ಕೃಷಿ, ತೋಟಗಾರಿಕೆ ಅಧಿಕಾರಿಗಳ ದಾಳಿ ಬೀಜ ಮಾರಾಟದ ಲೋಪ, 24 ಅಂಗಡಿಗಳಿಗೆ ನೋಟೀಸ್

ಎನ್.ವೀರಭದ್ರಗೌಡ
ಬಳ್ಳಾರಿ, ಜೂ.08: ಸಚಿವ ಈಶ್ವರಪ್ಪ ಅವರ ಸೂಚನೆಯಂತೆ ಇಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಗರ ಮತ್ತು ತಾಲೂಕಿನ ಬೀಜ ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸಿ ಲೈಸನ್ಸ್ ಇಲ್ಲದೆ ಬೀಜ ಮಾರಾಟ ಸೇರಿದಂತೆ ಕಂಡು ಬಂದ ವಿವಿಧ ಲೋಪಗಳಿಗೆ ಸಂಬಂಧಿಸಿ 24 ಅಂಗಡಿಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಆದರೆ ಒಣ ಮೆಣಸಿನಕಾಯಿಯ ಸಿಜೆಂಟ್ ಕಂಪನಿಯ ಬೀಜದ ಅಕ್ರಮ ದಾಸ್ತಾನು ಮತ್ತು ಹೆಚ್ಚಿನ ಬೆಲೆ ಮಾರಾಟದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ನಗರದಲ್ಲಿನ ಬೀಜ ಮಾರಾಟಗಾರರು ಮೆಣಸಿನಕಾಯಿ ಬೀಜ ಅದರಲ್ಲೂ ಸಿಜೆಂಟ್ ಕಂಪನಿಯ 2043 ತಳಿಯ ಬೀಜವನ್ನು ಒಂದುವರೆ ಪಟ್ಟು ಅಧಿಕವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆಂಬ ರೈತರ ದೂರಿನ ಹಿನ್ನೆಲೆಯಲ್ಲಿ ನಿನ್ನೆ ಜಿ.ಪಂ.ನಲ್ಲಿ ಸಭೆ ನಡೆಸಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಕೋಪಗೊಂಡು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮೊದಲು ಬೀಜ ಮಾರಾಟ ಅಂಗಡಿಗಳ ಪರಿಶೀಲನೆ ಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸಭೆಯಿಂದಲೇ ಕಳುಹಿಸಿದ್ದರು.
ಹಾಗಾಗಿ ಇಂದು ತೋಟಗಾರಿಕೆ ಉಪನಿರ್ದೇಶಕ ಶರಣಪ್ಪ ಭೋಗಿ ಮತ್ತು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್, ಉಪನಿರ್ದೇಶಕ ಚಂದ್ರಶೇಖರ್ ಮೊದಲಾದವರನ್ನೊಳಗೊಂಡ 20 ತಂಡಗಳ ಏಕಕಾಲದಲ್ಲಿ ಬೀಜ ಮಾರಾಟದ ಅಂಗಡಿಗಳ ಮೇಲೆ ಇಂದು ಬೆಳಿಗ್ಗೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ದಾಳಿ ಸುದ್ದಿ ತಿಳಿದಿದ್ದ ಅನೇಕ ಅಂಗಡಿಗಳು ಇಂದು ತೆರೆದಿರಲಿಲ್ಲ. ಆದರೆ ತೆರೆದ ಅಂಗಡಿ ಮತ್ತು ಗೋಡೌನ್ ಗಳಿಗೆ ತೆರಳಿದ ಅಧಿಕಾರಿಗಳಿಗೆ ಸಿಜೆಂಟ್ ಕಂಪನಿಯ ಮೆಣಸಿನಕಾಯಿ ಬೀಜಿದ ಸಂಗ್ರಹ ಡೀಲರ್ ಅಥವಾ ಡಿಸ್ಟ್ರುಬ್ಯೂಟರ್ ಬಳಿಯೂ ದೊರೆತಿಲ್ಲ.
ಆದರೆ ಅನೇಕ ಜನ ಬೀಜ ಮಾರಾಟಗಾರರು ಕೃಷಿ ಇಲಾಖೆಯಿಂದ ಅನುಮತಿ ಪಡೆದಿದ್ದು ಅದರಿಂದಲೇ ತೋಟಗಾರಿಕೆ ಬೆಳೆಗಳ ಬೀಜ ಮಾರಾಟ ಮಾಡುತ್ತಿದ್ದಾರೆ, ತೋಟಗಾರಿಕೆ ಬೆಳೆ ಬೀಜ ಮಾರಾಟಕ್ಕೆ ಆ ಇಲಾಖೆಯಿಂದ ಪಡೆಯಬೇಕು, ಹಾಗೆ ಅನುಮತಿ ಪಡೆಯದ ಆರು ಅಂಗಡಿಗಳಿಗೆ ತೋಟಗಾರಿಕಾ ಇಲಾಖೆ ನೋಟೀಸ್ ಜಾರಿ ಮಾಡಿದೆ.
ಇನ್ನು ಸ್ಟಾಕ್ ಬಗ್ಗೆ ದಾಖಲೆ ಸರಿಯಾಗಿ ಇಡದಿರುವುದು, ಸೇರಿದಂತೆ ಇನ್ನಿತರ ಲೋಪದೋಷಗಳನ್ನು ಪತ್ತೆ ಹೆಚ್ಚಿರುವ ಕೃಷಿ ಅಧಿಕಾರಿಗಳು 18 ಅಂಗಡಿಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಕೇಳಲು ಹೋದಾಗ ಮಾರಾಟಗಾರ ನನ್ನ ಬಳಿ ಸದ್ಯ ಸ್ಟಾಕ್ ಇಲ್ಲ, ಅಡ್ವಾನ್ಸ್ ಕೊಡು ತರಿಸಿಕೊಡುವೆ. ಹೆಚ್ಚಿನ ಧರ ಎಂದು ಹೇಳುತ್ತಾನೆ. ಅದೇ ತನ್ನ ನಂಬಿಗಸ್ಥರು ಹೋದರೆ ಮಾತ್ರ ಇದನ್ನು ಹೇಳುತ್ತಾನೆ. ಬೇರೆಯವರಿಗೆ ಹೆಚ್ಚಿನ ಧರದ ದಂಧೆಯ ಸ್ವರೂಪ ಗೊತ್ತೆ ಆಗಲ್ಲ.
ಇದಕ್ಕೆಲ್ಲ ವ್ಯವಸ್ಥಿತ ಜಾಲವೇ ಇದೆ. ಕಾಳಸಂತೆಯಲ್ಲಿ ಮಾರುವವರು ಬಿಲ್ ಸಹ ಕೊಡಲ್ಲ. ನಂಬಿಕೆಯೇ ಮುಖ್ಯ. ಆಂಧ್ರದಿಂದ ತಂದು ಮಾರುತ್ತೇವೆ ಎನ್ನುತ್ತಾರೆ.
ತನಿಖೆ ಏನಾಯ್ತು
ಕಳೆದ ವರ್ಷ ನಗರದಲ್ಲಿ ಪ್ರಮುಖ ಕಂಪನಿಗಳ ಕ್ರಿಮಿನಾಶಕವನ್ನು ನಕಲಿ ಮಾಡಿ ಮಾರಾಟ ಸಂಬಂಧ ಒಬ್ಬರನ್ನು ಬಂಧಿಸಿದ ಕೃಷಿ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದರೂ ಇಂದಿಗೂ ಈ ಕೇಸು ಏನು ಆಗಿಲ್ಲ. ಅದೇ ರೀತಿ ಎಸಿ ಗೋದಾಮಿನಲ್ಲಿ ನಕಲಿ ಮೆಕ್ಕೆಜೋಳ ಸಿಕ್ತು. ಅದನ್ನು ಸಂಗ್ರಹಿಸಿದ್ದ ಹಾವೇರಿ ವ್ಯಕ್ತಿಗೆ ಏನಾಯ್ತು, ಹೀಗೆ ಅಕ್ರಮ ದಂಧೆ, ನಕಲಿ ದಂಧೆ ಮಾಡುವವರಿಗೆ ಶಿಕ್ಷೆಯಾಗದಿರುವ ಕಾರಣ ಈ ಕಾಳಸಂತೆಗೆ ಕಡಿವಾಣ ಕಷ್ಟ.

ಬೀಜ ದಂಧೆ
ಹೆಚ್ಚಿನ ಧರದಲ್ಲಿ ಬೀಜ ಮಾರಾಟ ಮಾಡುವುದರ ಬಗ್ಗೆ ದೂರು ದಾಖಲಿಸುವುದು ಕಷ್ಟವಿದೆ. ಏಕೆಂದರೆ ಹೆಚ್ಚಿನ ಬೆಲೆಗೆ ಮಾರಾಟಗಾರ ಬಿಲ್ ನೀಡಲ್ಲ. ಹಾಗಾದ ಮೇಲೆ ದೂರು ದಾಖಲಿಸಲು ಬರಲ್ಲ.