ಕೃಷಿ ಭೂಮಿಗೆ ನೀರು ನುಗ್ಗಿ ಬೆಳೆಗೆ ಹಾನಿ 

ಉಡುಪಿ, ನ.೨೧- ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೇರಾಯಿ ಬೆಟ್ಟು ಎಂಬಲ್ಲಿ ಉಪ್ಪುನೀರು ತಡೆ ಅಣೆಕಟ್ಟಿನಲ್ಲಿ ನದಿಯ ಸಿಹಿ ನೀರು ಏರಿಕೆಯಾಗಿ ಹೇರೂರಿನ  ರೈತರ ಕೃಷಿ ಭೂಮಿಗೆ ನುಗ್ಗಿ ಬೆಳೆ ಹಾನಿಯಾಗಿರುವ ಘಟನೆ ನಡೆದಿದೆ.

ಸಣ್ಣ ನೀರಾವರಿ ಇಲಾಖೆಯಿಂದ ೩೫ ಕೋಟಿ ರೂ. ವೆಚ್ಚದ ಸೇತುವೆ ಸಹಿತ ಉಪ್ಪು ನೀರು ತಡೆ ಅಣೆಕಟ್ಟು ಮಂಜೂರಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉಪ್ಪುನೀರು ತಡೆ ಗೇಟ್ ಅಳವಡಿಸಿರುವುದರಿಂದ ನದಿಯಲ್ಲಿ ಸಿಹಿ ನೀರು ಏರಿಕೆಯಾಗಿ ಹೇರೂರಿನ ಕೆಲವು ಭಾಗದಲ್ಲಿ ನದಿಯನ್ನು ಸಂಪರ್ಕಿಸುವ ತೊಡಿನಲ್ಲಿ ಅಡ್ಡಲಾಗಿ ಕಿಂಡಿ ಅಣೆಕಟ್ಟು ಮತ್ತು ನದಿ ದಂಡೆ ಕಾಮಗಾರಿ ನಡೆಸಲು ಬಾಕಿ ಇರುವುದ ರಿಂದ ನೀರು ರೈತರ ಕೃಷಿ ಭೂಮಿಗೆ ನುಗ್ಗಿತ್ತೆನ್ನಲಾಗಿದೆ. ಇದಕ್ಕೆ ತಾಂತ್ರಿಕವಾಗಿ ಪರಿಹಾರ ಮಾಡುವ ನಿಟ್ಟಿನಲ್ಲಿ ಶಾಸಕ ಕೆ.ರಘುಪತಿ ಭಟ್ ಇಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುಂದಿನ ಎರಡು ದಿನಗಳ ಒಳಗಾಗಿ ಸರಿಯಾದ ಯೋಜನೆ ಗಳನ್ನು ರೂಪಿಸಿ ಸಮಸ್ಯೆ ಪರಿಹಾರಿಸಲು ಶಾಸಕರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಚಾಂತಾರು ಗ್ರಾಪಂ ಅಧ್ಯಕ್ಷ ಬೇಬಿ, ಗ್ರಾಪಂ ಸದಸ್ಯರು ಗಳಾದ ಉದಯ ಕಾಮತ್, ಮೀರಾ ಸದಾನಂದ ಪೂಜಾರಿ, ಹೇಮಾ ಅಶೋಕ್, ರಾಘು ಕೊಳಂಬೆ, ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಚಿನ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.