ಕೃಷಿ, ನೀರಾವರಿಗೆ ಸರ್ಕಾರ ಆದ್ಯತೆ: ಸಿಎಂ

ತುಮಕೂರು, ಜ. 15- 12 ನೇ ಶತಮಾನದಲ್ಲೇ ಕೃಷಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆರೆ ಕಟ್ಟೆಗಳ ನಿರ್ಮಾಣಕ್ಕೆ ಶ್ರೀ ಗುರು ಸಿದ್ದರಾಮೇಶ್ವರರು ಹೆಚ್ಚು ಒತ್ತು ನೀಡಿದ್ದರು. ಇದೇ ಹಾದಿಯಲ್ಲಿ ನಡೆದಿರುವ ನಮ್ಮ ಸರ್ಕಾರ ಇಂದು ಕೃಷಿ ಮತ್ತು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ ಮುನ್ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಿಪಟೂರು ನಗರದ ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನೊಳಂಬ ಲಿಂಗಾಯತ ಸಂಘ ಆಯೋಜಿಸಿದ್ದ ಶ್ರೀ ಗುರುಸಿದ್ದಾರಾಮೇಶ್ವರರ 850 ನೇ ಜಯಂತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಯಕದ ಮುಖಾಂತರ ಬದುಕಿನ ಶ್ರೇಷ್ಠತೆಯನ್ನು ಪಡೆದುಕೊಳ್ಳಬೇಕು ಎಂಬುದು ಸಿದ್ದರಾಮೇಶ್ವರರ ಚಿಂತನೆ.ವಿಚಾರದಲ್ಲಿ ಆಚಾರದಲ್ಲಿ ಸಾಮ್ಯತೆ ಇದ್ದಿದ್ದರಿಂದ ಸಿದ್ದರಾಮರು ಸಹ ಬಸವೇಶ್ವರರ ಪ್ರಭಾವಕ್ಕೆ ಒಳಗಾಗಿದ್ದರು.ಬಸವ,ಸಿದ್ದರಾಮರಾದಿ ಶರಣರು ಕಾಯಕವನ್ನು ಪೂಜೆಗಿಂತ ಒಂದು ಕೈ ಹೆಚ್ಚು ಎಂಬಂತೆ ಸ್ವರ್ಗಕ್ಕೆ ಹೋಲಿಸುವ ಮೂಲಕ ಕಾಯಕವೇ ಕೈಲಾಸ ಎಂದು ಸಾರಿದರು ಎಂದು ಮುಖ್ಯಮಂತ್ರಿಗಳು ಹೇಳಿದರು.

ಕೆರೆ ಕಟ್ಟೆಗಳ ನಿರ್ಮಾಣಕ್ಕೆ ತೊಡಗಿಕೊಳ್ಳುವ ಮೂಲಕ 12 ನೇ ಶತಮಾನದಲ್ಲಿ ಕೃಷಿಗೆ ಆದ್ಯತೆ ಕೊಟ್ಟರಲ್ಲದೆ,ನಮ್ಮ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ನಾಡಿನ ದೇವಸ್ಥಾನಗಳ ನಿರ್ಮಾಣ ಸಿದ್ದರಾಮೇಶ್ವರರ ಗುರಿಯಾಗಿತ್ತು ಎಂದ ಬಸವರಾಜ ಬೊಮ್ಮಾಯಿ ಅವರು,ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ.ದೇಶದ ಪ್ರಗತಿಗೆ ನಿಷ್ಟೆ ಮತ್ತು ಪರಿಶ್ರಮದ ಕಾಯಕ ಅತೀ ಮುಖ್ಯ ಎಂದು ಕರೆ ನೀಡಿದರು.

ದುಡಿಮೆಗೆ ಗೌರವ ಕೊಡಬೇಕು,ದುಡಿಮೆಗೆ ಯೋಗ್ಯ ಬೆಲೆಯನ್ನು ಕೊಡಬೇಕು ಅಂದಾಗ ಮಾತ್ರ ರಾಷ್ಟ್ರ ಮುಂದುವರೆಯಲು ಸಾಧ್ಯ.ಈ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ದುಡ್ಡೇ ದೊಡ್ಡಪ್ಪ ಎಂಬ ಕಾಲ ಬದಲಾಗಿದೆ , ದುಡಿಮೆಯೇ ದೊಡ್ಡಪ್ಪ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಾಡಿನ ಇತಿಹಾಸದಲ್ಲಿ ನೊಳಂಬರ ಪಾತ್ರ ಮಹತ್ವದ್ದಾಗಿದೆ.ಆಡಳಿತ ಪಾತ್ರ ದೊಡ್ಡದಿದೆ, ನೊಳಂಬರ ಪರಿಶ್ರಮ ದೊಡ್ಡದಿದೆ ಎಂದು ಅಭಿಪ್ರಾಯ ಪಟ್ಟ ಅವರು,
ನಮ್ಮ ಆದರ್ಶಗಳು ನಮ್ಮ ಸಂಸ್ಕಾರ,ಸಂಸ್ಕೃತಿ ತೋರಿಸುತ್ತದೆ.ಸಂಸ್ಕಾರ,ಸಂಸ್ಕೃತಿ ನಮ್ಮ ಚಿಂತನೆಗಳಿಗೆ ಸ್ಪೂರ್ತಿ ಕೊಡುತ್ತವೆ.ನಮ್ಮ ಚಿಂತನೆ ನಮ್ಮ ಬದುಕನ್ನು ನಿರ್ವಹಿಸುತ್ತದೆ.ಬದುಕು ಭವಿಷ್ಯವನ್ನು ರೂಪಿಸುತ್ತದೆ.ಹಾಗಾಗಿ ನಮ್ಮ ದಿವ್ಯವಾದ ಪರಂಪರೆಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಅವರು ಹೇಳಿದರು.

ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾತನಾಡಿ, ಕುಡಿಯುವ ನೀರು ಕೊಡುವುದೇ ದೊಡ್ಡ ಸಾಹಸವಾಗಿತ್ತು,ಯಡಿಯೂರಪ್ಪ ಮುಖ್ಯಮಂತ್ರಿ ಆದಂತಹ ಸಂದರ್ಭದಲ್ಲಿ ಬಹಳ ದಿನಗಳ ಸಮಸ್ಯೆಗೆ ಪರಿಹಾರ ನೀಡಲಾಯಿತು ಎಂದು ಹೇಳಿದರು.

ಸಮಾರಂಭದಲ್ಲಿ ಕೆರಗೋಡಿ ರಂಗಾಪುರ, ಬೆಟ್ಟದಹಳ್ಳಿಗವಿಮಠ, ಕೋಳಗುಂದದ ಕೇದಿಗೆ ಮಠ,ಹಳೇಬೀಡಿನ ಪುಷ್ಪಗಿರಿ ಸಂಸ್ಥಾನ, ಮಾಡಾಳು ನಿರಂಜನ‌ಪೀಠ,ಕಂಚಘಟ್ಟದ ಷಡಕ್ಷರ ಮಠ,ಹೊನ್ನವಳ್ಳಿ ಕರಿಸಿದ್ದೇಶ್ವರ ಮಠ,ಸಿಂಧಿಗೆರೆ ಕರಡಿ ಗವಿ ಮಠದ ಶ್ರೀಗಳ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ಶಿಕ್ಷಣ ಸಚಿವ ಬಿ ಸಿ ನಾಗೇಶ್, ಸಂಸದ ಜಿ ಎಸ್ ಬಸವರಾಜು, ಶಾಸಕ ಜ್ಯೋತಿ ಗಣೇಶ್, ವಿಜಯೇಂದ್ರ ಮತ್ತಿತರರು ಉಪಸ್ಥಿತರಿದ್ದರು.