ಕೃಷಿ ಜಮೀನುಗಳಲ್ಲಿ ಬಾರ್, ರೆಸ್ಟೋರಂಟ್-ಕ್ರಮಕ್ಕೆ ಒತ್ತಾಯ

ಮುಳಬಾಗಿಲು, ನ.೨೦- ಗ್ರಾಮಪಂಚಾಯ್ತಿಗಳ ಅನುಮತಿ ಪಡೆಯದೆ, ಕೃಷಿ ಭೂಮಿ ಪರಿವರ್ತಿಸದೇ, ಕೃಷಿ ಜಮೀನುಗಳಲ್ಲಿ ಬಾರ್ ರೆಸ್ಟೋರೆಂಟ್‌ಗಳನ್ನು ಪ್ರಾರಂಭಿಸಲಾಗುತ್ತಿದೆ, ಕೋಲಾರ ನಗರದಲ್ಲಿನ ನಾಲ್ಕೈದು ಬಾರ್‌ಗಳು ಸಹ ಗಡಿಗೆ ಸ್ಥಳಾಂತರಗೊಳಿಸಲಾಗಿರುವುದರಿಂದ ಆಂಧ್ರದಿಂದ ಗುಂಪು ಗುಂಪಾಗಿ ಮದ್ಯ ಖರೀದಿಗೆ ಮುಗಿ ಬೀಳುತ್ತಿರುವುದರಿಂದ ಗೊಂದಲ ಉಂಟಾಗುತ್ತಿದೆ,
ಕೊರೋನ ಸೋಂಕಿನ ಆತಂಕ ಒಂದೆಡೆಯಾದರೆ ಕುಡುಕರ ಹಾವಳಿ ಇನ್ನೊಂದಡೆಯಾಗಿದೆ ಆದ್ದರಿಂದ ನಿಯಮ ಬಾಹಿರವಾಗಿ ತೆರೆದಿರುವ ಬಾರ್‌ಗಳನ್ನು ಮುಚ್ಚಿಸಬೇಕೆಂದು ಅಖಿಲ ಭಾರತ ಕಿಸಾನ್‌ಮಂಚ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಗೋಪಾಲ್ ಆಗ್ರಹಿಸಿದರು.
ಮಂಗಳವಾರ ಸಂಜೆ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಕೆ.ಎನ್.ರಾಜಶೇಖರ್ ರವರಿಗೆ ಮನವಿ ಸಲ್ಲಿಸಿ ಮಾತನಾಡಿ ಆಂಧ್ರದಲ್ಲಿ ಮದ್ಯ ದುಬಾರಿ ಬೆಲೆ ಒಂದೆಡೆಯಾದರೆ ಅಮಲು ಏರದಿರುವುದು ಮತ್ತೊಂದು ಕಾರಣವಾಗಿದ್ದು ರುಚಿಯೂ ಸಹಾ ಇಲ್ಲವೆಂಬ ಕಾರಣಕ್ಕೆ ಕರ್ನಾಟಕದ ಮದ್ಯಕ್ಕೆ ಮುಗಿಬೀಳುತ್ತಿದ್ದು ಗಡಿ ಗ್ರಾಮಗಳಲ್ಲಿ ನೆಮ್ಮದಿ ಇಲ್ಲವಾಗಿದೆ ನಿಯಮ ನಿಬಂಧನೆಗಳು ಇಲ್ಲದೆ ಗಡಿಯಲ್ಲಿ ಅವಘಡಗಳ ಸಂಭವಿಸುವ ಸಾಧ್ಯತೆಗಳಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಶಾಲಾಕಾಲೇಜುಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ೧೫ ದಿನಗಳಾದರೂ ರಿಪೋರ್ಟ್ ನೀಡುವುದಿಲ್ಲ ಆದರೆ ಬಾರ್‌ಗಳು ಗಡಿಗೆ ವರ್ಗಾಯಿಸಲು ಕೆಲವೇ ದಿನಗಳಲ್ಲಿ ಅಧಿಕಾರಿಗಳು ಮುಂದಾಗುತ್ತಾರೆ ಈ ರೀತಿ ತಾರತಮ್ಯದ ನೀತಿಗಳನ್ನು ಸರ್ಕಾರ ತಡೆಯಬೇಕು ಗಡಿ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಸೇವೆಗಳು ಇಲ್ಲವಾದರೂ ಮದ್ಯಕ್ಕೆ ಕೊರತೆ ಇಲ್ಲವಾಗಿದೆ ಇದು ಎಂತಹ ವಿಪರ್ಯಾಸ ಎಂದು ಗೋಪಾಲ್ ಟೀಕಿಸಿದರು.
ಅಖಿಲ ಭಾರತ ಕಿಸಾನ್ ಸೆಲ್ ಅಧ್ಯಕ್ಷ ಮಲ್ಲೇಕುಪ್ಪ ಅಂಬರೀಶ್, ಮುಖಂಡರಾದ ಎಂ.ವೆಂಕಟರವಣಪ್ಪ, ಸುಗಟೂರುವೆಂಕಟರಾಮಪ್ಪ, ಜಯರಾಮಪ್ಪ, ವಕೀಲ ಪಿ.ಎಂ.ಸದಾಶಿವ ಮುಂತಾದವರು ಇದ್ದರು.