`ಕೃಷಿ, ತೋಟಗಾರಿಕೆ’ ಅಧಿಕಾರಿಗಳ ಪೋತ್ಸಾಹ ಶಾಸಕರ ಸೂಚನೆ

ಪುತ್ತೂರು, ಜೂ.೩-ಕೊರೋನಾ ಸಂಕಷ್ಟದಿಂದಾಗಿ ಇದೀಗ ವ್ಯಾಪಾರ, ಕೈಗಾರಿಕೆಗಳು ಕುಂಠಿತವಾಗಿರುವ ಕಾರಣ ಇದೀಗ ಜನರು ಕೃಷಿಯ ಕುರಿತು ಹೆಚ್ಚಿನ ಒಲವು ಹೊಂದಿದ್ದಾರೆ. ಅವರಿಗೆ ಸಮರ್ಪಕ ಮಾಹಿತಿ, ಸಲಹೆ ನೀಡುವುದರೊಂದಿಗೆ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಇಲಾಖಾಧಿಕಾರಿಗಳು ಮಾಡಬೇಕು ಎಂದು ಶಾಸಕ ಸಂಜೀವ ಮಠಂದೂರು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಬುಧವಾರ ಪುತ್ತೂರು ತಾಲೂಕು ಪಂಚಾಯತ್‌ನ ಕಿರು ಸಭಾಂಗಣದಲ್ಲಿ ಕೃಷಿ ಸಂಬಂಧಿಸಿದ ತಾಲೂಕು ಮಟ್ಟದ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ, ಸಾಮಾಜಿಕ ಅರಣ್ಯ, ಪಶುಸಂಗೋಪನೆ, ಎಪಿಎಂಸಿ ಇನ್ನಿತರ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಈ ಭಾಗದಲ್ಲಿ ಹೆಚ್ಚಾಗಿ ಕೃಷಿಕರು ಅಡಿಕೆ ಬೆಳೆಯುತ್ತಿದ್ದಾರೆ. ಅದರೊಂದಿಗೆ ಪರ್ಯಾಯ ಬೆಳೆಗಳಿಗೆ ಆದ್ಯತೆ ನೀಡುವ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ಹೊಸ ಮಾದರಿಯ ಕೃಷಿ ಹಾಗೂ ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡಬೇಕು. ಕೃಷಿ ಪೂರಕವಾದ ಮಾಹಿತಿ ಕಾರ್ಯಾಗಾರಗಳನ್ನು ಪಂಚಾಯತ್ ಮಟ್ಟದಲ್ಲಿ ಹಮ್ಮಿಕೊಂಡು ಅಲ್ಲಿಗೆ ಆಸಕ್ತ ರೈತರನ್ನು ಆಹ್ವಾನಿಸಿ ಅವರಿಗೆ ತರಬೇತಿ ನೀಡಬೇಕು ಎಂದರು.

ಕೃಷಿ ಇಲಾಖೆಯ ವತಿಯಿಂದ ಈಗಾಗಲೇ ೨೨.೭೪ ಎಕ್ರೆ ಹಡೀಲು ಬಿದ್ದ ಗದ್ದೆಗಳನ್ನು ಗುರುತಿಸಲಾಗಿದ್ದು, ಅಲ್ಲಿನ ರೈತರಿಗೆ ಭತ್ತ ಬೆಳೆಸುವಂತೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ ಕೃಷಿ ಇಲಾಖೆಯ ಅಧಿಕಾರಿ, ಈ ಪೈಕಿ ೧೨ ಎಕ್ರೆ ಜಾಗದ ಮಾಲಿಕರು ಭತ್ತ ಬೆಳೆಯಲು ಒಪ್ಪಿಗೆ ನೀಡಿದ್ದಾರೆ. ಇನ್ನುಳಿದವರು ಕಾಡುಪ್ರಾಣಿಗಳ ಕಾರಣದಿಂದ ಭತ್ತ ಬೆಳೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ ಹಾಗೂ ತೋಟಗಾರಿಕಾ ಬೆಳೆ ಬೆಳೆಯಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಕೃಷಿ ಉಳುಮೆಗೆ ಬೇಕಾಗಿರುವ ಟಿಲ್ಲರ್, ಕಠಾವು ಯಂತ್ರ, ಸ್ಪ್ರೇಯರ್, ಬೈಹುಲ್ಲು ಸಂಗ್ರಹ ರೋಲರ್ ಸರ್ಕಾರದ ವತಿಯಿಂದ ಬಾಡಿಗೆ ರೂಪದಲ್ಲಿ ರೈತರಿಗೆ ಲಭ್ಯವಾಗುತ್ತಿದೆ. ಅದರ ಕುರಿತು ರೈತರಿಗೆ ಮಾಹಿತಿ ನೀಡಬೇಕು ಎಂದ ಸಂಜೀವ ಮಠಂದೂರು ಪತ್ರಿಕೆಗಳ ಮೂಲಕ ಈ ಕುರಿತು ರೈತರಿಗೆ ಹೊಸ ಕೃಷಿ ಯಂತ್ರಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು.

ಅರಣ್ಯ ಪ್ರದೇಶದಲ್ಲಿ ಬೀಜದುಂಡೆ ಎಸೆಯುವ ಕ್ರಮ ಹಿಂದೆ ಇತ್ತು. ಆದರೆ, ಇದರಿಂದ ಉತ್ತಮ ಫಲಿತಾಂಶ ಲಭಿಸದ ಹಿನ್ನಲೆಯಲ್ಲಿ ಇದೀಗ ಅದನ್ನು ಇಲಾಖೆಯಿಂದ ಮಾಡಲಾಗುತ್ತಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿ ತಿಳಿಸಿದರು. ರಸ್ತೆ ಬದಿಗಳಲ್ಲಿ ಅವಕಾಶ ಇದ್ದ ಕಡೆಗಳಲ್ಲಿ ಎಲ್ಲಾ ಗಿಡಗಳನ್ನು ನೆಡುವಂತೆ ಸೂಚನೆ ನೀಡಿದ ಶಾಸಕರು ಈ ಕೆಲಸಗಳಿಗಾಗಿ ಆಸಕ್ತ ಸಂಘ ಸಂಸ್ಥೆಗಳು, ದಾನಿಗಳ ಸಹಕಾರ ಪಡೆದುಕೊಳ್ಳುವಂತೆ ತಿಳಿಸಿದರು.

ಉಪಕೃಷಿ ನಿರ್ದೇಶಕ ಶಿವಶಂಕರ್ ಉಪಸ್ಥಿತರಿದ್ದರು. ತಾಪಂ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿ, ವಂದಿಸಿದರು.