ಕೃಷಿ ವಿವಿ : ಸರ್ಕಾರ ಆದೇಶ ಗಾಳಿಗೆತೂರಿ, ನೇಮಕಾತಿ – ಟೆಂಡರ್

ಕುಲಪತಿ ಕಟ್ಟಿಮನಿ, ಚಂದರಗಿ – ಅಂಧಾ ದರ್ಬಾರ್
ರಾಯಚೂರು.ನ.09- ಕೃಷಿ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಈ ಭಾಗದ ರಾಜಕಾರಣಿ, ಜನಪ್ರತಿನಿಧಿ ಹಾಗೂ ಹಿರಿಯ ಮುತ್ಸದ್ಧಿ, ಯುವಕರ ನಿರಂತರ ಹೋರಾಟದಿಂದ ಅಸ್ತಿತ್ವಕ್ಕೆ ಬಂದ ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಕುಲಪತಿ ಹಾಗೂ ಆಡಳಿತಾಧಿಕಾರಿಗಳ ಅಂಧಾ ದರ್ಬಾರ್‌ಗೊಳಗಾಗಿ ಜೇಷ್ಠತೆ ಹೊಂದಿದವರು ಅನ್ಯಾಯಕ್ಕೆ ಗುರಿಯಾಗುವ ಮತ್ತು ಭಾರೀ ಅಪರ ತಪರ ಮೂಲಕ ವಿಶ್ವವಿದ್ಯಾಲಯ ಹಗರಣಗಳ ಕೂಪದಂತಾಗಿದೆಂಬ ಆರೋಪ ತೀವ್ರಗೊಂಡಿವೆ.
ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಮತ್ತು ಆಡಳಿತಾಧಿಕಾರಿ ಡಾ.ಡಿ.ಎಂ.ಚಂದರಗಿ ಅವರ ಮೇಲೆ ನೇರವಾಗಿ ಆರೋಪ ಮಾಡಲಾಗಿದೆ. ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರು, ವಿಶ್ವವಿದ್ಯಾಲಯದ ಅಪರ ತಪರ ಬಗ್ಗೆನಿಯಮ ಉಲ್ಲಂಘನೆ ಮತ್ತು 371 (ಜೆ) ಮೀಸಲಾತಿಯಡಿ 8:2 ರನ್ವಯ ನೇಮಕಾತಿ ಪ್ರಕ್ರಿಯೆ ನಿರ್ವಹಿಸದೇ, ಸರ್ಕಾರ ಆದೇಶಗಳನ್ನು ಗಾಳಿಗೆತೂರಿ ತಮ್ಮದೇ ದರ್ಬಾರ್ ನಡೆಸುವ ಕಟ್ಟಿಮನಿ ಅವರಿಗೆ ಚಂದರಗಿ ಅವರು ಸಾತ್ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಮತ್ತೊಂದು ಕಡೆ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ತ್ರಿವಿಕ್ರಮ್ ಜೋಷಿ ಅವರು ಸಹ ಆಡಳಿತಾಧಿಕಾರಿಗಳಿಗೆ ಸುಧೀರ್ಘ ಎರಡು ಪುಟ ಪತ್ರ ಬರೆದು ಇದಕ್ಕೆ ಸಂಬಂಧಿಸಿದ ಪ್ರತಿಗಳನ್ನು ಕುಲಪತಿಗಳು ಸೇರಿದಂತೆ 6 ಜನರಿಗೆ ರವಾನಿಸಿದ್ದಾರೆ.
ವಿವಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ವರ್ಗ ಒತ್ತಡ ಮತ್ತು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಹ ಪರಿಸ್ಥಿತಿಯೊಂದಿಗೆ ಈ ಭಾಗದ ಜನರ ಆಶಾಕಿರಣವಾದ ಅನುಚ್ಛೇದ 371 (ಜೆ) ಜಾರಿಯಾಗಿ 7 ವರ್ಷ ಕಳೆದರೂ, ನೌಕರರು ಮತ್ತು ವಿದ್ಯಾರ್ಥಿಗಳು ಸಂವಿಧಾನಿಕ ಪ್ರದತ್ತ ಮೀಸಲಾತಿ ಸೌಲಭ್ಯ ವಂಚಿತರಾಗಿ ತೀವ್ರ ಅಸಮಾಧಾನಕ್ಕೆ ಗುರಿಯಾಗಿದ್ದಾರೆಂದು ಪಾಪಾರೆಡ್ಡಿ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ವಂಚನೆ ಮುಂದುವರೆಸಿದರೇ, ಹೋರಾಟ ಅನಿವಾರ್ಯವಾಗುತ್ತದೆ. ವಿಶ್ವವಿದ್ಯಾಲಯದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಇದಕ್ಕೆ ಆಡಳಿತಾಧಿಕಾರಿ ಡಾ.ಡಿ.ಎಂ.ಚಂದರಗಿ ಅವರೇ ಕಾರಣರಾಗಿದ್ದಾರೆಂದು ಆರೋಪಿಸಲಾಗಿದೆ. 371 (ಜೆ) ಅನ್ವಯ 8:2 ರಂತೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದರೆ, 8 ಹುದ್ದೆಗಳು ಮತ್ತು ಇತರರಿಗೆ 2 ಹುದ್ದೆ ನಿಗದಿ ಪಡಿಸಿ ಕರ್ನಾಟಕ ಸರ್ಕಾರ ಕೃಷಿ ಇಲಾಖೆಯೂ 2015 ರಲ್ಲಿಯೇ ಅನುಮೋದನೆ ನೀಡಿ, ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆದೇಶಿಸಿದ್ದರೂ, ವಿಶ್ವವಿದ್ಯಾಲಯ ಕೇವಲ ನೆಪಮಾತ್ರಕ್ಕೆ ಅಧಿಸೂಚನೆ ಹೊರಡಿಸಿರುವುದು ಬಿಟ್ಟರೇ, ಹುದ್ದೆ ಭರ್ತಿ ಮಾಡಿಲ್ಲ.
ಇದಕ್ಕೆ ಆಡಳಿತಾಧಿಕಾರಿಗಳಾದ ಚಂದರಗಿ ಅವರು ಮೂಲ ಕಾರಣ. 371 (ಜೆ) ಮೀಸಲಾತಿ ಅನ್ವಯ ಕುಲ ಸಚಿವರು ಶಿಕ್ಷಣ ನಿರ್ದೇಶಕರ ಹುದ್ದೆಗಳು ಸ್ಥಳೀಯರಿಗೆ ಮೀಸಲಾಗಿದ್ದು, ಈ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಿಗುವ ಸೌಲಭ್ಯ ವಂಚಿಸಲು ಹುನ್ನಾರ ನಡೆದಿದೆ. ಕುಲಪತಿಗಳು ತಮಗೆ ಇಷ್ಟಬಂದಂತೆ ಒಬ್ಬರಿಗೆ ಎರಡು ಹುದ್ದೆ ನೀಡಿ, ದುರಾಡಳಿತ ನಡೆಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ಮತ್ತು ಶಿಕ್ಷಕೇತರ ನೇರ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ಲಕ್ಷಗಟ್ಟಲೆ ಹಣ ವಸೂಲಿ ಮಾಡಿ, ನೇಮಕಾತಿ ಆದೇಶ ನೀಡಿದಂತಹ ಘಟನೆಗಳಿವೆ. ಇದಕ್ಕೆ ಪೂರಕ ಎನ್ನುವಂತೆ ಪಶು ವೈದ್ಯಕೀಯ ಮತ್ತು ಪಶು ಸಂಗೋಪನಾ ಪದವಿ ಅರ್ಹತೆ ಇದ್ದ ಹುದ್ದೆಗೆ ಹೈನುಗಾರಿಕೆ ವಿಜ್ಞಾನದಲ್ಲಿ ಪದವಿ ಪಡೆದ ಅಭ್ಯರ್ಥಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆ ಮಾಡಿ ಆದೇಶಿಸಲಾಗಿದೆ.
ಸಿಬ್ಬಂದಿಗೆ ಬಡ್ತಿ ನೀಡುವಾಗಲು ಕೂಡ ಹಣದ ಬೇಡಿಕೆ ಇಡುತ್ತಿದ್ದಾರೆನ್ನುವ ದೂರು ಕೇಳಿ ಬರುತ್ತಿವೆ. ಇದರಿಂದ ವಿಶ್ವವಿದ್ಯಾಲಯ ಘನತೆಗೆ ಚ್ಯುತಿ ಉಂಟಾಗಿದೆಂದು ಪಾಪಾರೆಡ್ಡಿ ಅವರು ಆರೋಪಿಸಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಸೇವೆ ಮಾಡುತ್ತಿರುವವರು ಅಕಾಲಿಕ ನಿಧನ ಹೊಂದಿದ್ದಾಗ ಸರ್ಕಾರದ ನಿಯಮ ಪ್ರಕಾರ ಅನುಕಂಪ ಆಧಾರದ ಮೇಲೆ ಆ ಸಿಬ್ಬಂದಿಯ ಸಂಬಂಧಿಕರಿಗೆ ನೇಮಕಾತಿ ಮಾಡಿಕೊಡುವುದು ನಿಯಮವಾಗಿದೆ.
ಆದರೆ, ಇಂತಹ ಘಟನೆಗಳಲ್ಲಿಯೂ ಕೂಡ ಅರ್ಹ ಸಂಬಂಧಿಸಿ ಅಭ್ಯರ್ಥಿ ನೇಮಕಾತಿ ಆದೇಶ ಪಡೆಯಲು ಲಕ್ಷಗಟ್ಟಲೆ ಹಣ ನೀಡಬೇಕಾದಂತಹ ಅಮಾನವೀಯ, ಶೋಚನೀಯ ಕೃತ್ಯ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ. ಈ ಲೋಪದೋಷ ಬಗ್ಗೆ ಯಾರಾದರೂ, ಸಿಬ್ಬಂದಿ ಚಕಾರವೆತ್ತಿದ್ದರೆ, ಅಂತಹವರಿಗೆ ಕೂಡಲೇ ವರ್ಗಾವಣೆ ಅಥವಾ ಅಮಾನತು ಬೆದರಿಕೆಯೊಡ್ಡುವ ಭಯದ ವಾತಾವರಣ ವಿಶ್ವವಿದ್ಯಾಲಯದಲ್ಲಿ ಇರುವುದು ಖಂಡನೀಯ.
ಆಡಳಿತಾಧಿಕಾರಿಗಳು ಮತ್ತು ಹಣಕಾಸು ಹುದ್ದೆಗಳು ನಿಯಮಾನುಸಾರ ಶಿಕ್ಷಕೇತರ ಹುದ್ದೆಗಳಾಗಿದ್ದು, ಈ ಹುದ್ದೆಗಳಿಗೆ ಅರ್ಹ ಶಿಕ್ಷಕೇತರ ಸಿಬ್ಬಂದಿ ಯೋಜನೆ ಮಾಡದೆ, ತಮಗೆ ಬೇಕಾದ ಅರ್ಹತೆಯಿಂದ ಪ್ರಾಧ್ಯಾಪಕರನ್ನು ನಿಯೋಜನೆ ಮಾಡಿ, ಕಾನೂನು ಬಾಹಿರ ಆಡಳಿತ ನಡೆಸಲಾಗುತ್ತದೆ. ವಿಶ್ವವಿದ್ಯಾಲಯದಲ್ಲಿ ನೇಮಕಾತಿಗಳಿಗೆ ಸಂಬಂಧಿಸಿ ಸರ್ಕಾರದ ಆದೇಶ ಮತ್ತು ಸುತ್ತೋಲೆಗಳಿಗೆ ಕವಡೆ ಕಿಮ್ಮತ್ತು ನೀಡದೆ, ಆಡಳಿತಾಧಿಕಾರಿ ತಮ್ಮದೇಯಾದ ಪರ್ಯಾಯ ಆಡಳಿತ ನಡೆಸುತ್ತಿದ್ದಾರೆ.
ವಿಶ್ವವಿದ್ಯಾಲಯ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಸ್ಥಿತಿ ಸುಧಾರಿಸುವವರೆಗೂ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸಬಾರದೆಂಬ ಸಾಮಾನ್ಯ ನಿಯಮಗಳನ್ನು ಕಡೆಗಣಿಸಿ, ಕುಲಪತಿಗಳು ಸ್ಮಾರ್ಟ್ ಕ್ಯಾಂಪನ್ ನೆಪದಲ್ಲಿ 5 ಕೋಟಿ ಟೆಂಡರ್ ಕರೆದು, ಒಂದೇ ಕಂಪನಿಗೆ ಗುತ್ತಿಗೆ ನೀಡಿ, ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿದ್ದಾರೆ. ಆನ್ ಲೈನ್ ಮತ್ತು ವರ್ಚುವಲ್ ತರಗತಿಗಾಗಿ ನಾಲ್ಕೈದು ಲಕ್ಷಕ್ಕೆ ನಿರ್ಮಾಣ ಮಾಡಬಹುದಾದ ತರಗತಿಗಳಿಗೆ 10 ಲಕ್ಷದಂತೆ ಆದೇಶಕೊಟ್ಟು ಹಣ ಲೂಟಿ ಮಾಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಮಾಡಲಾಗಿದೆ.
ವಿಶ್ವವಿದ್ಯಾಲಯದಲ್ಲಿ ಇಂತಹ ಅನೇಕ ಅಪರತಪರಗಳು ನಡೆಯುತ್ತಲಿವೆ. ರಾಜ್ಯದ ಕೃಷಿ ಇಲಾಖೆಯಿಂದ ತ್ರಿವಿಕ್ರಮ್ ಜೋಷಿ ಅವರ ಪತ್ರಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ಬರೆದು, ವಿಶ್ವವಿದ್ಯಾಲಯದಲ್ಲಿ ನಿಯಮ ಉಲ್ಲಂಘನೆ ಪ್ರಕರಣ ಬಗ್ಗೆ ಆಕ್ಷೇಪವೆತ್ತಿ, ಇವುಗಳನ್ನು ಪರಿಶೀಲಿಸಿ, ಕೃಷಿ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ವಿಭಾಗಗಳ ಮುಖ್ಯಸ್ಥರ ಯೋಜನೆ ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿದೆ. ಆದರೆ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಶ್ವವಿದ್ಯಾಲಯದ ಕುಲಪತಿ ಮತ್ತು ಆಡಳಿತಾಧಿಕಾರಿ ಅಂಧ ದರ್ಬಾರ್‌ಗೆ ನಿದರ್ಶನವಾಗಿದೆ.
ನ.4 ರಂದು ತ್ರಿವಿಕ್ರಮ ಜೋಷಿ ಅವರು ನಿಯಮ ಉಲ್ಲಂಘನೆಗೆ ಸಂಬಂಧಿಸಿ, ಆಕ್ಷೇಪವೆತ್ತಿ ಲಿಖಿತ ದೂರು ನೀಡಿದ್ದಾರೆ. ವಿವಿಯಲ್ಲಿ ಜೇಷ್ಠತೆಗನುಗುಣವಾಗಿ ವಿವಿಧ ವಿಭಾಗಗಳಿಗೆ ಮುಖ್ಯಸ್ಥರ ನೇಮಕ ವಾಡಿಕೆಯಾಗಿದೆ. ಆದರೆ, ವಿಶ್ವವಿದ್ಯಾಲಯದಲ್ಲಿ 6-9-2019 ರಲ್ಲಿ ನಡೆದ ಸಭೆಯಾನುಸಾರ ಕೃಷಿ ವಿಶ್ವವಿದ್ಯಾಲಯದ ಡೀನ್ ಆಗಿ ಮಹಾವಿದ್ಯಾಲಯ ವಿವಿಧ ವಿಭಾಗಗಳಿಗೆ ಮುಖ್ಯಸ್ಥರನ್ನು ನೇಮಿಸಿ, ಆದೇಶ ಹೊರಡಿಸಲಾಗಿದೆ. ಈ ಆದೇಶ ಚಾಲ್ತಿಯಲ್ಲಿರುವ ನಿಯಮ ಮತ್ತು ಆದೇಶ ಸ್ಪಷ್ಟವಾಗಿ ಉಲ್ಲಂಘಿಸಿದೆಂದು ದೂರಿನಲ್ಲಿ ತಿಳಿಸಿದ್ದಾರೆ.