ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಸೆ. 12ರಂದು ಬೆಂಗಳೂರು ಚಲೋ

ಕಲಬುರಗಿ,ಸೆ.06: ರಾಜ್ಯ ಸರ್ಕಾರವೂ ಸಹ ಕೃಷಿ ಕಾಯ್ದೆಗಳ ತಿದ್ದುಪಡಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಸೆಪ್ಟೆಂಬರ್ 12ರಂದು ರಾಜ್ಯಾದ್ಯಂತ ರೈತರು ಬೆಂಗಳೂರು ಚಲೋ ಚಳುವಳಿ ಹಮ್ಮಿಕೊಂಡಿದ್ದಾರೆ ಎಂಧು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ರಾ. ಮಾಲಿಪಾಟೀಲ್ ಅವರು ಹೇಳಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ನಿರಂತರ ಹೋರಾಟಗಳಿಗೆ ಮಣಿದು ಕೇಂದ್ರ ಸರ್ಕಾರವು ಕೃಷಿಗೆ ಸಂಬಂಧಿಸಿದ ಮೂರು ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದಿದೆ. ಆದಾಗ್ಯೂ, ರಾಜ್ಯ ಸರ್ಕಾರವು ಇಲ್ಲಿಯವರೆಗೂ ಆ ಕಾಯ್ದೆಗಳನ್ನು ಹಿಂಪಡೆಯದೇ ರೈತ ವಿರೋಧಿ ನೀತಿಯನ್ನು ಮುಂದುವರೆಸಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರವು ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ರೈತರ ಬೆಳೆಗಳಿಗೆ ಯೋಗ್ಯ ಬೆಂಬಲ ಬೆಲೆಯನ್ನು ನಿಗದಿಪಡಿಸುವಂತೆ, ಕೇಳ ಮಾದರಿಯಲ್ಲಿ ತರಕಾರಿ ಬೆಳೆಗೆ ಬೆಂಬಲ ಬೆಲೆ ಘೋಷಿಸುವಂತೆ, ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ಹಿಂಪಡೆಯುವಂತೆ ಅವರು ಒತ್ತಾಯಿಸಿದರು.
ಆಲಮಟ್ಟಿ ಜಲಾಶಯದ ಆಣೆಕಟ್ಟು ಎತ್ತರವನ್ನು 512ರಿಂದ 514.524 ಮೀಟರ್‍ಗೆ ಹೆಚ್ಚಿಸುವಂತೆ, 2018ರಿಂದ 2022ರವರೆಗೆ ಅನಾವೃಷ್ಟಿ ಮತ್ತು ಅತಿವೃಷ್ಟಿಯಿಂದಾಗಿ ಬೆಳೆ ಹಾಳಾಗಿ ರೈತರು ತುಂಬಾ ಸಂಕಷ್ಟದಲ್ಲಿದ್ದು, ಕೂಡಲೇ ಬೆಳೆ ವಿಮೆ ಹಣ ಬಿಡುಗಡೆ ಮಾಡುವಂತೆ ಅವರು ಆಗ್ರಹಿಸಿದರು.
ರಾಜ್ಯಾದ್ಯಂತ ಬಗರ್ ಹುಕುಂ ಸಾಗುವಳಿದಾರರು ಸುಮಾರು ವರ್ಷಗಳಿಂದ ಉಳಿಮೆ ಮಾಡುತ್ತಿರುವ ರೈತರಿಗೆ ಡ ಹಾಗೂ ಇನ್ನಿತರ ನಿಯಮಗಳನ್ನು ಸರಿಪಡಿಸಿ ರೈತರಿಗೆ ಪಟ್ಟಾ ನೀಡುವಂತೆ, 99 ವರ್ಷಕ್ಕೆ ಲೀಸ್ ತರ ಹೊರಟಿರುವ ಕಾಯಿದೆ ರಾಜ್ಯ ಸರ್ಕಾರ ತಕ್ಷಣ ಕೈಬಿಟ್ಟು ಬಡ ರೈತರಿಗೆ ಪಟ್ಟಾ ನೀಡಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಸರ್ಕಾರ ಗೋಮಾಳ್ ಜಮೀನನ್ನು ಉದ್ಯಮಿಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡುವ ಕೆಲಸವನ್ನು ತಕ್ಷಣವೇ ಕೈಬಿಡುವಂತೆ, ರಾಜ್ಯಾದ್ಯಂತ ರೈತರು ಕಬ್ಬಿನ ಬೆಳೆಗೆ ಕಾರ್ಖಾನೆಗಳು ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ದರ ನಿಗದಿಪಡಿಸಿದ್ದು, ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿನ ಸಕ್ಕರೆ ಕಾರ್ಖಾನೆಗಳು ಏಕರೂಪದ ದರವನ್ನು ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಮಣಿಪುರಂ ಹಾಗೂ ಮುತ್ತೂಟ್ ಗೋಲ್ಡ್ ಲೋನ್ ಬ್ಯಾಂಕುಗಳು ರೈತರಿಗೆ ಮತ್ತು ಕೃಷಿ ಕೂಲಿ ಕಾರ್ಮಿಕರು ಅಡವಿಟ್ಟ ಬಂಗಾರದ ಒಡವೆಗಳನ್ನು ಮೂರು ತಿಂಗಳೊಳಗೆ ಹರಾಜು ಹಾಕಿ ರೈತರಿಗೆ ಮತ್ತು ರೈತ ಮಹಿಳೆಯರಿಗೆ ಮೋಸ ಮಾಡುತ್ತಿದ್ದಾರೆ. ರೈತರ ಯಾವುದೇ ಒಪ್ಪಿಗೆ ಪಡೆಯದೇ ಬಂಗಾರವನ್ನು ಹರಾಜು ಮಾಡಿ ರೈತರಿಗೆ ಹಾಗೂ ರೈತ ಮಹಿಳೆಯರಿಗೆ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಎರಡೂ ಬ್ಯಾಂಕುಗಳು ಹರಾಜು ಮಾಡಿರುವ ಚಿನ್ನವನ್ನು ಮಹಿಳೆಯರಿಗೆ ಮರಳಿಸುವಂತೆ ಹಗೂ ರಾಜ್ಯ ಸರ್ಕಾರವು ಈ ಎರಡೂ ಬ್ಯಾಂಕುಗಳನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದರು.
ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ 12ರಂದು ಬೆಂಗಳೂರು ಚಲೋ ಚಳುವಳಿಯನ್ನು ಹಮ್ಮಿಕೊಂಡು, ಅಂದು ಬೆಂಗಳೂರು ರೈಲು ನಿಲ್ದಾಣದಿಂದ ವಿಧಾನಸೌಧದವರೆಗೆ ಮೆರವಣಿಗೆ ಹೊರಟು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸದಾಶಿವ್, ಕೃಷ್ಣ ಹಾಬಾಳಕರ್, ಶ್ರೀಕಾಂತ್, ಬಸವರಾಜ್ ತಮ್ಮನ್, ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.