ಕೃಷಿ ಚಟುವಟಿಕೆಗೆ ಕೊರೋನಾ ಮಾರ್ಗಸೂಚಿ ಅಡ್ಡಿಯಾಗದರಲಿ

ಗದಗ ಜೂ.1: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಶೇಕಡಾವಾರು ಪ್ರಮಾಣ ಇಳಿಮುಖವಾಗುತ್ತಿದೆ. ಮುಂಗಾರು ಹಂಗಾಮು ಆರಂಭವಾಗಿದ್ದು ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಕೊರೋನಾ ಮಾರ್ಗಸೂಚಿಗಳು ಅಡ್ಡಿಯಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ತಿಳಿಸಿದರು.

  ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂಗಾರು ಹಂಗಾಮು ಆರಂಭವಾಗಿದ್ದು ರೈತರು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗುತ್ತಿದ್ದು ಕೃಷಿ ಚಟುವಟಿಕೆಗೆ ಅಗತ್ಯವಿರುವ ಬೀಜ ಗೊಬ್ಬರ, ಯಂತ್ರೋಪಕರಣಗಳು ಸರಾಗವಾಗಿ ರೈತರಿಗೆ ತಲುಪುವಂತೆ ಕ್ರಮ ಅಗತ್ಯವಾಗಿದೆ ಎಂದರು. 

   ರೈತರ ಬಿತ್ತನೆಗೆ ಅವಶ್ಯವಿರುವ ಬೀಜ ಗೊಬ್ಬರ ಹಾಗೂ ಕೀಟ ನಾಟಕಗಳ ಕೊರತೆಯಾಗದಂತೆ ಕೃಷಿ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಬೇಕು. ಬಿತ್ತನೆ ಸಮಯವಾದ್ದರಿಂದ ಕಳಪೆ ಬಿತ್ತನೆ ಬೀಜ ಗೊಬ್ಬರ ಹಾಗೂ ಕೀಟ ನಾಶಕಗಳ ಮಾರಾಟ ತಡೆಯಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಬೀಜ ಗೊಬ್ಬರ ಮಾರಾಟ ಮಾಡದಂತೆ ಕೃಷಿ ಇಲಾಖೆಯ ಜಾರಿ ದಳ ಕಾರ್ಯತಂಡವು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

  ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಮಾತನಾಡಿ ಜಿಲ್ಲೆಯಲ್ಲಿ ವಿಧಿಸಲಾದ ಕಠಿಣ ಲಾಕ್ ಡೌನ್ ಮಾರ್ಗಸೂಚಿಗಳ ಬಗ್ಗೆ ತಿಳಿಸಿ ಕಳೆದ 15 ದಿನಗಳ ಹಿಂದೆ ಕೊರೋನಾ ಸೋಂಕಿತರ ಶೇಕಡಾವಾರು ದೃಢ ಪ್ರಕರಣಗಳು ಶೇ. 35 ಕ್ಕೂ ಅಧಿಕವಾಗಿತ್ತು. ತದನಂತರ ಲಾಕ್‍ಡೌನ್ ಕಠಿಣ ಕ್ರಮಗಳನ್ನು ಜಿಲ್ಲೆಯಲ್ಲಿ ಜಾರಿಗೊಳಿದ ಪರಿಣಾಮವಾಗಿ ದೃಢ ಪ್ರಕರಣಗಳು ಶೇಕಡಾವಾರು ಪ್ರಮಾಣ 20 ಕ್ಕಿಂತ ಕಡಿಮೆಯಾಗಿದೆ. ಜಿಲ್ಲೆಯಲ್ಲಿ 80 ಕ್ಕೂ ಅಧಿಕ ವೆಂಟಿಲೇಟರ್ ಗಳಿವೆ. ಜಿಲ್ಲೆಯಲ್ಲಿ 15 ಕೋವಿಡ್ ಆರೈಕೆ ಕೇಂದ್ರಗಳಲ್ಲಿ 1400 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಕೋವಿಡ್ 19 ಸೋಂಕಿತರ ಚಿಕಿತ್ಸೆಗಾಗಿ ಗದಗ ಜಿಮ್ಸ ನಲ್ಲಿ ಸೇರಿದಂತೆ ವಿವಿಧ ತಾಲೂಕಾ ಆಸ್ಪತ್ರೆಗಳಲ್ಲಿ 795 ಆಕ್ಸಿಜನ್ ಹಾಸಿಗೆಗಳು ಲಭ್ಯವಿವೆ. ಖಾಸಗಿ ಆಸ್ಪತ್ರೆಗಳಲ್ಲಿ 295 ಆಕ್ಸಿಜನ್ ಹಾಸಿಗೆಗಳ ಲಭ್ಯತೆ ಇದೆ.    

  ಜಿಲ್ಲೆಯಲ್ಲಿ 2691 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 1824 ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ 20 ರಷ್ಟು ಸೋಂಕಿತರು ಆಸ್ಪತ್ರೆಗಳಲ್ಲಿ , ಶೇ 10 ರಷ್ಟು ಸೋಂಕಿತರು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

 ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ಉತ್ಪಾದನಾ ಘಟಕಗಳಿಗೆ ಸರ್ಕಾರವು ಜಿಮ್ಸ್ ಹಾಗೂ ಖಾಸಗಿ ವ್ಯಕ್ತಿಯೊಬ್ಬರಿಗೆ ಆರಂಭಿಸಲು ಅನುಮತಿಸಿದೆ. ಖಾಸಗಿ ವ್ಯಕ್ತಿಯೊಬ್ಬರು ಸದ್ಯ ಆಕ್ಸಿಜನ್ ಉತ್ಪಾದನೆ ಕಾರ್ಯಾರಂಭ ಮಾಡಿದೆ .ಜಿಲ್ಲೆಗೆ ಪೂರೈಕೆಯಾಗುತ್ತಿರುವ ಆಕ್ಸಿಜನ್ ಸೋಂಕಿತರಿಗೆ ಒದಗಿಸಲಾಗುತ್ತಿದೆ. ಸದ್ಯ ಸೋಂಕಿತರಿಗೆ ಅಗತ್ಯವಿರುವಷ್ಟು ಆಕ್ಸಿಜನ್ ಪೂರೈಕೆಯಾಗುತ್ತಿದೆ. ಹಾಗೂ ಆಕ್ಸಿಜನ್ ಬಳಕೆ ಪ್ರಮಾಣ ಕಡಿಮೆಯಾಗಿದೆ ಎಂದರು.

  ಇದಕ್ಕೆ ಪ್ರತಿಯಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮಾತನಾಡಿ ಸೋಂಕಿನ ಅಂಕಿ ಅಂಶಗಳನ್ನು ಗಮನಿಸಿದಾಗ ಸೋಂಕು ಇಳಿಮುಖವಾಗುತ್ತಿರುವುದು ಆಶಾದಾಯಕ ವಿಷಯ. ಕೋವಿಡ್ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ತಾಲೂಕಾ ವೈದ್ಯಾಧಿಕಾರಿಗಳು ನಿಯಮಿತವಾಗಿ ಭೇಟಿ ನೀಡುವ ಮೂಲಕ ಸರಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಗಮನಿಸಬೇಕು. ಅಲ್ಲದೇ ಸೋಂಕಿತರಿಗೆ ಔಷಧಿ ಕಿಟ್‍ಗಳು ತಲುಪಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.  
 ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರ ನಿಗದಿಪಡಿಸಿದ ದರದಂತೆ ಚಿಕಿತ್ಸೆ ವೆಚ್ಚ ಸ್ವೀಕರಿಸಬೇಕು. ಹಾಗೂ ಸರಕಾರದ ಮಾರ್ಗಸೂಚಿಗಳನ್ವಯ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ನಿಯಮಿತವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

  ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಸಾಮಗ್ರಿಗಳು ಹಾಗೂ ಔಷಧಿಗಳ ಕೊರತೆಯಾಗದಂತೆ ನಿಗಾ ವಹಿಸಬೇಕು. ವಿಟಮಿನ್ ಸಿ ಹಾಗೂ ಝಿಂಕ್ ಮಾತ್ರೆಗಳ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು. ಸರ್ಕಾರ ಹೇರಿರುವ ಮಾರ್ಗಸೂಚಿಗಳ ಸರಿಯಾಗಿ ಪಾಲನೆಯಾಗುವಂತೆ ನಿಯೋಜಿತ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ತಿಳಿಸಿದರು.