ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅವ್ಯವಹಾರ: ವಿಜಯಕುಮಾರ

ದೇವದುರ್ಗ.ಜೂ.೧೧-ತಾಲೂಕಿನ ಜಾಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅನುದಾನ ದುರ್ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ, ಸಂಘದ ಮುಖ್ಯ ಅಧಿಕಾರಿ ಅವರನ್ನು ಕರ್ತವ್ಯದಿಂದ ಅಮಾನತು ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಆಂದೇಲಿ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ನಾನು ಸದಸ್ಯತ್ವದಕ್ಕಾಗಿ ಅರ್ಜಿ ಸಲ್ಲಿಸಿದರೂ, ವಿನಾ ಕಾರಣ ತಿರಸ್ಕಾರ ಮಾಡಿದ್ದಾರೆ. ನನಗೆ ೭ಎಕರೆ ಜಮೀನು ಇದ್ದು, ಸಾಲ ನೀಡುವಂತೆ ಮನವಿ ಸಲ್ಲಿಸಿದರೂ ನಾನಾ ನೆಪ ಹೇಳುತ್ತಿದ್ದಾರೆ. ಆದರೆ, ಒಬ್ಬೊಬ್ಬ ರೈತರ ಹೆಸರಿನಲ್ಲಿ ಅಲ್ಲಿನ ನಿರ್ದೇಶಕರು ೧೦ರಿಂದ ೨೦ ಲಕ್ಷ ರೂ.ವರೆಗೆ ಸಾಲ ಪಡೆದಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿಜವಾದ ರೈತರಿಗೆ ಸಾಲಸೌಲಭ್ಯ ಸಿಗುತ್ತಿಲ್ಲ. ಕೇವಲ ಅಲ್ಲಿನ ನಿರ್ದೇಶಕರು ಹೆಚ್ಚಿನ ಸಾಲಪಡೆದು, ಬೇರೆ ಕಡೆ ಬಡ್ಡಿಗೆ ನೀಡುತ್ತಿದ್ದಾರೆ. ದಾಖಲೆ ನೀಡಿ ಸಾಲ ಕೇಳಲು ಬರುವ ರೈತರಿಗೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಇನ್ನು ಕೆಲ ರೈತರಿಗೆ ದಮ್ಕಿ ಹಾಕುತ್ತಿದ್ದಾರೆ. ಸಂಘದ ವ್ಯವಸ್ಥಾಪಕ ವೀರಭದ್ರಪ್ಪ ಚಿಂಚರಕಿ ಹಾಗೂ ಯಲ್ಲಪ್ಪ ಚಪ್ಪಳಕಿ, ಶಶಿಕಾಂತ ಪಾಟೀಲ್ ಸಾಲ ಕೇಳುವ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಂಘದ ವಿರುದ್ಧ ಕ್ರಮ ಜರುಗಿಸಬೇಕು.
ಈ ಬಗ್ಗೆ ನಾನು ಅಗತ್ಯ ದಾಖಲೆ ಪಡೆದು, ಜಿಲ್ಲಾಧಿಕಾರಿ ಸೇರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ದೂರು ಸಲ್ಲಿಸಿದರೂ ಕ್ರಮಕೈಗೊಂಡಿಲ್ಲ. ನನಗೆ ಮೌಖಿಕವಾಗಿ ಸಾಲ ಕೊಡುವುದಾಗಿ ಹೇಳುತ್ತಿದ್ದು, ದಾಖಲೆ ತೆಗೆದುಕೊಂಡು ಸಂಘದ ಕಚೇರಿ ಹೋದರೆ, ಸಾಲ ಕೊಡದೆ ನಾನಾ ನೆಪ ಹೇಳುತ್ತಿದ್ದಾರೆ. ಕೂಡಲೇ ಸಂಘದ ಮುಖ್ಯ ಅಧಿಕಾರಿಯನ್ನು ಅಮಾನತು ಮಾಡಿ, ಸಹಕಾರಿ ಬ್ಯಾಂಕ್ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶಬ್ಬೀರ್ ಜಾಲಹಳ್ಳಿ ಇದ್ದರು.