ಕೃಷಿ ವಿವಿ : ಹಗರಣಗಳ ತಾಣ – ಆರೋಪ

ರಾಯಚೂರು.ನ.07- ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಮಾಜಿ ಕುಲಪತಿಗಳಾದ ಬಿ.ವಿ.ಪಾಟೀಲ್ ಅವರಿಂದ ಹಗರಣಗಳ ತಾಣವಾಗಿದ್ದು, ಇದಕ್ಕೆ ಬೆಂಬಲವಾಗಿದ್ದು ಇದಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಸಹಕರಿಸುತ್ತಿದ್ದಾರೆಂದು ಎಂಆರ್‌ಹೆಚ್ಎಸ್ ಕಾರ್ಯದರ್ಶಿ ರವಿಕುಮಾರ ಅವರು ಆರೋಪಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಗರದ ಕೃಷಿ ವಿಶ್ವವಿದ್ಯಾಲಯವೂ ಹಗರಣಗಳ ತಾಣವಾಗಿ ಮಾರ್ಪಡುತ್ತಿದೆ. ನಿವೃತ್ತ ಕುಲಪತಿ ಡಾ.ಬಿ.ವಿ.ಪಾಟೀಲ್ ಮತ್ತು ಆತನ ಸಹಚರರಿಂದ ಲಕ್ಷಾಂತರ ರೂ. ಲಂಚ ಪಡೆದು, ಕ್ರಿಮಿನಲ್ ಪ್ರಕರಣ ಮುಚ್ಚಿ ಹಾಕಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಸಹಕರಿಸುತ್ತಿದ್ದಾರೆ. ಕುಲಪತಿಯವರ ಮಗನಾದ ಡಾ.ವಿನಯ್ ಪಾಟೀಲ್ ಪದವಿ ರದ್ದು ಪಡಿಸುವಂತೆ ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮೇ.21 ರಂದು ಕೃಷಿ ವಿವಿಯ ಕುಲಪತಿಗಳಿಗೆ ಪತ್ರ ಬರೆದು ಸೂಚಿಸಿರುತ್ತಾರೆ.
ಆದರೆ, ಮೇ.22 ರಂದು ಕೃಷಿ ವಿಶ್ವವಿದ್ಯಾಲಯ ಕುಲಪತಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ, ಕೃಷಿ ಆದಾಯ ಪ್ರಮಾಣ ಪತ್ರ ತಿದ್ದಿರುವ ಅಪರಾಧಕ್ಕಾಗಿ ನಿವೃತ್ತ ಕುಲಪತಿ ಡಾ.ಬಿ.ವಿ.ಪಾಟೀಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮನವಿ ಮಾಡಿರುತ್ತಾರೆ. ಆದರೆ, ಅವರ ಮಗನಾದ ಡಾ.ವಿನಯ್ ಪಾಟೀಲ್ ಅವರು ಕೃಷಿ ಕೋಟಾದಡಿ ಬಿಎಸ್ಸಿ ಅಗ್ರಿ ಪ್ರವೇಶಾತಿ ನೀಡಿದ್ದು, ಇವರು 2 ಲಕ್ಷವಿದ್ದ ಆದಾಯ ಪ್ರಮಾಣ ಪತ್ರವನ್ನು 6.20 ಲಕ್ಷ ಇದೆ ಎಂದು ತಿದ್ದುಪಡಿ ಮಾಡಿರುತ್ತಾರೆ. ಈ ವಿಷಯ ಕುರಿತು ಕೃಷಿ ವಿವಿ ಶಿಕ್ಷಣ ನಿರ್ದೇಶಕರಾದ ಡಾ.ಎಸ್.ಕೆ.ಮೇಟಿ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿಯ ವರದಿ ಮತ್ತು ಹೈದ್ರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯದಿಂದ ಪರೀಕ್ಷಿಸಲ್ಪಟ್ಟಿದ್ದು ದೃಢವಾಗಿದೆ.
ಈ ವಿಷಯ ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತು ರಾಜ್ಯಪಾಲರಿಗೆ ಹಲವಾರು ಭಾರೀ ಮನವಿ ಸಲ್ಲಿಸಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಕೃಷಿ ವಿಶ್ವವಿದ್ಯಾಲಯದಲ್ಲಿ ಹಲವಾರು ಹಗರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ 2011-12 ನೇ ಸಾಲಿನಲ್ಲಿ ಮಣ್ಣು ಮತ್ತು ನೀರು ಸಂರಕ್ಷಣಾ ವಿಭಾಗದ ಮುಖ್ಯಸ್ಥ ಡಾ.ನೇಮಿಚಂದ್ರಪ್ಪ ತಮ್ಮ ಮಗಳಿಗೆ ದ್ವಿತೀಯ ಪಿಯುಸಿ ಶೇ.46 ರಷ್ಟು ಅಂಕ ಪಡೆದರೂ, ಪ್ರವೇಶ ನೀಡಲಾಗಿದೆ. ಇದು ಕಾನೂನು ಬಾಹೀರ ಕೃತ್ಯಕ್ಕೆ ಸಾಕ್ಷಿಯಾಗಿದೆ.
ನಿವೃತ್ತಿ ಹೊಂದಿದ ಡಾ.ಬಿ.ವಿ.ಪಾಟೀಲ್ ಅವರು ಕೃಷಿ ವಿಶ್ವವಿದ್ಯಾಲಯದ ಕಛೇರಿಗೆ ಆಗಮಿಸಿ ಪ್ರತಿನಿತ್ಯ ಅಲ್ಲಿಯ ಅಧಿಕಾರಿಗಳಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ಇವರ ವಿರುದ್ಧ ಇದುವರೆಗೂ ಯಾವುದೇ ಕ್ರಮಗಳು ಕೈಗೊಳ್ಳುತ್ತಿಲ್ಲ. ಇದರಲ್ಲಿ ರಾಜಕಾರಣಿಗಳ ಕುಮ್ಮಕ್ಕು ಕಾಣುತ್ತಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಸಹಕರಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಟಿ.ಮಾರೆಪ್ಪ, ಕೆ.ಉಮೇಶಬಾಬು, ಮಹಾದೇವ, ಕೆ.ಟಿ.ಆನಂದ, ಕುರ್ಡಿ ನರಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.