ಕೃಷಿ ಪರಿಕರ ಮಾರಾಟಗಾರರು ರೈತರ ಅಭಿವೃದ್ಧಿಗೆ ಶ್ರಮಿಸಲಿ: ಪಿ.ಮಲ್ಲೇಶಿ

ವಿಜಯಪುರ, ಮಾ.31-ಕೃಷಿ ವಿಶ್ವವಿದ್ಯಾಲಯ ಧಾರವಾಡದ ಅಡಿಯಲ್ಲಿ ಕೃಷಿ ಮಹಾವಿದ್ಯಾಲಯ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಣಿತ ವಿಜ್ಞಾನಿಗಳಿಂದ ಹೊಸ ಹೊಸ ತಂತ್ರಜ್ಞಾನಗಳನ್ನು ಪಡೆದುಕೊಂಡು ರೈತರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಬೇಕು ಎಂದು ಧಾರವಾಡ ಕೃಷಿ.ವಿ.ವಿ, ವ್ಯವಸ್ಥಾಪನಾ ಮಂಡಳಿ ಸದಸ್ಯ ಪಿ. ಮಲ್ಲೇಶಿ ಹೇಳಿದರು.
ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಪರಿಕರಗಳ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮಾ(ದೇಸಿ) ಕೋರ್ಸ ಉದ್ಘಾಟಣಾ ಸಮಾರಂಭದಲ್ಲಿ ಮಾತನಾಡಿದ ಅವರು ರೈತರ ಅಭಿವೃದ್ಧಿಗಾಗಿ ಉತ್ತಮ ಗುಣಮಟ್ಟದ ಬೀಜ, ಗೊಬ್ಬರ, ಔಷಧಿಗಳನ್ನು ವಿತರಿಸಬೇಕು ಹಾಗೂ ಅವರಿಗೆಂದೂ ಮೋಸ ಮಾಡಬಾರದೆಂದು ಸಲಹೆ ನೀಡಿದರು.
ಮುಖ್ಯ ಅಥಿತಿಗಳಾಗಿ ಆನಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಧಾರವಾಡ ಕೃಷಿ ವಿಶ್ವವಿದ್ಯಾಲಯ ನಿರ್ದೇಶಕ ಸಮೆತಿ(ಉ) ಹಾಗೂ ವಿಸ್ತರಣಾ ನಿರ್ದೇಶಕ ಡಾ. ರಮೇಶ ಬಾಬು ಪರಿಕರ ಮಾರಾಟಗಾರರನ್ನುದ್ದೇಶಿಸಿ ಮಾತನಾಡುತ್ತಾ, ವಿವಿಧ ವಿಷಯಗಳಲ್ಲಿ ಪ್ರಚಲಿತ ಜ್ಞಾನವನ್ನು ವಿವಿಧ ವಿಷಯ ತಜ್ಞರಿಂದ ಪಡೆದುಕೊಂಡು ರೈತರ ಆದಾಯ ಹೆಚ್ಚಿಸಲು ಸಹಕಾರಿಯಾಗಬೇಕೆಂದು ತಿಳಿಸಿದರು. ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಕಾಯ್ದೆಗಳ ಬಗ್ಗೆ ತಿಳಿಸದುಕೊಂಡು ಕಾರ್ಯ ನಿರ್ವಹಿಸಬೇಕೆಂದರು.
ಇನ್ನೋರ್ವ ಮುಖ್ಯ ಅಥಿತಿಗಳಾಗಿ ಆನಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ದೇಸಿ ರಾಜ್ಯ ನೋಡಲ್ ಅಧಿಕಾರಿ, ಡಾ. ಎಂ. ಗೋಪಾಲ ಮಾತನಾಡುತ್ತಾ, ದೇಸಿ ಕಾರ್ಯಕ್ರಮದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ದೇಶದಲ್ಲಿ ಶೇ. 49 ರಷ್ಟು ರೈತರು ಕೃಷಿ ಪರಿಕರ ಮಾರಾಟಗಾರರೊಂದಿಗೆ ಸಂಪರ್ಕ ಹೊಂದಿದ್ದು, ಅಪಾರವಾದ ನಂಬಿಕೆಯನ್ನು ಇಟ್ಟಿರುವರು. ಈ ದೇಸಿ ಕೋರ್ಸ ಮುಗಿದ ನಂತರ ತಮ್ಮ ಮಾರಾಟ ಮಾಡುವ ಮಳಿಗೆÀಗಳಲ್ಲಿ ದೇಸಿ ಮಾಹಿತಿ ಕೇಂದ್ರವನ್ನು ಸ್ಥಾಪಿಸಿ ರೈತರಿಗೆ ಉಪಯೋಗವಾಗುವ ತಾಂತ್ರಿಕ ಹಸ್ತ ಪತ್ರಿಕೆಗಳನ್ನು ಇಡುವದರಿಂದ ರೈತರಿಗೆ ಹೆಚ್ಚು ಅನುಕೂಲವಾಗುವದೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರ, ಕೃಷಿ ಮಹಾವಿದ್ಯಾಲಯ, ವಿದ್ಯಾಧಿಕಾರಿ, ಡಾ. ಎಸ್. ಬಿ. ಕಲಘಟಗಿ, ಮಾತನಾಡಿ ತಮಗೆ ವಿವಿಧ ವಿಷಯಗಳಲ್ಲಿ ಪರಿಣಿತ ಹೊಂದಿದ ವಿಜ್ಞಾನಿಗಳಿಂದ ಪಾಠಗಳನ್ನು ಕೇಳುವಾಗ ಆಸಕ್ತಿಯಿಂದ ಕೇಳಿ ಪ್ರಮುಖ ವಿಷಯಗಳಾದ ಕೀಟನಾಶಕ ಹಾಗೂ ಕಳೆನಾಶಕಗಳನ್ನು ಉಪಯೋಗಿಸುವಾಗ ಸೂಕ್ತ ಪ್ರಮಾಣದಲ್ಲಿ ಬಳಸುವದರಿಂದ ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದೆಂದರು.
ಸಹ ಸಂಶೋಧನಾ ನಿರ್ದೇಶಕ, ಡಾ. ಅಶೋಕ ಎಸ್. ಸಜ್ಜನ ಮಾತನಾಡಿ ಕೃಷಿ ಪರಿಕರ ಮಾರಾಟಗಾರರು ನೈತಿಕತೆಯಿಂದ ರೈತರೊಂದಿಗೆ ವ್ಯವಹರಿಸಿ ಗುಣಮಟ್ಟದ ಪರಿಕರಗಳನ್ನು ತಜ್ಞರು ಶಿಫಾರಸ್ಸು ಮಾಡಿದಂತೆ ಉಪಯೋಗಿಸಬೇಕೆಂದು ಮಾಹಿತಿ ನೀಡಬೇಕೆಂದರು. ಗುಣಮಟ್ಟದ ಕೃಷಿ ಪರಿಕರಗಳನ್ನು ಪೂರೈಸಿ ರೈತರ ಏಳ್ಗೆಗಾಗಿ ಶ್ರಮಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ವಿಜಯಪುರ ಕೃಷಿ ಇಲಾಖೆ, ಜಂಟಿ ಕೃಷಿ ನಿರ್ದೇಶಕ, ಡಾ. ರಾಜಶೇಖರ ವಿಲಿಯಮ್ಸ್ ರವರು ಕೃಷಿ ಪರಿಕರ ಮಾರಾಟಗಾರರು ತಮ್ಮ ಕ್ಷೇತ್ರದ ಹೆಚ್ಚಿನ ರೈತರು ತಮ್ಮೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ಮೋಸ ಮಾಡದೇ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಬೇಕೆಂದು ಸೂಚಿಸಿದರು.
ತಾವುಗಳು ಮಾನವಿಯತೆಯಿಂದ, ಪ್ರಾಮಾಣಿಕತೆಯಿಂದ ಹಾಗೂ ನಿಯತ್ತಿನಿಂದ ವ್ಯಾಪಾರ ಮಾಡಿ ಆದರೆ ಯಾವುದೇ ಕಾರಣಕ್ಕೂ ಅನ್ನ ಕೊಡುವ ರೈತರಿಗೆ ಮೋಸ ಮಾಡಬೇಡಿ ಎಂದು ತಿಳಿಸಿದರು. ಕೃಷಿ ಪರಿಕರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ರೈತರಿಗೆ ಮೋಸ ಮಾಡಬಾರದೆಂದು ಸೂಚಿಸಿದರು.
ಕಾರ್ಯಕ್ರಮವನ್ನು ವಿಸ್ತರಣಾ ಮುಂದಾಳು ಹಾಗೂ ದೇಸಿ ಸಂಯೋಜಕ ಡಾ. ಆರ್. ಬಿ. ಬೆಳ್ಳಿ ನಿರೂಪಿಸಿದರು ಹಾಗೂ ಜಿ. ಆರ್. ದೊಡ್ಡಿಹಾಳ ಇವರ ವಂಧನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಈ ಕಾರ್ಯಕ್ರಮದಲ್ಲಿ ಪ್ರತಿಭಾ ಪಾಟೀಲ, ಎಮ್. ಎಸ್. ಧನೆಲಪ್ಪಗೋಳ ಉಪಸ್ಥಿತರಿದ್ದರು.