ಕೃಷಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ದೊರೆಯಲಿ

ಕಲಬುರಗಿ.ಜೂ.11: ದೇಶದ ಬೆನ್ನೆಲಬಾದ ಕೃಷಿಯಲ್ಲಿ ನಿರಂತರವಾಗಿ ದುಡಿಯುವ ಕೃಷಿ ಕಾರ್ಮಿಕರ ಕಾರ್ಯ ಅಮೋಘವಾಗಿದೆ. ಅವರಿಗೆ ಸೂಕ್ತ ಕೂಲಿ, ಕಾರ್ಮಿಕರ ಶಾಸನಗಳ ಪರಿಣಾಮಕಾರಿ ಅನುಷ್ಠಾನ, ಅಪಘಾತ ವಿಮೆ, ವೃದ್ಧಾಪ್ಯದಲ್ಲಿ ವೇತನ, ನಿರುದ್ಯೋಗ ಭತ್ಯೆ, ವೈದ್ಯಕೀಯ ಸೌಲಭ್ಯಗಳು, ವಿಮೆ ಸೇರಿದಂತೆ ಮುಂತಾದ ಸಾಮಾಜಿಕ ಭದ್ರತಾ ಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಕೃಷಿ ಕಾರ್ಮಿಕರ ಬದುಕು ಹಸನಾಗಬೇಕಾಗಿದೆಯೆಂದು ಸಮಾಜ ಸೇವಕ, ಮುಖಂಡ ಬಸವರಾಜ ತುಪ್ಪದ ಹೇಳಿದರು.
ನಗರದ ಹಾಗರಗಾ ರಸ್ತೆಯಲ್ಲಿರುವ ಪ್ರಗತಿಪರ ರೈತ ಮಹೇಶ ಆರ್.ಮಠಪತಿ ತೋಟದಲ್ಲಿ ‘ಕೃಷಿ ಕಾರ್ಮಿಕರ ದಿನಾಚರಣೆ’ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ವತಿಯಿಂದ ಶುಕ್ರವಾರ ಸರಳವಾಗಿ ಜರುಗಿದ ವ್ಯವಸಾಯದಲ್ಲಿ ಕಾರ್ಯನಿರತ ಕೃಷಿ ಕಾರ್ಮಿಕರಿಗೆ ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಪ್ರಗತಿಪರ ರೈತ ಮಹೇಶ ಆರ್.ಮಾತನಾಡಿ, ಕೃಷಿ ಕಾರ್ಮಿಕರಿಂದಲೆ ಹೊಲದ ಮಾಲೀಕನಾಗಲು ಸಾಧ್ಯ. ಲಾಕ್‍ಡೌನ್ ಸಂದರ್ಭದಲ್ಲಿಯೂ ನಮ್ಮ ತೋಟದಲ್ಲಿ ಕೆಲಸ ಮಾಡುವ ಕೃಷಿ ಕಾಮಿಕರಿಗೆ ಪೂರ್ಣ ಕೂಲಿ ನೀಡಲಾಗಿದೆ. ಕೃಷಿ ಕಾರ್ಮಿಕರಿಗೆ ಭೂಮಿಯ ಹಂಚಿಕೆ, ಉತ್ತಮವಾದ ಕೆಲಸದ ವಾತಾವರಣದ ನಿರ್ಮಾಣ, ಜೀವನಮಟ್ಟ ಸುಧಾರಣಾ ಕ್ರಮಗಳು, ನಿವೇಶನ ಸೌಲಭ್ಯಗಳು ದೊರೆಯಬೇಕಾಗಿದೆಯೆಂದರು.
ಪ್ರಮುಖರಾದ ಎಚ್.ಬಿ.ಪಾಟೀಲ, ಸುನೀಲಕುಮಾರ ವಂಟಿ, ನರಸಪ್ಪ ಬಿರಾದಾರ ದೇಗಾಂವ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಎಚ್.ಮಂಗಾಣೆ, ಪ್ರೊ.ಸಿದ್ರಾಮಪ್ಪ ಎಸ್.ಅಂಡಗಿ, ಕೃಷಿ ಕಾರ್ಮಿಕರಾದ ಕಲ್ಯಾಣಿ ಎಸ್.ಚನ್ನಗೊಂಡ್, ಅನಿತಾ ಘಂಟಿಮಠ, ಪಾರ್ವತಿ, ರಜಿಯಾ, ಹಸೀನಾ, ಆಷ್ಮಾ ಇದ್ದರು.