ಕೃಷಿ ಮೇಳದಲ್ಲಿ ಹಳ್ಳಿಕಾರ್ ಹೋರಿ ಆಕರ್ಷಣೆ

ಬೆಂಗಳೂರು, ನ. ೧೨- ನಗರದ ಜಿಕೆವಿಕೆ ಆವರಣದಲ್ಲಿ ಆರಂಭವಾಗಿರುವ ಕೃಷಿ ಮೇಳದಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹಳ್ಳಿಕಾರ್ ತಳಿಯ ಕೃಷ್ಣ ಹೋರಿ ಎಲ್ಲರ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಅವನತಿಯ ಅಂಚಿನಲ್ಲಿರುವ ಹಳ್ಳಿಕಾರ್ ತಳಿಗೆ ಹೊರ ರಾಜ್ಯಗಳಿಂದ ಬೇಡಿಕೆ ಇದೆ. ಹೀಗಾಗಿ ಕೃಷ್ಣನ ಬೆಲೆ ಕೋಟಿಗಟ್ಟಲೇ ಎಂದು ಹೋರಿಯ ಮಾಲೀಕ ಬೋರೆಗೌಡ ಹೇಳಿದ್ದಾರೆ.
ಕೃಷಿ ಮೇಳದಲ್ಲಿ ಅಳಿವಿನಂಚಿನಲ್ಲಿರುವ ಹಳ್ಳಿಕಾರ್ ತಳಿಯ ಹೋರಿಯನ್ನು ಪ್ರದರ್ಶನಕ್ಕಿಡಲಾಗಿತ್ತು.ಬಹಳ ವಿಶೇಷವಾದ ತಳಿಯಾದ್ದರಿಂದ ಜಿಟಿಜಿಟಿ ಮಳೆಯ ನಡುವೆಯೂ ಜನ ’ಕೃಷ್ಣ’ (ಹೋರಿ)ನನ್ನು ಬೆರಗುಗಣ್ಣಿನಿಂದ ನೋಡಿ ಖುಷಿಪಟ್ಟರು.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಿಂದ ಒಡೆಯನಸಹಿತ ಬಂದಿದ್ದ ‘ಕೃಷ್ಣ’ ಉದ್ದನೆಯ ಹಾರ ಧರಿಸಿ ಅಲಂಕಾರಗೊಂಡಿದ್ದ. ಈತನ ಮೌಲ್ಯ ಬರೋಬ್ಬರಿ ೧ ಕೋಟಿ ರೂಪಾಯಿಗೂ ಹೆಚ್ಚು. ‘ದಕ್ಷಿಣ ಭಾರತದಲ್ಲೇ ಹೋರಿಗಳ ಮೂಲ ತಳಿ ಈ ಹಳ್ಳಿಕಾರ್. ಸದ್ಯ ಇದು ನಶಿಸಿ ಹೋಗುತ್ತಿರುವ ತಳಿಯಾಗಿದೆ. ಕೃಷ್ಣನನ್ನು ಉತ್ತಮ ಗುಣಮಟ್ಟದ ಬಿತ್ತನೆಗಾಗಿ ಬಳಸಲಾಗುತ್ತದೆ. ಪ್ರೌಢಾವಸ್ಥೆಗೆ ಬಂದ ನಂತರ ಸಂತಾನೋತ್ಪತ್ತಿಗಾಗಿ ಬಳಸಿಕೊಳ್ಳಲಾಗುತ್ತಿದೆ.’
ಇದರಿಂದ ಉತ್ತಮ ಗುಣಮಟ್ಟದ ಹಳ್ಳಿಕಾರ್ ಕರುಗಳು ಹುಟ್ಟಲು ಸಾಧ್ಯ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳಿಂದಲೂ ಬೇಡಿಕೆ ಇದೆ. ಹೀಗಾಗಿ, ‘ಕೃಷ್ಣನ ಬೆಲೆ ಕೋಟಿಗಟ್ಟಲೆ’ ಎಂದು ಹೋರಿಯ ಮಾಲೀಕ ಬೋರೇಗೌಡ ತಿಳಿಸಿದರು. ಕೃಷ್ಣ ಹೋರಿಗೆ ೩ ವರ್ಷ ೮ ತಿಂಗಳು ವಯಸ್ಸಾಗಿದೆ. ಇದು ೧೫-೨೦ ವರ್ಷ ಬದುಕಬಲ್ಲದು. ತಿಂಗಳಿಗೆ ಎಂಟು ಬಾರಿ ಸಂತಾನೋತ್ಪತ್ತಿಗೆ ಇದರಿಂದ ವೀರ್ಯಾಣು ಸಂಗ್ರಹಿಸಲಾಗುತ್ತದೆ ಎಂದರು.