ಕೃಷಿ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿ : ಪ್ರಧಾನಿ ಬಣ್ಣನೆ

ನವದೆಹಲಿ, ಸೆ.20-ಸಂಸತ್ತಿನಲ್ಲಿ ಕೃಷಿ ಮಸೂದೆಗಳು ಅಂಗೀಕಾರವಾಗಿರುವುದಕ್ಕೆ ಪ್ರಧಾನಿ ನರೇಂದ್ರ ರೈತರಿಗೆ ಶುಭ ಹಾರೈಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕೃಷಿಕ್ಷೇತ್ರದ ಇತಿಹಾಸದಲ್ಲಿ ಇದೊಂದು ಅಮೂಲ್ಯವಾದ ಕ್ಷಣ ಎಂದು ಬಣ್ಣಿಸಿದ್ದಾರೆ.

ಸಂಸತ್ತಿನಲ್ಲಿ ಪ್ರಮುಖ ಮಸೂದೆಗಳನ್ನು ಅಂಗೀಕಾರವಾಗಿರುವುದಕ್ಕೆ ರೈತರಿಗೆ ಅಭಿನಂದನೆಗಳು .ಇದೊಂದು ಅಮೂಲ್ಯವಾದ ಕ್ಷಣ. ಕೃಷಿ ಕ್ಷೇತ್ರದಲ್ಲಿ ಸಂಪೂರ್ಣ ಪರಿವರ್ತನೆಯನ್ನು ಖಚಿತಪಡಿಸುತ್ತದೆ ಮತ್ತು ಕೋಟ್ಯಂತರ ರೈತರನ್ನು ಸಬಲೀಕರಣಗೊಳಿಸುತ್ತದೆ ಎಂದು ಹೇಳಿದ್ದಾರೆ

ವಿರೋಧದ ನಡುವೆಯೂ ಸಂಸತ್ತಿನ ಉಭಯ ಸದನಗಳಲ್ಲಿ ಕೃಷಿ ಸಂಬಂಧಿಸಿದ ಮಸೂದೆ ಅಂಗೀಕಾರವಾದ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದಾರೆ.

ದಶಕಗಳಿಂದ,ದೇಶದ ರೈತ ಹಲವಾರು ನಿರ್ಬಂಧಗಳಿಂದ ಬಂಧಿಸಲ್ಪಟ್ಟಿದ್ದ ಮತ್ತು ಮಧ್ಯವರ್ತಿಗಳಿಂದ ಬೆದರಿಸಲ್ಪಟ್ಟಿದ್ದ. ಸಂಸತ್ತು ಅಂಗೀಕರಿಸಿರುವ ಮಸೂದೆಗಳು ರೈತರನ್ನು ಇಂತಹ ಸಂಕೋಲೆಗಳಿಂದ ಮುಕ್ತಗೊಳಿಸುತ್ತವೆ. ಈ ಮಸೂದೆಗಳು ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಮತ್ತು ಅವರಿಗೆ ಹೆಚ್ಚಿನ ಸಮೃದ್ಧಿಯನ್ನು ನೀಡುವ ಪ್ರಯತ್ನಗಳಿಗೆ ಉತ್ತೇಜನ ನೀಡುತ್ತವೆ ಎಂದು ಹೇಳಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಪರಿಶ್ರಮಪಡುವ ರೈತರಿಗೆ ಸಹಾಯ ಮಾಡುವ ಇತ್ತೀಚಿನ ತಂತ್ರಜ್ಞಾನದ ಅಗತ್ಯವಿದೆ. ಈಗ, ಮಸೂದೆಗಳ ಅಂಗೀಕಾರದೊಂದಿಗೆ, ರೈತರು ಭವಿಷ್ಯದ ತಂತ್ರಜ್ಞಾನಕ್ಕೆ ಸುಲಭ ಪ್ರವೇಶವನ್ನು ಪಡೆಯುವುದರಿಂದ, ಉತ್ಪಾದನೆ ಹೆಚ್ಚುತ್ತದೆ ಮತ್ತು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇದು ಸ್ವಾಗತಾರ್ಹ ಹೆಜ್ಜೆಯಾಗಿದೆ.ನಾನು ಇದನ್ನು ಮೊದಲೇ ಹೇಳಿದ್ದೇನೆ, ಈಗ ಮತ್ತೊಮ್ಮೆ ಹೇಳುತ್ತೇನೆ ಎಂದಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮುಂದುವರೆಯುತ್ತದೆ. ಸರ್ಕಾರದ ಖರೀದಿಯೂ ಮುಂದುವರಿಯುತ್ತದೆ. ನಮ್ಮ ರೈತರಿಗೆ ಸೇವೆ ಸಲ್ಲಿಸಲು ನಾವು ಇಲ್ಲಿದ್ದೇವೆ. ಅವರಿಗೆ ಬೆಂಬಲ ನೀಡಲು ಮತ್ತು ಅವರ ಮುಂದಿನ ಪೀಳಿಗೆಯ ಉತ್ತಮ ಜೀವನವನ್ನು ಖಾತ್ರಿಪಡಿಸಿಕೊಳ್ಳಲು ನಾವು ಸಾಧ್ಯವಾದದ್ದೆಲ್ಲವನ್ನೂ ಮಾಡುತ್ತೇವೆ.” ಎಂದು ಅವರು ಹೇಳಿದ್ದಾರೆ.