ಕೃಷಿ ಪಂಪ್ ಸೆಟ್ ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು: ಕಾರ್ಯಪಾಲಕ ಅಭಿಯಂತರರ ಕಛೇರಿಗೆ ಮುತ್ತಿಗೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.02: ಕೃಷಿ ಪಂಪ್ ಸೆಟ್ ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಪಂಪ್ ಸೆಟ್ ರೈತರ ಆರ್.ಆರ್ ನಂಬರಿಗೆ ಆಧಾರ್ ಲಿಂಕ್ ವ್ಯವಸ್ಥೆಯನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಸುಟ್ಟು ಹೋದ ಟಿ.ಸಿ ಬದಲಿಸಿಲು ವಿದ್ಯುತ್ ಇಲಾಖೆಯ ಕೆಲವು ಎಂಜಿನಿಯರುಗಳು ರೈತರ ಅಧಾರ್ ಕಾರ್ಡ್ ಕೇಳುತ್ತಿದ್ದು ನಿಯಮಕ್ಕೆ ವಿರುದ್ದವಾಗಿ ರೈತರಿಗೆ ತೊಂದರೆ ನೀಡುತ್ತಿರುವ ಸೆಸ್ಕಾಂ ಎಂಜಿನಿಯರುಗಳ ವಿರುದ್ದ ಕ್ರಮ ಜರುಗಿಸುವಂತೆ ತಾಲೂಕು ರೈತಸಂಘದ ಕಾರ್ಯಕರ್ತರು ಪಟ್ಟಣದ ವಿಭಾಗೀಯ ಸೆಸ್ಕಾಂ ಕಛೇರಿಯ ಕಾರ್ಯಪಾಲಕ ಅಭಿಯಂತರರ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಸೆಸ್ಕಾಂ ವಿಭಾಗೀಯ ಕಛೇರಿಗೆ ಆಗಮಿಸಿದ ರೈತರು ಸೆಸ್ಕಾಂ ಎಂಜಿನಿಯರುಗಳ ಕಾರ್ಯವೈಕರಿಯ ವಿರುದ್ದ ಕಿಡಿಕಾರಿದರಲ್ಲದೆ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಮತ್ತು ವ್ಯವಸ್ಥಾಪಕ ಎಂಜಿನಿಯರ್ ಜೊತೆ ರೈತರ ಮುಖಾಮುಖಿ ಸಭೆಯನ್ನು ಆಯೋಜಿಸುವಂತೆ ಒತ್ತಾಯಿಸಿದರು.
ರೈತಸಂಘದ ಅಧ್ಯಕ್ಷ ಪುಟ್ಟೇಗೌಡ ಮಾತನಾಡಿ ಅಕ್ರಮ-ಸಕ್ರಮ ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕಾಗಿ ತಾಲೂಕಿನ ನೂರಾರು ರೈತರು ನಿಗಧಿತ ಹಣಕಟ್ಟಿ ಕಳೆದ ಒಂದು ವರ್ಷದಿಂದ ಸೆಸ್ಕಾಂ ಕಛೇರಿ ಸುತ್ತುತ್ತಿದ್ದರೂ ರೈತರ ಸಮಸ್ಯೆ ಬಗೆಹರಿದಿಲ್ಲ. ತಾಲೂಕಿನ ಗಾಂಧಿ ನಗರದ ಬಳಿ ಇತ್ತೀಚೆಗೆ ಎಳೆದ ವಿದ್ಯುತ್ ಲೈನ್ ಈಗಾಗಲೇ ಬಿದ್ದು ಹೋಗಿದೆ. ಇದನ್ನು ಸರಿಪಡಿಸುವಂತೆ ಮನವಿ ನೀಡಿದ್ದರೂ ಸರಿಪಡಿಸಿಲ್ಲ. ರೈತರ ಜೀವ ಹೋದ ಮೇಲೆ ಸರಿಪಡಿಸುತ್ತೀರಾ?. ರೈತರ ಜೀವಕ್ಕೆ ಬೆಲೆಯಿಲ್ಲವೇ? ಸತ್ತ ರೈತರ ಕುಟುಂಬಕ್ಕೆ ಪರಿಹಾರ ನೀಡಿದರೆ ಅವರ ಜೀವ ವಾಪಸ್ ಬರುವುದಿಲ್ಲ. ದುರಂತ ಸಂಭವಿಸುವ ಮುನ್ನವೇ ಸಮಸ್ಯೆಗಳನ್ನು ಸರಿಪಡಿಸಬೇಕು.
ತಾಲೂಕಿನ ವಿಠಲಾಪುರ ಗ್ರಾಮದ ಬಳಿ ರೈತರೊಬ್ಬರ ಕೃಷಿ ಜಮೀನಿಗೆ ವಿದ್ಯುತ್ ಪೂರೈಕೆ ಮಾಡುವ ಟಿ.ಸಿ. ಸುಟ್ಟು ಹೋಗಿದೆ. ಸುಟ್ಟು ಹೋದ ಟಿ.ಸಿ.ಯನ್ನು 24 ಘಂಟೆಯೊಳಗೆ ಇಲಾಖೆಯ ವೆಚ್ಚದಲ್ಲಿ ಸರಿಪಡಿಸಿಕೊಡುವಂತೆ ನಿಯಮವಿದೆ. ಆದರೆ ಈ ವ್ಯಾಪ್ತಿಯ ಸೆಸ್ಕಾಂ ಎಂಜಿನಿಯರ್ ಫಾಜಿಲ್ ಎನ್ನುವವರು ರೈತರ ಸುಟ್ಟು ಹೋದ ಟಿ.ಸಿ ಬದಲಿಸಲು ರೈತರ ಆಧಾರ್ ಕಾರ್ಡ್ ಕೇಳುತ್ತಿದ್ದಾರೆ. ಸುಟ್ಟು ಹೋದ ಟಿ.ಸಿ.ಬದಲಿಸಲು ರೈತರ ಬಳಿಯೇ ಹಗ್ಗ, ಸಾಗಾಣಿಕೆ ವಾಹನ ಮತ್ತು ಹಣ ಕೇಳುತ್ತಿದ್ದಾರೆ.
ನಿಯಮ ಬಾಹಿರವಾಗಿ ರೈತರಿಗೆ ಕಿರುಕುಳ ನೀಡುವ ಎಂಜಿನಿಯರುಗಳ ವಿರುದ್ದ ಶಿಸ್ತಿನ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ತಾಲೂಕಿನಲ್ಲಿ ತೀವ್ರವಾದ ಬರಗಾಲವಿದೆ. ರೈತರು ತಾವು ಬೆಳೆದಿರುವ ಕಬ್ಬು, ಬಾಳೆ, ತೆಂಗು, ಅಡಿಕೆ ಮುಂತಾದ ಬೆಳೆಗಳನ್ನು ಸಂರಕ್ಷಿಸಿಕೊಳ್ಳುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟದ ಸನ್ನಿವೇಶದಲ್ಲಿ ರೈತರ ನೆರವಿಗೆ ನಿಲ್ಲಬೇಕಾದ ವಿದ್ಯುತ್ ಇಲಾಖೆ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ಇದುವರೆಗೆ ರೈತರಿಗೆ ನೀಡುತ್ತಿದ್ದ ವಿದ್ಯುತ್ ಪೂರೈಕೆಯ ಅವಧಿಯನ್ನು ಕಡಿತಗೊಳಿಸಿದೆ. ವಾಣಿಜ್ಯ ಬಳಕೆದಾರರಿಗೆ ಇಲ್ಲದ ಲೋಡ್ ಶೆಡ್ಡಿಂಗ್ ನಿಯಮವನ್ನು ರೈತರ ಮೇಲೆ ಏಕೆ ಹೇರುತ್ತೀರಿ?. ಬರಗಾಲದಲ್ಲಿ ನಿಮ್ಮ ಸಂಭಳವನ್ನು ಕಡಿಮೆ ಮಾಡಿದರೆ ನೀವು ಒಪ್ಪಿಕೊಳ್ಳುತ್ತೀರಾ ಎಂದು ಕಿಡಿಕಾರಿದರು.
ಉಚಿತ ಭಾಗ್ಯ ನಿಲ್ಲಿಸಿ, ರೈತರ ಸಮಸ್ಯೆಗಳನ್ನು ಸರಿಪಡಿಸಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಜ್ಯೋತಿ, ಗೃಹಲಕ್ಷ್ಮಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಯಾವುದೇ ಉಚಿತ ಯೋಜನೆಗಳನ್ನು ರಾಜ್ಯದ ಜನ ಕೇಳಲಿಲ್ಲ. ಸರ್ಕಾರದ ಉಚಿತ ಯೋಜನೆಗಳಿಗೂ ಜನಸಾಮಾನ್ಯರಿಗೂ ಯಾವುದೇ ಸಂಭಂದವಿಲ್ಲ. ರಾಜಕೀಯ ತೆವಲಿಗೆ ಅದನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ರೈತರು ಕೇಳುತ್ತಿರುವುದು ಸಮರ್ಪಕ ವಿದ್ಯುತ್, ನೀರು, ಉಚಿತ ಶಿಕ್ಷಣ ಮತ್ತು ಆರೋಗ್ಯ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡದೆ ರೈತರು ಎಲ್ಲಾ ಹೊರೆಯನ್ನು ಹೊರಲು ಸಿದ್ದರಿದ್ದೇವೆ. ಅಧಿಕಾರಿಗಳು ರೈತರ ಪರ ಕೆಲಸ ಮಾಡುವಂತೆ ಪುಟ್ಟೇಗೌಡ ಒತ್ತಾಯಿಸಿದರು.
ರೈತ ಮುಖಂಡರೊಂದಿಗೆ ದೂರವಣಿಯ ಮೂಲಕ ಮಾತನಾಡಿದ ಸೆಸ್ಕಾಂ ಅಧೀಕ್ಷಕ ಎಂಜಿನಿಯರ್ ಕೃಷ್ಣಮೂರ್ತಿ ಕೃಷಿ ಪಂಪ್ ಸೆಟ್ ಆಧಾರದ ಮೇಲೆ ಅನುದಾನ ಪಡೆಯಬೇಕಾಗಿರುವುದುರಿಂದ ಹೊಸ ಪಂಪ್ ಸೆಟ್ ರೈತರಿಗೆ ವಿದ್ಯುತ್ ಸಂಪರ್ಕ ನೀಡುವಾಗ ಆಧಾರ್ ನಂ ಕೇಳುತ್ತಿದ್ದೇವೆ. ಸುಟ್ಟು ಹೋದ ಟಿ.ಸಿ ಬದಲಿಸಲು ಆಧಾರ್ ಅಗತ್ಯವಿಲ್ಲ. ಟಿ.ಸಿ ಅಳವಡಿಕೆ ಇಲಾಖೆಯ ಜವಾಬ್ದಾರಿಯಾಗಿದ್ದು ರೈತರ ಬಳಿ ಹಗ್ಗ, ವಾಹನ ಮತ್ತು ಹಣ ಕೇಳುವವರ ಬಗ್ಗೆ ರೈತರು ಲಿಖಿತ ದೂರು ನೀಡಿದರೆ ತಕ್ಷಣವೇ ಶಿಸ್ತು ಕ್ರಮ ಜರುಗಿಸುವ ಭರವಸೆ ನೀಡಿದರು.
ಲೋಡ್ ಶೆಡ್ಡಿಂಗ್ ಬಗ್ಗೆ ರೈತರಿಗೆ ಮಾಹಿತಿ ನೀಡಿದ ಸೆಸ್ಕಾಂ ವಿಭಾಗೀಯ ಕಛೇರಿಯ ಕಾರ್ಯಪಾಲಕ ಅಭಿಯಂತರೆ ಪ್ರತಿಭಾ ಇದು ರಾಜ್ಯ ಸರ್ಕಾರದ ತೀರ್ಮಾನ, ಸೋಲಾರ್ ವಿದ್ಯುತ್ ಪೂರೈಕೆ ಜಾಲವನ್ನು ಹೊರತು ಪಡಿಸಿ ಮಿಕ್ಕ ಯಾವುದೇ ಮೂಲದಿಂದಲೂ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ರೈತರ ಹಿತದೃಷ್ಠಿಯಿಂದ ಪ್ರಸ್ತುತ ಹಗಲು ನಿತ್ಯ 03 ಘಂಟೆ ಮತ್ತು ರಾತ್ರಿ ವೇಳೆ 02 ಘಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ತಾಲೂಕಿನ ರೈತರ ಸಮಸ್ಯೆಗಳ ಪರಿಹಾರಕ್ಕೆ 16-09-2023 ರ ಶನಿವಾರ ಇಲಾಖೆಯ ಮೇಲಧಿಕಾರಿಗಳನ್ನು ಆಹ್ವಾನಿಸಿ ರೈತರೊಂದಿಗೆ ಮುಖಾಮುಖಿ ಸಭೆ ಆಯೋಜಿಸುವ ಭರವಸೆ ನೀಡಿದರು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಹೊನ್ನೇಗವಡ, ಸ್ವಾಮೀಗೌಡ, ಕಾಗೇಪುರ ಮಹೇಶ್, ಮರಡಹಳ್ಳಿ ರಾಮೇಗೌಡ, ಅರುಣಕುಮಾರ್, ವೆಂಕಟೇಶ್, ಯಶೋಧರ್, ರವಿಕುಮಾರ್, ಹಿರೀಕಳಲೆ ಬಸವರಾಜು, ಸೆಸ್ಕಾಂ ಸಹಾಯಕ ಎಂಜಿನಿಯರ್ ರಾಜಶೇಖರ್ ಮತ್ತಿತರರು ಇದ್ದರು.