ಕೃಷಿ ಮಾಹಿತಿ ರಥಗಳಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಚಾಲನೆ

ಕಲಬುರಗಿ,ಜೂ.7: ಪ್ರಸಕ್ತ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ, ತೊಗರಿ ನೆಟೆ ರೋಗ ನಿರ್ವಹಣೆ, ಬಸವನ ಹುಳು ನಿಯಂತ್ರಣ ಸೇರಿದಂತೆ ರೈತ ಬಾಂಧವರಿಗೆ ಹತ್ತಾರು ಮಾಹಿತಿಗಳನ್ನು ಒದಗಿಸುವ ಕೃಷಿ ಇಲಾಖೆಯ ಕೃಷಿ ಮಾಹಿತಿ ರಥ ಸಂಚಾರಿ ವಾಹನಗಳಿಗೆ ಇಂದು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಅವರಣದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಳೆದ ವರ್ಷ ಈ ಭಾಗದ ಪ್ರಮುಖ ಬೆಳೆ ತೊಗರಿ ನೆಟೆ ರೋಗದಿಂದ ತತ್ತರಿಸಿ ಬಹಳಷ್ಟು ಹಾನಿಯಾಗಿತ್ತು. ಈ ವರ್ಷ ಅದನ್ನು ಮರುಕಳಿಸದಂತೆ ಹೊಸ ತಳಿಯ ಬೀಜ ನೀಡಲಾಗುತ್ತಿದೆ. ಜೊತೆಗೆ ನೆಟೆ ರೋಗ ನಿರ್ವಹಣಾ ಕ್ರಮಗಳು, ಪರ್ಯಾಯ ಬೆಳೆ ಬಿತ್ತನೆಗೆ ಸಲಹೆ, ಬಸವನ ಹುಳು ನಿಯಂತ್ರಣ ಸಂಬಂಧ ರೈತಾಪಿ ವರ್ಗಕ್ಕೆ ಹಳ್ಳಿಗಳಿಗೆ ಹೋಗಿ ಈ ಸಂಚಾರಿ ವಾಹನಗಳು ಮಾಹಿತಿ ನೀಡಲಿವೆ. ರೈತ ಬಾಂಧವರು ಇದರ ಪ್ರಯೋಜನೆ ಪಡೆಯಬೇಕು. ತಾಂತ್ರಿಕ ಮಾಹಿತಿಗೆ ರೈತ ಸಂಪರ್ಕ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.
ತೊಗರಿ ನೆಟೆ ರೋಗಕ್ಕೆ ಪರಿಹಾರ:
ಕಳೆದ ವರ್ಷ ಜಿಲ್ಲೆಯಲ್ಲಿ ನೆಟೆ ರೋಗದಿಂದ ಬಹಳಷ್ಡು ತೊಗರಿ ಬೆಳೆ ಹಾನಿಯಾಗಿದ್ದು, ಹಿಂದಿನ ಸರ್ಕಾರ ಪರಿಹಾರ ಮಾತ್ರ ಘೋಷಿಸಿದ್ದು, ಪರಿಹಾರ ನೀಡಿರಲಿಲ್ಲ. ಇದೀಗ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಚರ್ಚೆ ಮಾಡಲಾಗುತ್ತಿದೆ ಎಂದರು.
ಮಾಹಿತಿ ರಥದ ಸಂಚಾರದ ವಿವರ:
ಕೃಷಿ ಮಾಹಿತಿ ರಥಗಳು ಒಟ್ಟು 14 ಇದ್ದು, ಪ್ರತಿ ತಾಲೂಕಿಗೆ 2 ರಂತೆ ಜಿಲ್ಲೆಯ 32 ಹೋಬಳಿಗಳಲ್ಲಿ ವಾಹನಗಳು ಸಂಚರಿಸಲಿವೆ. ಈ ರಥಗಳು ಪ್ರತಿ ತಾಲೂಕಿನ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸಂಚರಿಸಿ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ, ನೆಟೆ ರೋಗ, ಬಸವನ ಹುಳು ನಿಯಂತ್ರಣ ಮತ್ತು ಹತೋಟಿ ಕ್ರಮದ ಕುರಿತು ಧ್ವನಿವರ್ಧಕ ಮೂಲಕ ಜಿಂಗಲ್ಸ್ ಪ್ರಸಾರದ ಜೊತೆಗೆ ಕರಪತ್ರಗಳನ್ನು ರೈತರಿಗೆ ಹಂಚುವ ಮೂಲಕ ಮಾಹಿತಿ ನೀಡಲಾಗುತ್ತದೆ.
ಇದೇ ಸಂದರ್ಭದಲ್ಲಿ ರೈತರಿಗೆ ದೊರೆಯುವ ಯೋಜನೆಗಳು, ಬೀಜೋಪಚಾರ, ಪಿ.ಎಂ- ಕಿಸಾನ್ ಈ-ಕೆವೈಸಿ, ತೊಗರಿ ನೆಟ ರೋಗ ಹಾಗೂ ಬಸವನ ಹುಳು ನಿಯಂತ್ರಣದ ಕುರಿತು ಕರಪತ್ರಗಳನ್ನು ಸಹ ಸಚಿವರು ಬಿಡುಗಡೆಗೊಳಿಸಿದರು.
ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ಉಪನಿರ್ದೇಶಕರಾದ ಸೋಮಶೇಖರ ಬಿರಾದಾರ, ಅನುಸೂಯಾ, ಸಹಾಯಕ ನಿರ್ದೇಶಕ ಚಂದ್ರಕಾಂತ ಜೀವಣಗಿ, ಆಹಾರ ಇಲಾಖೆ ಉಪನಿರ್ದೇಶಕ ಶಾಂತಗೌಡ ವಿ. ಗುಣಕಿ, ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.