ಕೃಷಿ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಹುಬ್ಬಳ್ಳಿ,ಮಾ26: ತ್ರಿವಳಿ ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ರಾಷ್ಟ್ರೀಯ ಕಿಸಾನ್ ಸಂಯುಕ್ತ ಮೋರ್ಚಾ ಸಂಘಟನೆಯು ನೀಡಿರುವ ಭಾರತ್ ಬಂದ್ ಕರೆಗೆ ಬೆಂಬಲಿಸಿ ಇಂದು ವಿವಿಧ ಸಂಘಟನೆಗಳಿಂದ ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಕಳಸಾ ಬಂಡೂರಿ ರೈತ ಹೋರಾಟ ಸಮಿತಿ, ಆಟೋ ಚಾಲಕರ ಸಂಘ, ಹುಬ್ಬಳ್ಳಿ ಧಾರವಾಡ ಮ್ಯಾಕ್ಸಿ ಕ್ಯಾಬ್ ಸಂಘ, ಕಟ್ಟಡ ಕಾರ್ಮಿಕರ ಸಂಘ, ಸಿಪಿಐ, ಸಿಪಿಎಂ, ಕಾಂಗ್ರೆಸ್, ಎಐಟಿಯುಸಿ, ಜೆಡಿಎಸ್, ವಿವಿಧ ದಲಿತ ಹಾಗೂ ಕಾರ್ಮಿಕ ಮತ್ತು ಪ್ರಗತಿಪರ ಸಂಘಟನೆ ಮುಖಂಡರುಗಳು ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಬ್ರಹತ್ ಪ್ರತಿಭಟನೆ ಮಾಡುವ ಮೂಲಕ Éೀಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ನಾಲ್ಕು ತಿಂಗಳಿಂದ ದೆಹಲಿಯಲ್ಲಿ ರೈತರು ಕೃಷಿ ಕಾಯಿದೆ ಹಿಂದೆ ಪಡೆಯುವಂತೆ ಒತ್ತಾಯಿಸಿ ಹಗಲು-ರಾತ್ರಿ, ಚಳಿ-ಮಳಿ ಎನ್ನದೆ ರಸ್ತೆ ಬದಿ ಹೋರಾಟ ಮಾಡುತ್ತಿದ್ದರೂ ಸರ್ಕಾರ ಮೋಕ ಪ್ರೇಕ್ಷಕರಂತೆ ಕುಳಿತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ರೈತರೊಂದಿಗೆ ಚೆಲ್ಲಾಟವಾಡದೆ ತಕ್ಷಣ ಈ ಎಲ್ಲ ಕಾಯ್ದೆಗಳನ್ನು ಹಿಂದೆ ಪಡೆಯಬೇಕೆಂದು ಆಗ್ರಹಿಸಿದರು.
ಅಲ್ಲದೇ ಹಲವು ವರ್ಷಗಳಿಂದ ಕಳಸಾ ಬಂಡೂರಿ ನಾಲಾ ಯೋಜನೆಯು ನೆನೆಗುದಿಗೆ ಬಿದ್ದಿದ್ದು, ಸರ್ಕಾರಗಳು ಈ ಕಾರ್ಯವನ್ನು ಅನುಷ್ಠಾನಗೊಳಿಸಲು ಮೀನಾಮೇಷ ಎಣಿಸುತ್ತಿದ್ದು, ಶೀಘ್ರವೇ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.
ಇದಕ್ಕೂ ಪೂರ್ವದಲ್ಲಿ ಕೆಲ ರೈತ ಸಂಘಟನೆಗಳು ರಸ್ತೆಯನ್ನು ತಡೆಯಲು ಮುಂದಾದವು. ರಸ್ತೆ ತಡೆಯದಂತೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಮುಂದಾದಾಗ ಹೋರಾಟಗಾರರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ಸಂಭವಿಸಿತು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಬಾಬಾಜಾನ್ ಮುಧೋಳ್, ಪೀರಜಾದೆ. ಬಿ. ಎ. ಮುಧೋಳ್, ರಾಜಶೇಖರ್ ಮೆಣಸಿನಕಾಯಿ, ಮೋಹನ್ ಹಿರೇಮನಿ, ವೀರಣ್ಣ ನೀರಲಗಿ, ಈಶ್ವರ್ ಸಿರಸಂಘಿ, ನವೀದ್ ಮುಲ್ಲಾ, ಸಾಗರ್ ಹಿರೇಮನಿ, ಸುಭಾಸ್ ಪೂಜಾರ್, ದೀಪ ಗೌರಿ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.