಕ್ಕೆ ಸಲ್ಲಿಸಲಾಗಿದೆ. ಅವಶ್ಯಕತೆಗನುಗುಣವಾಗಿ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಅರಣ್ಯ ಮಹಾವಿದ್ಯಾಲಯ, ಬಳ್ಳಾರಿ ಮತ್ತು ಬೀದರ್‌ನ ಔರಾದ್ ನಗರಗಳಲ್ಲಿ ಕೃಷಿ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೀದರ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಹೊಸದಾಗಿ ಕೃಷಿ ವಿಸ್ತರಣಾ ಕೇಂದ್ರ ಪ್ರಾರಂಭಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದರು.
ವಿಶ್ವವಿದ್ಯಾಲಯದಲ್ಲಿ ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ವಿಭಾಗಗಳಲ್ಲಿ ಉತ್ಕೃಷ್ಟವಾದ ಗುಣಮಟ್ಟವನ್ನು ಸದಾ ಕಾಯ್ದುಕೊಳ್ಳಲು ಆಂತರಿಕ ಗುಣಮಟ್ಟ ಭರವಸೆ ಕೋಶವನ್ನು ಈ ವರ್ಷದಿಂದಲೇ ಪ್ರಾರಂಭಿಸಲಾಗುತ್ತಿದೆ. ಈ ಭಾಗದ ರೈತರ ಏಳ್ಗೆಯು ಗಮನದಲ್ಲಿಟ್ಟುಕೊಂಡು ಈ ವಿಶ್ವವಿದ್ಯಾಲಯವನ್ನು ರೈತರ ವಿಶ್ವವಿದ್ಯಾಲಯವನ್ನಾಗಿ ರೂಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನ ಕೃಷಿ ಶಿಕ್ಷಣ ವಿಭಾಗದ ಉಪ ಮಹಾನಿರ್ದೇಶಕ ಡಾ.ಆರ್.ಸಿ.ಅಗ್ರವಾಲ್, ರಾಯಚೂರು ಕೃಷಿ ವಿವಿಯ ಕುಲಸಚಿವ ಡಾ.ಎಂ.ಜಿ.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.