ಕೃಷಿ ವಿವಿ ವಿದ್ಯಾರ್ಥಿಗಳಿಂದ ರೈತರ ಜತೆ ಸಂವಾದ

ಕೋಲಾರ,ಸೆ.೨೫- ತಾಲೂಕಿನ ರಾಜಕಲ್ಲಹಳ್ಳಿ ಗ್ರಾಮದಲ್ಲಿ ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ರೈತರೊಂದಿಗೆ ಗುಂಪು ಚರ್ಚೆ ಮತ್ತು ಸಂವಾದ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣ ಕೃಷಿ ಕಾರ್ಯಾನುಭವ ಭಾಗವಾಗಿ ೪೦ ದಿನಗಳಿಂದ ವಾಸ್ತವ್ಯ ಹೂಡಿರುವ ಅಂತಿಮ ಕೃಷಿ ಪದವಿ ವಿದ್ಯಾರ್ಥಿಗಳ ತಂಡದ ನಾಯಕಿ ಚಿಕ್ಕಮಗಳೂರಿನ ಸಹನಾ ಮಾರ್ಗದರ್ಶನದಲ್ಲಿ, ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಗ್ರಾಮದ ಕೃಷಿಕರೊಂದಿಗೆ ಮಣ್ಣಿನ ಮಾದರಿ ಮಣ್ಣಿನ ಪರೀಕ್ಷೆ ಹಾಗೂ ಹಸಿರೆಲೆ ಗೊಬ್ಬರದ ಬಗ್ಗೆ ಸಂವಾದ ನಡೆಸಿ ಗುಂಪು ಚರ್ಚೆಯನ್ನು ಏರ್ಪಡಿಸಿದ್ದರು.
ಈ ಸಂವಾದ ಕಾರ್ಯಾಗಾರದಲ್ಲಿ ನೂರಾರು ರೈತರು ಭಾಗವಹಿಸಿ ವಿದ್ಯಾರ್ಥಿಗಳಿಂದ ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಆರೋಗ್ಯದ ಕುರಿತು ಹಲವಾರು ವಿಷಯಗಳನ್ನು ವಿನಿಮಯ ಮಾಡಿಕೊಂಡರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಣ್ಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ನಳಿನ ಸಂವಾದ ನಡೆಸಿ ಎಲ್ಲರೂ ಕಡ್ಡಾಯವಾಗಿ ಬೆಳೆ ಮಾಡುವ ಮುನ್ನ ಪರೀಕ್ಷೆ ಮಾಡಿಸಿ ರೈತರು ಕೃಷಿ ಮಾಡಬೇಕು. ಮನಸೋ ಇಚ್ಛೆ ರಾಸಾಯನಿಕ ಗೊಬ್ಬರ ಕೀಟನಾಶಕ ಬಳಸಿದರೆ ಮುಂದಿನ ಕೆಲವೇ ವರ್ಷಗಳಲ್ಲಿ ನಮ್ಮ ಭೂಮಿ ಬರಡಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿ ಮಣ್ಣಿನ ಸಂರಕ್ಷಣೆ ಮತ್ತು ಅದರ ಉಪ ಯೋಗದ ಕುರಿತು ರೈತರಿಗೆ ಮಾಹಿತಿ ನೀಡಿದರು.
ಬೇಸಾಯ ವಿಭಾಗದ ಪ್ರಾಧ್ಯಾಪಕಿ ಡಾ. ಶುಭಶ್ರೀ ಮಾತನಾಡಿ, ಹಸಿರು ಕ್ರಾಂತಿಯ ಪರಿಣಾಮ ನಮ್ಮ ದೇಶವು ಆಹಾರ ಉತ್ಪಾದನೆಯಲ್ಲಿ ಮುಂದಿದ್ದರೂ ಆರೋಗ್ಯಕರ ಆಹಾರವನ್ನು ಉತ್ಪಾದಿಸುತ್ತಿಲ್ಲ. ಎಂದು ವಿಷಾದಿಸಿ ರಾಸಾಯನಿಕ ಗೊಬ್ಬರದೊಂದಿಗೆ ತಮ್ಮ ಜಮೀನಿನಲ್ಲಿ ನೈಸರ್ಗಿಕವಾಗಿ ದೊರೆಯುವ ಸಂಪನ್ಮೂಲದ ಹಸಿರಲೆ ಗೊಬ್ಬರವನ್ನು ಇದರ ಜೊತೆಗೆ ಬಳಸಿ ಬೆಳೆಯ ಇಳುವರಿಯನ್ನು ಹೇಗೆ ತೆಗೆಯಬಹುದು ಎಂದು ರೈತರಿಗೆ ಮಾಹಿತಿ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ಕೃಷಿ ವಿದ್ಯಾರ್ಥಿಗಳೊಂದಿಗೆ ಗ್ರಾಮದ ಪ್ರಗತಿಪರ ಕೃಷಿಕರಾದ ಸತ್ಯನಾರಾಯಣ, ವೆಂಕಟರಾಮೇಗೌಡ, ನಂಜುಂಡೇಗೌಡ, ಕೆಸಿ ಮಂಜುನಾಥ್, ವೆಂಕಟೇಶಪ್ಪ ಮತ್ತು ರವಿ ರವರು ಭಾಗವಹಿಸಿ ಅನುಭವ ಹಂಚಿಕೊಂಡರು.