ಕೃಷಿ ಚಟುವಟಿಕೆ ಮುಂದುವರೆಸಿ: ಸಚಿವ ಪ್ರಭು ಚವ್ಹಾಣ್

ಬೀದರ: ಮೇ.26:ಸರ್ಕಾರ ರೈತರ ಪರವಾಗಿದ್ದು, ಕೊರೊನಾದಂತಹ ಸಂಕಷ್ಟ ಕಾಲದಲ್ಲಿ ರೈತರು ಎದೆಗುಂದದೇ ತಮ್ಮ ಕೃಷಿ ಚಟುವಟಿಕೆಗಳನ್ನು ಮುಂದುವರೆಸಬೇಕು ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ಉತ್ತಮ ಪರಿಕರಗಳನ್ನು ಬಳಸಿ ಬೆಳೆಗಳ ಆರೋಗ್ಯ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ಪಡೆಯಲು, ನಿರೀಕ್ಷಿತ ಆದಾಯ ಗಳಿಸಲು ನೆರವಾಗಲು ಸಾಗುವಳಿ ಭೂಮಿ ಹೊಂದಿರುವ ಎಲ್ಲ ಅರ್ಹ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6,000 ರೂ.ಗಳನ್ನು ಸಮಾನ ಕಂತುಗಳಲ್ಲಿ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 4,000 ರೂ.ಗಳನ್ನು ಎರಡು ಕಂತುಗಳಲ್ಲಿ ನೀಡುತ್ತಿರುವುದು ಕೊರೊನಾ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಪ್ರಮುಖ ಬೆಳೆಯಾದ ಸೋಯಾಅವರೆ ಬಿತ್ತನೆ ಬೀಜ 53800 ಕ್ವಿಂಟಾಲ್ ಸರಬರಾಜಾಗಿದೆ. ಅದರಂತೆ ತೊಗರಿ 264 ಕ್ವಿಂಟಾಲ್, ಉದ್ದು 70.20 ಕ್ವಿಂಟಾಲ್, ಹೆಸರು 64.80 ಕ್ವಿಂಟಾಲ್, ಜೋಳ 35.20 ಕ್ವಿಂಟಾಲ್ ಸರಬರಾಗಿದೆ. ಕೃಷಿ ಸಚಿವರೊಂದಿಗೆ ಮಾತನಾಡಿ, ಜಿಲ್ಲೆಗೆ ಬೇಡಿಕೆ ಇರುವಷ್ಟು ಬಿತ್ತನೆ ಬೀಜವನ್ನು ಸಕಾಲಕ್ಕೆ ಪೂರೈಸುವಂತೆ ಮನವಿ ಮಾಡಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಾಗೆಯೇ ಜಿಲ್ಲೆಯಲ್ಲಿ 6139.62 ಮೆ.ಟನ್ ಯೂರಿಯಾ, 7615.81 ಮೆ.ಟನ್ ಡಿ.ಎ.ಪಿ, 664.019 ಮೆ.ಟನ್ ಎಮ್.ಓ.ಪಿ, 6472.850 ಮೆ.ಟನ್ ಎನ್‍ಪಿಕೆಎಸ್, 342.700 ಮೆ.ಟನ್ ಎಸ್‍ಎಸ್‍ಪಿ, 77 ಮೆ.ಟನ್ ಕಾಂಪೋಸ್ಟ್ ರಸಗೊಬ್ಬರ ದಾಸ್ತಾನು ಇದ್ದು, ಮುಂಗಾರು ಹಂಗಾಮಿಗೆ ರಸಗೊಬ್ಬರದ ಕೊರತೆಯಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯ 30 ರೈತ ಸಂಪರ್ಕ ಕೇಂದ್ರಗಳು ಹಾಗೂ 142 ಹೆಚ್ಚುವರಿ ಬಿತ್ತನೆ ಬೀಜ ಮಾರಾಟ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ರೈತರು ಇದರ ಸದುಪಯೋಗ ಪಡೆಯಬೇಕು ಎಂದು ರೈತರಲ್ಲಿ ಮನವಿ ಮಾಡಿದ್ದಾರೆ.
ಬಿತ್ತನೆ ಬೀಜ ಪಡೆಯುವ ಸಂದರ್ಭದಲ್ಲಿ ಕೋವಿಡ್-19 ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸುವಂತೆ ರೈತರಲ್ಲಿ ಮನವಿ ಮಾಡಿದ್ದು, ಜಿಲ್ಲೆಯಲ್ಲಿ ಏಕಬೆಳೆ ಪದ್ಧತಿಯನ್ನು ಅನುಸರಿಸುತ್ತಿರುವ ರೈತರು, ಮಿಶ್ರ ಬೆಳೆ, ಬಹುಬೆಳೆ ಪದ್ದತಿ, ಸಮಗ್ರ ಕೃಷಿ ಪದ್ಧತಿ ಮತ್ತು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿದಲ್ಲಿ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ರೈತರು ರಸಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ಗರಿಷ್ಠ ಮಾರಾಟ ಬೆಲೆಯನ್ನು ನೋಡಿ ಖಾತ್ರಿಪಡಿಸಿಕೊಂಡಿಯೇ ಖರೀದಿಸಬೇಕು. ಹಾಗೂ ಪರವಾನಿಗೆ ಹೊಂದಿರುವ ಮಾರಾಟಗಾರರಲ್ಲಿ ಮಾತ್ರ ಖರೀದಿಸಿ ಅಧಿಕೃತ ರಶೀದಿ ಪಡೆಯಬೇಕು ಎಂದು ಹೇಳಿದ್ದಾರೆ.
ತಪ್ಪದೇ ಬೆಳೆ ವಿಮೆ ಮಾಡಿಸಿಕೊಳ್ಳಿ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಡಿ ಪ್ರಕೃತಿ ವಿಕೋಪ ಹಾಗೂ ಕೀಟ ರೋಗ ಬಾಧೆಯಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡಲಾಗುತ್ತದೆ.
ರೈತರಿಗೆ ವಿಮಾ ಕಂತನ್ನು ಆಹಾರ ಮತ್ತು ಎಣ್ಣೆಕಾಳು ಬೆಳೆಗಳಿಗೆ ಮುಂಗಾರು ಹಂಗಾಮಿಗೆ ಶೇ.2, ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಶೇ.1.5 ಹಾಗೂ ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳಿಗೆ ಎಲ್ಲಾ ಹಂಗಾಮುಗಳಲ್ಲಿ ಶೇ.5ರಷ್ಟು ಎಂದು ನಿಗದಿಪಡಿಸಲಾಗಿದೆ. ಎಲ್ಲಾ ರೈತರು ಬೆಳೆ ವಿಮೆ ಮಾಡಿಸಿಕೊಂಡು ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಸಚಿವರು ರೈತರಲ್ಲಿ ವಿನಂತಿಸಿದ್ದಾರೆ.