ಕೃಷಿ ಕಾಯ್ದೆ ಹಿಂಪಡೆಯುವವರೆಗೂ ವಿಶ್ರಮಿಸುವುದಿಲ್ಲ: ಟಿಕಾಯತ್

ಧಾರವಾಡ, ಮಾ 31: ಕೃಷಿ ಕಾಯ್ದೆ ಹಿಂಪಡೆಯುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ಹೇಳಿದರು.
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಇಲ್ಲಿನ ಜಿಲ್ಲಾಧಿಕಾರಿ ಕಛೇರಿ ಎದುರು ರೈತ ಹಿತರಕ್ಷಣಾ ಪರಿವಾರದಿಂದ 60 ದಿನಗಳ ಕಾಲ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರ ನಮ್ಮ ಮೇಲೆ ಗುಂಡು ಹಾರಿಸಿದರೂ ನಾವು ಹೆದರೊಲ್ಲ. ರೈತರಿಗೆ ಮಾರಕವಾಗಿರುವ ಕರಾಳ ಕೃಷಿ ಕಾನೂನು ಹಿಂಪಡೆಯುವವರೆಗೂ ನಾವು ಹೋರಾಟ ಮುಂದುವರೆಸುತ್ತೇವೆ ಎಂದರು.
ಕೇಂದ್ರ ಸರ್ಕಾರ ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸುತ್ತಿದೆ. ರಾಜ್ಯಸಭೆಯಲ್ಲಿಯೂ ವ್ಯಾಪಾರಿಗಳು ಪ್ರವೇಶ ಮಾಡಿದ್ದಾರೆ. ಮುಂದೊಂದು ದಿನ ಸಂಸತ್ತು ಖಾಸಗೀಕರಣವಾದರೆ ಆಶ್ಚರ್ಯವಿಲ್ಲ ಎಂದು ಕಿಡಿ ಕಾರಿದರು.
ರೈತರೊಡನೆ ಚರ್ಚೆ ಮಾಡದೆ ಸಂಸತ್ತಿನಲ್ಲಿ ಕೃಷಿ ಕಾಯ್ದೆಗೆ ಅನುಮೋದನೆ ನೀಡಲಾಗಿದೆ. ಕೇಂದ್ರ ರೂಪಿಸಿದ ಈ ಮೂರು ಕಾನೂನುಗಳು ರೈತರಿಗೆ ಮಾರಕವಾಗಿವೆ. ಕೇಂದ್ರ ಸರ್ಕಾರ ಸುಳ್ಳುಗಾರ ಎಂದು ಆರೋಪಿಸಿದರು.
ಕಿಸಾನ ಸಮ್ಮಾನ ಯೋಜನೆ ನಮಗೆ ಬೇಕಿಲ್ಲ. ಈ ಯೋಜನೆಯನ್ನು ಹಿಂಪಡೆಯಬೇಕು. ಮೊದಲು ರೈತ ದೇಶದ ಮಾಲೀಕನಾಗಿದ್ದ, ಈಗ ಉದ್ಯಮಿಗಳು ದೇಶದ ಮಾಲೀಕರಾಗಿದ್ದಾರೆ ಎಂದು ರಾಕೇಶ್ ಟಿಕಾಯತ್ ಕೇಂದ್ರ ಸರ್ಕಾರದ ಮೇಲೆ ಪ್ರಹಾರ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ, ಪಿ.ಎಚ್. ನೀರಲಕೇರಿ, ಸಿದ್ದು ಕಮ್ಮಾರ, ಡಾ. ಶರಣಪ್ಪ ಕೊಟಗಿ,ಮುತ್ತು ಬೆಳ್ಳಕ್ಕಿ ಸೇರಿಂದತೆ ಇತರ ಮುಖಂಡರು, ನೂರಾರು ರೈತರು ಉಪಸ್ಥಿತರಿದ್ದರು.